ಸಾಗರ, ಜೂ.17: ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಸದಾನಂದ ಸ್ವಾಮಿ ಸಿ. ಹಾಗೂ ಇಲಾಖೆಯ ಸಿಬ್ಬಂದಿ ವರ್ಗದವರು ಇತ್ತೀಚೆಗೆ ತುಮರಿಯ ಹಾಳಸಸಿ ಶಾಲೆಯ 1ನೇ ತರಗತಿ ವಿದ್ಯಾರ್ಥಿ ತ್ರಿಲೋಕ ಜೈನ್ ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿ ಹಿಂತಿರುಗುವ ವೇಳೆ ಮಾನವೀಯತೆ ಮೆರೆದ ಘಟನೆ ನಡೆದಿದೆ.
ಸಂಜೆ ವೇಳೆ ಬ್ಯಾಕೋಡು ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿ ಏಕಾಂತ ಎಂಬುವವರು ಏಕಾಏಕಿ ಎದೆನೋವು ಇದೆ ಎಂದು ತಿಳಿಸಿದ್ದಾನೆ. ತಕ್ಷಣವೇ ಸ್ಪಂದಿಸಿದ ಬಿಇಓ ಸದಾನಂದ ಸ್ವಾಮಿ ಅವರು ಇಲಾಖೆಯ ವಾಹನದಲ್ಲೇ ವಿದ್ಯಾರ್ಥಿಯನ್ನು ಬ್ಯಾಕೋಡು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.

ನಂತರ ಹೆಚ್ಚಿನ ಪರೀಕ್ಷೆಗಾಗಿ ತುಮರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಇಸಿಜಿ ಪರೀಕ್ಷೆ ನಡೆಸುವಂತೆ ವ್ಯವಸ್ಥೆ ಮಾಡಿದರು. ವಿದ್ಯಾರ್ಥಿಯ ಆರೋಗ್ಯ ಸುಧಾರಿಸುವವರೆಗೆ ಆಸ್ಪತ್ರೆಯಲ್ಲೇ ಇದ್ದು ಧೈರ್ಯ ತುಂಬಿದರು.
ಬಳಿಕ ವಿದ್ಯಾರ್ಥಿ ಏಕಾಂತನನ್ನು ಬ್ಯಾಕೋಡು ಹಾಸ್ಟೆಲ್ ಸಹಾಯಕ ಮಂಜಪ್ಪ ಹಾಗೂ ಪ್ರೌಢಶಾಲಾ ಶಿಕ್ಷಕ ಶ್ರೀಧರ ಅವರೊಂದಿಗೆ ಸುರಕ್ಷಿತವಾಗಿ ಕಳುಹಿಸಿಕೊಟ್ಟರು.
ಈ ಸಂದರ್ಭದಲ್ಲಿ ಟಿಪಿಇಓ ರಮೇಶ್, ಇಸಿಒ ದಿನೇಶ್, ವಿ.ಟಿ. ಸ್ವಾಮಿ, ಸಿಆರ್ಪಿ ಪ್ರಸನ್ನ, ಚಂದ್ರಪ್ಪ ಹಾಗೂ ಮಹಾಬಲೇಶ ಉಪಸ್ಥಿತರಿದ್ದರು.
ಜಾಹೀರಾತು.













