ಸಾಗರ:ಸಮೀಪದ ಬೇಸೂರು ಗ್ರಾಮದಲ್ಲಿ ಕೇಂದ್ರ ಸರ್ಕಾರ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಪ್ರಸ್ತಾಪವನ್ನು ಕೈಬಿಡದಿದ್ದರೆ ಜನತೆ ಬೀದಿಗಿಳಿದು ಹೋರಾಟ ಮಾಡಿ ಸರ್ಕಾರಗಳಿಗೆ ಬಿಸಿ ಮುಟ್ಟಿಸುವ ಜೊತೆಗೆ, ರೈತರು ‘ದಂಗೆ’ ಎಳುವುದು ನಿಶ್ಚಿತ ಎಂದು ಮಲೆನಾಡು ರೈತರ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ತೀ.ನಾ.ಶ್ರೀನಿವಾಸ್ ಎಚ್ಚರಿಸಿದರು.
ತಾಲ್ಲೂಕಿನ ತುಮರಿಯಲ್ಲಿ ಬಾದಿತ ರೈತರ ಜೊತೆಗೆ ಮುಂದಿನ ಹೋರಾಟ ರೂಪುರೇಷೆ ಕುರಿತು ನೆಡೆದ ಸಮಾಲೋಚನಾ ಸಭೆಯಲ್ಲಿ ಭಾನುವಾರ ಅವರು ಮಾತನಾಡಿದರು.

ಕೇಂದ್ರ, ರಾಜ್ಯ ಸರ್ಕಾರಗಳು ಶರಾವತಿ ಮುಳುಗಡೆ ಸಂತ್ರಸ್ತರ ಜನ ವಸತಿ ಪ್ರದೇಶಗಳನ್ನೇ ಯೋಜನೆಗೆ ಟಾರ್ಗೆಟ್ ಮಾಡಲಾಗುತ್ತಿದೆ. ಮಡೆನೂರು, ಲಿಂಗನಮಕ್ಕಿ, ಶರಾವತಿ ಸಂತ್ರಸ್ತರಿಗೆ ದಶಕಗಳಿಂದ ಭೂಮಿ ಹಕ್ಕು ನೀಡದೆ ವಂಚಿಸಿರುವ ಆಡಳಿತಾರೂಢ ಸರ್ಕಾರಗಳು ಈಗ ಬೇಸೂರು ಗ್ರಾಮದ ರೈತರ ಭೂಮಿಯನ್ನು ಅಣು ವಿದ್ಯುತ್ ಸ್ಥಾವರ ಯೋಜನೆ ಹೆಸರಿನಲ್ಲಿ ಕಬಳಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೂಮಿ ಹಕ್ಕು ವಂಚಿತ ನಿರಾಶ್ರಿತರು, ಬಡ ರೈತರು ವಾಸಿಸುತ್ತಿರುವ ಪ್ರದೇಶವನ್ನು ಉದ್ದೇಶಿತ ಯೋಜನೆಗೆ ಗುರುತಿಸಿರುವುದು ಖಂಡನೀಯ. ಜಿಲ್ಲೆಯ ಸಂಸದರು, ಮಂತ್ರಿಗಳು, ಶಾಸಕರ ಇಬ್ಬಗೆಯ ನೀತಿಯಿಂದ ಇಲ್ಲಿನ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸ್ಥಳಿಯ ಶಾಸಕರಿಗೆ ಪಂಪ್ಡ್ ಸ್ಟೋರೇಜ್ ಪರ ಅಣು ಸ್ಥಾವರ ವಿರೋಧಿಸುವುದು ಕಾಯಕ ವಾಗಿದೆ. ಪರಿಸರ ಉಳಿಸಿಕೊಂಡು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿ ಮಾಡುತ್ತೇವೆ ಎನ್ನುವ ಜಿಲ್ಲೆಯ ಸಂಸದರು ಯಾವ ಲಾಭಿಗೆ ಮಣಿದಿದ್ದಾರೆ ಎಂದು ಪ್ರಶ್ನಿಸಿದರು.
60 ವರ್ಷಗಳಿಂದ ಕೆಪಿಸಿ ಭೂಮಿ ಸಾಗುವಳಿ ಮಾಡುತ್ತಿರುವ ರೈತರ ಭೂಮಿಯನ್ನು ಹಾಗೂ ಸೊಪ್ಪಿನ ಬೆಟ್ಟವನ್ನು ಪರಿಭಾವಿತ ಅರಣ್ಯಕ್ಕೆ ಸೇರಿಸಲು ಪರಿಸರವಾದಿ ಅನಂತ ಹೆಗಡೆ ಅಶೀಸರ ಅರಣ್ಯ ಇಲಾಖೆಗೆ ಪತ್ರ ಬರೆದ್ದಾರೆ. ಇದರಿಂದ 15 ಸಾವಿರ ಕುಟುಂಬಗಳು ಬೀದಿಗೆ ಬೀಳುತ್ತಾರೆ. ರೈತರ ಸಮಸ್ಯೆ ಬಗ್ಗೆ ಒಂದು ದಿನವೂ ಧ್ವನಿ ಎತ್ತದೇ, ಹೋರಾಟ ಮಾಡದೇ ಇರುವ ನಕಲಿ ಪರಿಸರ ವಾದಿಗಳಿಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳು ಉದ್ದೇಶಿತ ಯೋಜನೆ ವಿರುದ್ದ ಸದನದಲ್ಲಿ ಮಾತನಾಡದೇ ಹಾದಿ ಬೀದಿಯಲ್ಲಿ ಮಾತನಾಡಿದರೇ ಪ್ರಯೋಜನ ಇಲ್ಲ, ಮಲೆನಾಡಿಗೆ ಹೊಸ ಹೊಸ ಯೋಜನೆ ಜಾರಿ ಮಾಡುವ ಮೂಲಕ ಜನರು ಕಾನೂನು ಕೈಗೆತ್ತಿಕೊಳ್ಳುವ ಪರಿಸ್ಥಿತಿಗೆ ಸರ್ಕಾರವೇ ಕಾರಣ ಆಗುತ್ತಿದೆ. ಯಾವುದೇ ಕಾರಣಕ್ಕೂ ಉದ್ದೇಶಿತ ಯೋಜನೆ ಜಾರಿಗೆ ಬಿಡಲಾರೆವು ಎಂದು ಅಶೋಕ ಬೇಸೂರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಸಭೆಯಲ್ಲಿ ಪ್ರಮುಖರಾದ ಅಶೋಕ ಬೇಸೂರು, ಅರುಣ್ ಕರೂರು, ನಾಗರಾಜ ಇಕ್ಕೇರಿ, ಅಶೋಕ ಕೊಡಸರ, ಮಂಜಪ್ಪ ಆರನ ಬೈಲು ಇದ್ದರು.
















