ಮನೆ ರಾಜ್ಯ ಹಿಂದಿ ಗ್ರೇಡ್ ಬದಲಿಗೆ ಅಂಕ ನೀಡಬೇಕು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ..!!

ಹಿಂದಿ ಗ್ರೇಡ್ ಬದಲಿಗೆ ಅಂಕ ನೀಡಬೇಕು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ..!!

13
0

ಪ್ರಸಕ್ತ ಸಾಲಿನಿಂದಲೇ ಎಸ್‌ಎಸ್ಎಲ್‌ಸಿ ಪರೀಕ್ಷೆಯ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನೇ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಐತಿಹಾಸಿಕ ನಿರ್ದೇಶನ ನೀಡಿದೆ. ಈ ಮೂಲಕ ಕೊನೆಯ ಕ್ಷಣದಲ್ಲಿ ಜಾರಿಗೆ ತರಲು ಉದ್ದೇಶಿಸ ಲಾಗಿದ್ದ ಗ್ರೇಡಿಂಗ್ ಪದ್ಧತಿಗೆ ನ್ಯಾಯಾಲಯ ಬ್ರೇಕ್ ಹಾಕಿದ್ದು, ವಿದ್ಯಾರ್ಥಿಗಳ ಹಿತರಕ್ಷಣೆ ಮಾಡಿದೆ.

ಚಿಕ್ಕಮಗಳೂರಿನ ಸಹನಾ ಆರ್. ನಾಯ್ಕ ಸೇರಿದಂತೆ ಮೂವರು ವಿದ್ಯಾರ್ಥಿಗಳು ಸರ್ಕಾರದ ಗ್ರೇಡಿಂಗ್ ನೀತಿಯನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಇ.ಎಸ್. ನ್ಯಾಯಮೂರ್ತಿ ಇಂದಿರೇಶ್ ಅವರ ಏಕಸದಸ್ಯ ಪೀಠವು, ಪ್ರಸಕ್ತ ಸಾಲಿನಿಂದಲೇ (2025-26) ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳನ್ನು ನೀಡುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು.

2024ರ ಅಕ್ಟೋಬರ್ ಮತ್ತು 2025ರ ಅಕ್ಟೋಬರ್‌ನಲ್ಲಿ ಮಂಡಳಿ ಹೊರಡಿಸಿದ್ದ ಸುತ್ತೋಲೆಯಂತೆ, ತೃತೀಯ ಭಾಷೆಗೆ 100 ಅಂಕಗಳನ್ನು (80 ಲಿಖಿತ + 20 ಆಂತರಿಕ) ನಿಗದಿಪಡಿಸಲಾಗಿತ್ತು.

ಆದರೆ, ಪರೀಕ್ಷೆಯ ಹೊತ್ತಿನಲ್ಲಿ ಸರ್ಕಾರ ದಿಢೀರನೆ ಗ್ರೇಡ್ ನೀಡುವ ತೀರ್ಮಾನ ಕೈಗೊಂಡಿದ್ದನ್ನು ಪ್ರಶ್ನಿಸಲಾಗಿತ್ತು .

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು, ಚಾಲ್ತಿಯಲ್ಲಿರುವ ನಿಯಮಗಳು ಮತ್ತು ಮಾರ್ಗಸೂಚಿಗಳ ಅನ್ವಯವೇ ಪರೀಕ್ಷಾ ಪ್ರಕ್ರಿಯೆ ನಡೆಯಬೇಕೆಂದು ಸ್ಪಷ್ಟಪಡಿಸಿತು.

ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಹಿಂದಿ ಸೇರಿದಂತೆ ತೃತೀಯ ಭಾಷೆಗಳ ಮೌಲ್ಯಮಾಪನದಲ್ಲಿ ಅಂಕಗಳನ್ನೇ ನಮೂದಿಸಬೇಕು ಎಂದು ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದೆ.