✒️..ಅಮಿತ್ ಆರ್ ಆನಂದಪುರ
ಸಾಗರ: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ಭರಾಟೆಯಲ್ಲಿದ್ದ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನ ಮಾಡಿದ್ದ ಆರೋಪಿಯನ್ನು ಸಾಗರ ನಗರ ಪೊಲೀಸರು ಬಂಧಿಸಿ, ಕಳುವಾದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆ ಹುಣಸೂರು ತಾಲ್ಲೂಕಿನ ಕೆಹೆಚ್‌ಬಿ ಕಾಲೋನಿ ನಿವಾಸಿ ಸುಮಿತ್ರಾ (43) ಬಂಧಿತ ಮಹಿಳೆ.
ಪ್ರಕರಣದ ಹಿನ್ನೆಲೆ:
ಸೊರಬ ತಾಲ್ಲೂಕಿನ ಜಡೆ ಗ್ರಾಮದ ಜಯಮ್ಮ (46) ಎಂಬುವವರು ಕಳೆದ ಫೆಬ್ರವರಿ 3ರಂದು ಸಾಗರದ ಜಂಬಗಾರಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಮಾರಿಕಾಂಬ ಜಾತ್ರೆ ನಿಮಿತ್ತ ಬಂದಿದ್ದರು. ಫೆಬ್ರವರಿ 6ರಂದು ಮಧ್ಯಾಹ್ನ ಮರಳಿ ಊರಿಗೆ ಹೋಗಲು ಸಾಗರ ಬಸ್ ನಿಲ್ದಾಣಕ್ಕೆ ಬಂದಿದ್ದ ವೇಳೆ ಈ ಕಳ್ಳತನ ನಡೆದಿದೆ.

ಮಧ್ಯಾಹ್ನ ಸುಮಾರು 1:00 ಗಂಟೆ ಸುಮಾರಿಗೆ ಸೊರಬ ಕಡೆಗೆ ಹೋಗುವ ಬಸ್ ಬಂದಾಗ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು. ಈ ವೇಳೆ ಜಯಮ್ಮ ಅವರು ಬಸ್ ಹತ್ತಿ ಕುಳಿತ ನಂತರ ಬ್ಯಾಗ್ ಪರಿಶೀಲಿಸಿದಾಗ, ಅದರಲ್ಲಿ ಇರಿಸಲಾಗಿದ್ದ 12 ಗ್ರಾಂ ತೂಕದ ಗಣಪತಿ ಡಾಲರ್ ಇರುವ ಚಿನ್ನದ ಸರ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳುವಾದ ಸರದ ಮೌಲ್ಯ ಸುಮಾರು ₹1.30 ಲಕ್ಷ ರೂಪಾಯಿ ಮೌಲ್ಯದ ಎಂದು ಅಂದಾಜಿಸಲಾಗಿದೆ.
ಪೊಲೀಸ್ ಕಾರ್ಯಾಚರಣೆ:
ಈ ಬಗ್ಗೆ ಜಯಮ್ಮ ಅವರು ಸಾಗರ ಟೌನ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಾಗರ ಉಪವಿಭಾಗದ ಎಎಸ್‌ಪಿ ಡಾ. ಬೆನಕಪ್ರಸಾದ್ ಅವರ ಉಸ್ತುವಾರಿಯಲ್ಲಿ ತನಿಖಾ ತಂಡ ರಚಿಸಲಾಗಿತ್ತು.

ಇನ್‌ಸ್ಪೆಕ್ಟರ್ ಪುಲ್ಲಯ್ಯ ರಾಥೋಡ್ ನೇತೃತ್ವದಲ್ಲಿ ಪಿಎಸ್‌ಐ ಜೆ.ಎಚ್.ಶಾಂತರಾಜ್ ಹಾಗೂ ಸಿಬ್ಬಂದಿ ಮೀರಾಬಾಯಿ, ಸನಾವುಲ್ಲ, ಫೈರೋಜ್, ವಿಶ್ವನಾಥ, ಕೃಷ್ಣಮೂರ್ತಿ, ಲೋಕೇಶ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಸುಮಿತ್ರಾಳನ್ನು ಬಂಧಿಸಿ, ಅವಳಿಂದ ಬಂಗಾರದ ಸರವನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದೆ.
















