ಭದ್ರಾವತಿ : ಸುಮಾರು 6 ವರ್ಷಗಳ ಹಿಂದೆ ತೆಂಗಿನ ತೋಟವೊಂದರಲ್ಲಿ ಯುವಕನೊಬ್ಬನ ಮೇಲೆ ಮಾರಾಕಾಸ್ತ್ರಗಳಿಂದ ನಡೆಸಲಾಗಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಯುವಕರಿಗೆ 3 ವರ್ಷ ಜೈಲು ಶಿಕ್ಷೆ ಹಾಗು ದಂಡ ವಿಧಿಸಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ತಾಲೂಕಿನ ಜಿಂಕಲೈನ್ ವೀರಾಪುರ ರಸ್ತೆಯಲ್ಲಿರುವ ಬಾಬುರವರ ಮನೆ ಹಿಂಭಾಗದ ತೆಂಗಿನತೋಟದಲ್ಲಿ ಮೇ.10, 2020 ರಂದು ಕಿರಣ್ (29), ಮಂಜು ನಾಥ್ (25) ಮತ್ತು ಅರುಣ (24) ರವರು ನಿಂತಿದ್ದಾಗ ಅಜೇಯ ಅಲಿಯಾಸ್ ಅಜ್ಜಿ(24 ), ತೇಜು ಅಲಿಯಾಸ್ ತೇಜಸ್ವಿ (22), ಮನು ಅಲಿಯಾಸ್ ಗೊಣ್ಣೆ ಮಧು ಅಲಿಯಾಸ್ ಮನೋಜ್ (22),ಆದರ್ಶ ಅಲಿಯಾಸ್ ಆದು(25), ಅರುಣ(20) ಪಾನಿಪುರಿ ರಂಗ ಅಲಿಯಾಸ್ ರಂಗ ಅಲಿಯಾಸ್ ಪಾನಿಪುರಿ(25)ರವರು ಮಂಜುನಾಥ್ ರವರ ಮೇಲಿನ ಹಳೆಯ ದ್ವೇಷದ ಹಿನ್ನಲೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಅವಾಚ್ಯ ಶಬ್ದಗಳೊಂದಿಗೆ ಹಲ್ಲೆ ನಡೆಸಿದ್ದರು.
ಮಂಜುನಾಥ್ ಗಂಭೀರವಾಗಿ ಗೊಂಡಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆಗಿನ ತನಿಖಾಧಿಕಾರಿಯಾಗಿದ್ದ ಸಹಾಯಕ ಠಾಣಾ ನಿರೀಕ್ಷಕ ಕುಬೇರಪ್ಪರವರು ಪ್ರಕರಣದ ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪಿ. ರತ್ನಮ್ಮ ವಾದ ಮಂಡಿಸಿದ್ದರು.
ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ಮೇ.4 ರಂದು ಮೊದಲ ಆರೋಪಿತನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಮೊದಲ ಆರೋಪಿ ಸೇರಿ ಒಟ್ಟು 6 ಆರೋಪಿತರಿಗೆ 3 ವರ್ಷ ಕಠಿಣ ಕಾರಾವಾಸ ಮತ್ತು ಒಟ್ಟು 2,30,000 ರು. ದಂಡ ವಿಧಿಸಿದ್ದು, ನೊಂದವರಾದ ಮಂಜುನಾಥ್‌ರವರಿಗೆ 1,50,000 ರು. ಪರಿಹಾರ ಕೊಡಲು ಆದೇಶಿಸಿರುತ್ತಾರೆ.
















