Home Blog ಶಾಸಕರು ಭ್ರಷ್ಟ ಹಿಂಬಾಲಕರ ಮೂಲಕ ಪ್ರತಿಕ್ರಿಯೆ ನೀಡಿಸುತ್ತಿರುವುದು ಸರಿಯಲ್ಲ: ರತ್ನಾಕರ್ ಹೊನಗೋಡು..!!

ಶಾಸಕರು ಭ್ರಷ್ಟ ಹಿಂಬಾಲಕರ ಮೂಲಕ ಪ್ರತಿಕ್ರಿಯೆ ನೀಡಿಸುತ್ತಿರುವುದು ಸರಿಯಲ್ಲ: ರತ್ನಾಕರ್ ಹೊನಗೋಡು..!!

9
0

✒️..ಅಮಿತ್ ಆರ್ ಆನಂದಪುರ

ಸಾಗರ (ಆನಂದಪುರ): ರೈತನಿಗೆ ಆಗಿರುವ ಅನ್ಯಾಯದ ಬಗ್ಗೆ ಶಾಸಕ ಗೋಪಾಲಕೃಷ್ಣ ಬೇಳೂರು ನೇರವಾಗಿ ಉತ್ತರ ನೀಡಬೇಕಾಗಿತ್ತು. ಆದರೆ ಕೆಲವು ಭ್ರಷ್ಟ ಹಿಂಬಾಲಕರ ಮೂಲಕ ಪ್ರತಿಕ್ರಿಯೆ ನೀಡುತ್ತಿರುವುದು ಎಷ್ಟು ಸರಿ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಪ್ರಶ್ನಿಸಿದರು.

ಆನಂದಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಾಬ್ದಾರಿ ಹೊಂದಿರುವ ಶಾಸಕರು ಬಡ ರೈತನ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನ್ಯಾಯ ಒದಗಿಸುವ ಕೆಲಸ ಮಾಡಬೇಕಾಗಿತ್ತು ಎಂದು ಹೇಳಿದರು. ಅಡ್ಡೇರಿ ಗ್ರಾಮದಲ್ಲಿ ನಡೆದ 15 ಗುಂಟೆ ಜಮೀನು ಒತ್ತುವರಿ ತೆರವು ಕಾರ್ಯವನ್ನು ಉಲ್ಲೇಖಿಸಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ರೈತನಿಗೆ ಆದ ಅನ್ಯಾಯದ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕಾಗಿದ್ದ ಶಾಸಕರು, ನೇರ ಪ್ರತಿಕ್ರಿಯೆ ನೀಡದೆ ಭ್ರಷ್ಟಾಚಾರದಲ್ಲಿ ಮುಳುಗಿರುವ ತಮ್ಮ ಹಿಂಬಾಲಕರ ಮೂಲಕ ಪ್ರತಿಕ್ರಿಯೆ ನೀಡುತ್ತಿರುವುದು ಸರಿಯಲ್ಲ ಎಂದು ಟೀಕಿಸಿದರು.

ಅಡ್ಡೇರಿ ಗ್ರಾಮದಲ್ಲಿ ನಡೆದ ಘಟನೆ ಕುರಿತು ಆಡಳಿತ ಪಕ್ಷದವರು ರೈತರಿಗೆ ನ್ಯಾಯ ಒದಗಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ನಂತರವೂ ಅರಣ್ಯ ಅಧಿಕಾರಿಗಳು ರೈತರಿಗೆ ತೊಂದರೆ ನೀಡಿರುವುದು ಏಕೆ ಎಂಬ ಪ್ರಶ್ನೆಯನ್ನು ಅವರು ಎತ್ತಿದರು.

“ಆಡಳಿತ ಪಕ್ಷದವರು ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಕೆಲಸ ಮಾಡುತ್ತಿದ್ದಾರೆ. ಬಡ ರೈತರ ರಕ್ಷಣೆಗಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದರೆ ನಾವು ಪ್ರತಿಭಟನೆಗೆ ಮುಂದಾಗುತ್ತಿರಲಿಲ್ಲ. ನಾವು ರಾಜಕಾರಣ ಮಾಡಲು ಹೊರಟಿದ್ದರೆ ಅರಣ್ಯ ಭೂಮಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ವಿಚಾರವನ್ನೇ ದೊಡ್ಡ ಮಟ್ಟದಲ್ಲಿ ಪ್ರಸ್ತಾಪಿಸಬಹುದಾಗಿತ್ತು,” ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

“ರೈತರ ವಿಷಯದಲ್ಲಿ ನಾವು ಯಾವುದೇ ರೀತಿಯ ರಾಜಕಾರಣ ಮಾಡುವುದಿಲ್ಲ. ರೈತರ ಪರವಾಗಿ ಹೋರಾಟ ಮುಂದುವರಿಸಿ, ಯಾವುದೇ ಬೆದರಿಕೆಗಳಿಗೆ ಹೆದರದೆ ಅವರ ರಕ್ಷಣೆಗಾಗಿ ನಿಲ್ಲುತ್ತೇವೆ,” ಎಂದು ಹೇಳಿದರು.

ಕಾಗೋಡು ತಿಮ್ಮಪ್ಪ, ಬಿ. ಎಸ್. ಯಡಿಯೂರಪ್ಪ ಹಾಗೂ ಎಸ್. ಬಂಗಾರಪ್ಪ ಅವರಂತಹ ರೈತ ನಾಯಕರು ಹೋರಾಟ ನಡೆಸಿದ ಕ್ಷೇತ್ರದಲ್ಲಿ ರೈತರಿಗೆ ಅನ್ಯಾಯವಾಗುತ್ತಿರುವುದು ವಿಷಾದನೀಯ ಎಂದು ಅವರು ಅಭಿಪ್ರಾಯಪಟ್ಟರು.

“ಚುನಾವಣೆಯ ಸಮಯದಲ್ಲಿ ಮನೆ ಬಾಗಿಲಿಗೆ ಬರುವ ನಾಯಕರು, ರೈತರಿಗೆ ಅನ್ಯಾಯವಾದ ಸಂದರ್ಭದಲ್ಲಿ ಭೇಟಿ ನೀಡದೇ ಇರುವುದು ವಿಪರ್ಯಾಸ,” ಎಂದು ಟೀಕಿಸಿದರು.

ಅಭಿವೃದ್ಧಿ ವಿಚಾರವಾಗಿ ಬರುವುದಾದರೆ “ಶಾಸಕರು ಭೂಮಿ ಪೂಜೆಗೆ ಬಂದಾಗ ಜನರು ಸೇರುವುದಿಲ್ಲದೆ ಕಾರ್ಯಕ್ರಮ ರದ್ದಾಗಿ ವಾಪಸ್ ಹೋದ ಘಟನೆಗಳೂ ನಡೆಯುತ್ತಿವೆ. ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜನರೇ ಪಾಠ ಕಲಿಸುತ್ತಾರೆ,” ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಪ್ಪಗೌಡ, ದಲಿತ ಸಮಿತಿಯ ಮುಖಂಡ ರೇವಪ್ಪ, ಬಿಜೆಪಿ ಮುಖಂಡರಾದ ರೇವಣಸಿದ್ದಯ್ಯ ಹಾಗೂ ರವಿ ಗೌಡ ಉಪಸ್ಥಿತರಿದ್ದರು.