
✒️..ಅಮಿತ್ ಆರ್ ಆನಂದಪುರ
ಆನಂದಪುರ : ಸಮೀಪದ ಸುಳಗೋಡು ಗ್ರಾಮದ ನಿವಾಸಿ ವೀರಭದ್ರ ಅವರ ಪತ್ನಿ ಸ್ವಾತಿ (26) ಅವರು ಆರು ತಿಂಗಳ ಗರ್ಭಿಣಿಯಾಗಿದ್ದು, ಶನಿವಾರ ಹಾವು ಕಚ್ಚಿದ ಪರಿಣಾಮ ಮೃತಪಟ್ಟ ಘಟನೆ ನಡೆದಿದೆ.
ಘಟನೆಯ ಸುದ್ದಿ ತಿಳಿದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸುಳಗೋಡು ಗ್ರಾಮಕ್ಕೆ ಇಂದು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಸೂಚಿಸಿ ಕುಟುಂಬದ ದುಃಖವನ್ನು ಕಂಡು ವೈಯಕ್ತಿಕ ಧನಸಹಾಯ ನೀಡಿದರು.

ಪರಿಹಾರಕ್ಕೆ ಸೂಚನೆ:
ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕರು, ಸರ್ಕಾರದಿಂದ ಮೃತರ ಕುಟುಂಬಕ್ಕೆ ದೊರಕಬೇಕಾದ ಗರಿಷ್ಠ ಪರಿಹಾರವನ್ನು ಯಾವುದೇ ವಿಳಂಬವಿಲ್ಲದೆ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಾಗೃತಿ ಅಗತ್ಯ:

ಹಾವು ಕಚ್ಚಿದ ಸಂದರ್ಭಗಳಲ್ಲಿ ತಕ್ಷಣ ಚಿಕಿತ್ಸೆ ನೀಡಿದರೆ ಪ್ರಾಣ ಉಳಿಸಬಹುದು. ತಾಲೂಕಿನ ಎಲ್ಲಾ ಆಸ್ಪತ್ರೆಗಳಲ್ಲೂ ಅಗತ್ಯ ಚಿಕಿತ್ಸಾ ಸೌಲಭ್ಯಗಳಿವೆ. ಮಾಹಿತಿ ಕೊರತೆಯಿಂದ ವಿಳಂಬವಾಗುತ್ತಿದ್ದು, ಇದರಿಂದ ಇಂತಹ ದುರಂತಗಳು ಸಂಭವಿಸುತ್ತಿವೆ. ಆದ್ದರಿಂದ ಹಾವು ಕಚ್ಚಿದ ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಮಂಡಗಳಲೆ ಗಣಪತಿ, ಉಮೇಶ್, ಗಜೇಂದ್ರ ಯಾದವ್, ಅಶ್ವಿನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.













