✒️.. ಅಮಿತ್ ಆರ್ ಆನಂದಪುರ
ಶಿವಮೊಗ್ಗ: ಪುದುಚೆರಿಯಲ್ಲಿ ಮೇ 16 ಮತ್ತು 17ರಂದು ನಡೆದ 15 ವರ್ಷದೊಳಗಿನ ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಶಾಲೆಯ ಇಬ್ಬರು ಕ್ರೀಡಾಪಟುಗಳು ಬಂಗಾರದ ಪದಕ ಗೆದ್ದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಅನಿಲ್‌ಕುಮಾರ್ ಸೌಧಿ ಅವರು ಫ್ರೀಸ್ಟೈಲ್ ವಿಭಾಗದ 41 ಕೆ.ಜಿ. ತೂಕದ ಸ್ಪರ್ಧೆಯಲ್ಲಿ ಹಾಗೂ ಮನೋಜ್ ಭಜಂತ್ರಿ ಅವರು ಗ್ರೀಕೋ ರೋಮನ್ ವಿಭಾಗದ 52 ಕೆ.ಜಿ. ತೂಕದ ಸ್ಪರ್ಧೆಯಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಈ ಇಬ್ಬರು ಕ್ರೀಡಾಪಟುಗಳು ಬಾಗಲಕೋಟೆ ಮೂಲದವರು ಶಿವಮೊಗ್ಗ ಜಿಲ್ಲೆಯ ಕ್ರೀಡಾ ವಸತಿ ನಿಲಯದಲ್ಲಿ ತರಬೇತಿ ಪಡೆಯುತ್ತಿದ್ದು, ಅವರ ಸಾಧನೆಗೆ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾ ನಾಯ್ಕ್, ಸನ್ಮಾನಿಸಿ ಮಾತನಾಡಿದರು.

“ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟುಗಳು ನಿರಂತರಪರಿಶ್ರಮ ಮತ್ತು ಶಿಸ್ತಿನ ಮೂಲಕ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ದಕ್ಷಿಣ ಭಾರತ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರುವ ಅನಿಲ್‌ಕುಮಾರ್ ಸೌಧಿ ಮತ್ತು ಮನೋಜ್ ಭಜಂತ್ರಿ ಅವರ ಸಾಧನೆ ಇತರ ಕ್ರೀಡಾಪಟುಗಳಿಗೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲೆಯ ಹಾಗೂ ರಾಜ್ಯದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಲಿ ಎಂದು ಹಾರೈಸುತ್ತೇನೆ,”ಎಂದರು.
ಕುಸ್ತಿ ತರಬೇತುದಾರರಾದ ರಾಜಪ್ಪ ಎಂ. ಫಳಕೆ ಮತ್ತು ಸಂಜಯ್ ಈ. ಸೇರಿದಂತೆ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
















