ಶಾಲಾ ಮಾಲಿಕೆ-19
ಶಿಕ್ಷಣ ಪಯಣ
ಶರಾವತಿ ಹಿನ್ನೀರಿನ ಆಗಿನ್ನು ಮುಳುಗಡೆಯಾಗಿರಲಿಕ್ಕಿಲ್ಲ. ಸಾಗರವು ಅಷ್ಟೊಂದು ಬೆಳದ ನಗರವಲ್ಲ. ಸಾಗರಕ್ಕೂ ಮುಂಚಿತವಾಗಿ ಮಡೆನೂರು(ಹಿರೇಬಾಸ್ಕರ) ಊರು ಬಹು ದೊಡ್ಡದಾಗಿತ್ತು ಎನ್ನುವುದನ್ನು ನಾವ್ಯಾರು ನೋಡಿಲ್ಲ. ಇಲ್ಲಿನ ಬದುಕಿದವರು ಬಹಳಷ್ಟು ಜನ ಈಗಲೂ ಇದ್ದಾರೆ. ಶರಾವತಿ ನದಿಯ ಒಂದು ಭಾಗದಲ್ಲಿ ಮಡೆನೂರು ಮತ್ತೊಂದು ಭಾಗದಲ್ಲಿ ಕರಪುರ ಎನ್ನುವ ಅತ್ಯಂತ ಶ್ರೀಮಂತ ಐತಿಹಾಸಿಕ ಊರು ಕರೂರು ಪ್ರದೇಶವಾಗಿತ್ತು.
ಈ ಪ್ರದೇಶದ ಅನೇಕ ಗ್ರಾಮಗಳಲ್ಲಿ ತುಮರಿಯೂ ಒಂದಾಗಿತ್ತು. ಸಾಗರ ಹಾಗೂ ಮಡೆನೂರಿಗೆ ಇನ್ನೀತರೆ ಊರುಗಳಿಗೆ ಹೋಗಿ ಬರಬೇಕಾದರೆ ಶರಾವತಿ ನದಿಯಲ್ಲಿ ದೋಣಿ ಮುಖಾಂತರ ದಾಟಬೇಕಿತ್ತು. ಅದು ತುಂಬಾ ಕಷ್ಟದಾಯಕವಾದ ಕೆಲಸ. ಇನ್ನೂ ಈ ಊರುಗಳಿಗೆ ಸುತ್ತಾಡಿ ಬರಬೇಕಾದರೆ ನಿಟ್ಟೂರು ಮಾರ್ಗ ಇಲ್ಲವಾದರೆ ಕೋಗಾರು ಮಾರ್ಗ ಅದು ದಟ್ಟವಾದ ಕಾಡು ರಸ್ತೆಗಳಿಲ್ಲದ ಮಾರ್ಗ, ಕಾಡು ಮೃಗಗಳ ಕಾಟ ಹೇಗೆ ಬಂದು ಹೋಗುವುದು..? ಆ ದಿನಗಳಲ್ಲಿನ ಈ ಭಾಗದ ಬದುಕನ್ನು ನೆನಪಿಸಿಕೊಳ್ಳುವುದೇ ಕಷ್ಟ..
ಇಂತಹ ಪ್ರದೇಶದಲ್ಲಿ 108 ವರ್ಷಗಳನ್ನು ಕಳೆದ ದಿನಗಳನ್ನು ನೆನಪಿಸಿಕೊಳ್ಳುವುದೇ ಕಷ್ಟವಾದ ಸಂದರ್ಭ. 1919 ಮೈಸೂರು ಸಂಸ್ಥಾನದ ದಿವಾನರ ಆಡಳಿತದ ಸಂದರ್ಭ ಅದು ನಾಲ್ವಡಿ ಕೃಷ್ಣರಾಜ ಒಡೆಯರು ಆಳ್ವಿಕೆಯ ಕಾಲ ಸರ್.ಎಂ.ವಿಶ್ವೇಶ್ವರಯ್ಯ ದಿವಾನರಾಗಿದ್ದ ದಿನಗಳು. ಆ ದಿನಗಳಲ್ಲಿ ಶಿಕ್ಷಣಕ್ಕೆ ವಿಶೇಷವಾದ ಒತ್ತು ಕೋಡುತ್ತಿದ್ದರು. ವಿಶೇಷವಾಗಿ ಗ್ರಾಮಕ್ಕೊಂದು ಶಾಲೆ ಎನ್ನುವ ಕಲ್ಪನೆಯಲ್ಲಿ ಶಾಲೆಗಳನ್ನು ತೆರೆಯುವ ಮೂಲಕ ಸಾರ್ವತ್ರಿಕ ಶಿಕ್ಷಣವನ್ನು ಕೊಡುತ್ತಿದ್ದರು.

ಹಾಗಾಗಿ ಮೈಸೂರು ಸಂಸ್ಥಾನದ ಆಡಳಿತದ ಕಾಲಾವದಿಯಲ್ಲಿ ಸಾಕಷ್ಟು ಶಾಲೆಗಳು ಆರಂಭವಾಗಿವೆ ಎನ್ನುವುದು ಇತಿಹಾಸ. ಅಂತಹ ಅನೇಕ ಶಾಲೆಗಳಲ್ಲಿ ಶರಾವತಿ ಹಿನ್ನೀರಿನ ಪ್ರದೇಶದ ತುಮರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮುಖ್ಯವಾಗಿದೆ.
ಒಂದು ಕಾಲದಲ್ಲಿ ಈ ಪ್ರದೇಶವು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾಗಿತ್ತು ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ತುಮರಿಯಲ್ಲಿ ಆರಂಭವಾದ ಶಾಲೆಗೆ ಈ ಭಾಗದಲ್ಲಿ ಶೈಕ್ಷಣಿವಾಗಿ ಕಣ್ಣು ತೆರೆದಂತಾಯಿತು. ಸರ್ವರಿಗೂ ಶಿಕ್ಷಣ ದೊರಕುವಂತಾಯಿತು. ಇಂತಹ ಶಾಲೆ 108 ವಸಂತಗಳನ್ನು ಕಳೆದಿದೆ ಎಂದರೆ ನಿಜವಾಗಿಯೂ ಹೆಮ್ಮೆ ಎನಿಸುತ್ತದೆ.
ಮಲೆನಾಡಿನ ಶರಾವತಿ ನದಿಗೆ 1939 ರಲ್ಲಿ ಜೋಗದಲ್ಲಿ ಮಡೆನೂರು(ಹಿರೇಭಾಸ್ಕರ್ ಅಣೆಕಟ್ಟು ನಿರ್ಮಾಣಕ್ಕೆ) ನಾಲ್ವಡಿ ಕೃಷ್ಣರಾಜ ಒಡೆಯರ್ ಅಡಿಗಲ್ಲಿ ಹಾಕಿದ್ದು ಇದು 1948 ರಲ್ಲಿ ಮುಕ್ತಾಯವಾಗಿ 1949 ರಲ್ಲಿ ಲೋಕಾರ್ಪಾಣೆ ಆಗಿದ್ದು ಶರಾವತಿ ನದಿಗೆ ಮೊದಲ ಅಣೆಕಟ್ಟು ನಿರ್ಮಾಣ ಎನ್ನುವ ಹೆಗ್ಗಳಿಕೆ ಬೇರೆ.ಇದು ಇತಿಹಾಸದ ಪುಟಗಳಲ್ಲಿ ಸೇರಿತು ನಂತರ 1964 ರಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಬಹುದೊಡ್ಡದಾದ ಯೋಜನೆ ಇದಾಗಿತ್ತು ಇದರಿಂದ ಸುಮಾರು 70 ಕಿಮೀ ವ್ಯಾಪ್ತಿ ಮುಳುಗಡೆ ಆವರಿಸಿತು. ಈ ಭಾಗದಲ್ಲಿ ಅನೇಕ ಊರುಗಳು ಮುಳುಗಡೆಯಾದವು ಎನ್ನುವುದು ಹಳೆಯ ಮಾತುಗಳು.
ಅದಾದ ನಂತರ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾದ ನಂತರ ಮಡೆನೂರು ಅಣೆಕಟ್ಟು ಮುಳುಗಿತು ಅದರ ಜೊತೆಗೆ ಶರಾವತಿ ಹಿನ್ನೀರಿನಿಂದ ಮುಳುಗಡೆ ಪ್ರದೇಶ ವಿಸ್ತಾರವಾಯಿತು. ಈ ಭಾಗದಲ್ಲಿ ಜನರ ಜೀವನ ಮತ್ತಷ್ಟು ಜಟೀಲವಾಗಿತ್ತು. ಆದರೆ ಶಿಕ್ಷಣದ ಬಗ್ಗೆ ಒಂದಷ್ಟು ಒಲವು ಇದ್ದುದರಿಂದ ತುಮರಿಯಲ್ಲಿ ಆರಂಭವಾಗಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನೇಕರು ದಾಖಲಾಗಿ ಶಿಕ್ಷಣವನ್ನು ಪಡೆದವರು ಈ ಭಾಗದಲ್ಲಿ ಸಾಕಷ್ಟು ಜನರಿದ್ದಾರೆ.
ಆರಂಭದಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಂದ ಆರಂಭವಾಗಿದ್ದ ಈ ಶಾಲೆ ನಂತರ ದಿನಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಯಿತು. ಈ ಶಾಲೆಯಲ್ಲಿ ಓದಿದ ಅನೇಕರು ಉನ್ನತ ಸ್ಥಾನವನ್ನು ಪಡೆದಿದ್ದಾರೆ. ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದಾರೆ, ಉದ್ಯಮಿಗಳಾಗಿದ್ದಾರೆ, ಉತ್ತಮ ಕೃಷಿಕರಾಗಿದ್ದಾರೆ ಒಳ್ಳೆಯ ಸಂಸ್ಕಾರಯುತ ವ್ಯಕ್ತಿಗಳಾಗಿದ್ದಾರೆ. ಈ ಶಾಲೆಯಲ್ಲಿ ಓದಿ ಬೆಳೆದವರ ಪಟ್ಟಿ ದೊಡ್ಡದಿದೆ.

ಆ ದಿನಗಳಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದ ದಿನಗಳಲ್ಲಿ ಅದೆಷ್ಟೋ ದೂರ ಶಾಲೆಗೆ ನಡೆದು ಬಂದು ಕಲಿಯ ಬೇಕಿತ್ತು. ಅಂತಹ ಸವಾಲುಗಳನ್ನೆಲ್ಲ ಎದುರಿಸಿ ಶಾಲೆಯಲ್ಲಿ ಕಲಿತ
ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಈ ಶಾಲೆ ಶತಮಾನಗಳನ್ನು ದಾಟಿದೆ ಎಂದರೆ ಇದರ ಹಿಂದೆ ಅನೇಕ ಶಿಕ್ಷಕರ, ಈ ಭಾಗದ ಗಣ್ಯರ, ಹೋರಾಟಗಾರರ ಪರಿಶ್ರಮ ಇದೆ. ಇಲಾಖೆಯ ಮಾರ್ಗ ದರ್ಶನವಿದೆ, ಜನಪ್ರತಿನಿಧಿಗಳ ಪ್ರೋತ್ಸಾಹವಿದೆ, ಒಟ್ಟಾರೆ ಶರಾವತಿ ಹಿನ್ನೀರ ಜನರ ಬಾಳಿಗೆ ಬೆಳಕಾದ ವಿದ್ಯಾ ದೇಗುಲ ಪ್ರಸ್ತುತ ದಿನಗಳಲ್ಲಿ ತಮ್ಮದೆಯಾದ ರೀತಿಯಲ್ಲಿ ಕ್ರಿಯಾಶೀಲವಾಗಿ ಸದಾ ಚಟುವಟಿಕೆಗಳಿಂದ ಕೂಡಿದ ವಿದ್ಯಾ ಕೇಂದ್ರವಾಗಿ ಕಂಗೊಳಿಸುತ್ತಿದೆ.
ಇಂತಹ ಶತಮಾನದ ಶಾಲೆಯನ್ನು ಮತ್ತಷ್ಟು ಅಭಿವೃದ್ದಿಪಡಿಸುವ ಕೆಲಸ ಸಮುದಾಯದ ಸಹಭಾಗಿತ್ವದಲ್ಲಿ ಆಗಬೇಕಿದೆ. ಇಂದು ಜನಾಕರ್ಷಣೆಯ ಕೇಂದ್ರವಾಗಿರುವ ಸಿಗಂದೂರು ಕ್ಷೇತ್ರ, ದೇಶ ವಿದೇಶಗಳಲ್ಲಿರುವ ಹಾಗೂ ರಾಜ್ಯದ ಉದ್ದಗಲಕ್ಕೂ ಇರುವ ಈ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು, ಸಮುದಾಯ, ಸ್ಥಳೀಯ ಸಂಸ್ಥೆಗಳು ಕೈ ಜೋಡಿಸಿದಲ್ಲಿ ಅತ್ಯಾಧುನಿಕ ಶಾಲೆಯನ್ನಾಗಿ ರೂಪಿಸಲು ಸಾಧ್ಯವಾಗುತ್ತದೆ.
ನಮ್ಮೂರ ಶಾಲೆ ಎಂದರೆ ಅದು ಎಲ್ಲಾರಿಗೂ ಅಚ್ಚು ಮೆಚ್ಚು..ಒಂದು ರೀತಿಯಲ್ಲಿ ಪುಳಕ, ಅದೆನೋ.. ನನ್ನದೆನ್ನುವ ಭಾವುಕ..ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಸಂತಸ ಯಾರಿಗೆ ತಾನೆ ಇರುವುದಿಲ್ಲ ? ಶತಮಾನಗಳ ಕಾಲ ಸಾಗಿ ಬಂದ ಈ ಶಾಲೆಗೆ ಕೈ ಮುಗಿದು ಕೈ ಜೋಡಿಸಬೇಕಿದೆ.
ಶತಮಾನದ ಶಾಲೆಗೆ ನೂರು ನಮಸ್ಕಾರಗಳು…
ಲೇಖನ:
ವಿ.ಟಿ.ಸ್ವಾಮಿ
ಶಿಕ್ಷಣ ಸಂಯೋಜಕರು, ಸಾಗರ
ಎಂ.ಎ.ಕನ್ನಡ, ಎಂ.ಎ.ಪ್ರಾಕೃತ
ಪಿ.ಜಿ.ಡಿಪ್ಲಮೋ ಇನ್ ಜರ್ನಲಿಸಂ
ಎಂ.ಎ.ಎಂ.ಸಿ.ಜೆ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ
ಮೊ: 9480916635
















