Home Shivamogga Sagara ಸಾಗರ ತಾಲೂಕಿನ ಅಂಬಾರಗುಡ್ಡದ ತಪ್ಪಲಿನಲ್ಲೊಂದು ಸರ್ಕಾರಿ ಶಾಲೆ..!!

ಸಾಗರ ತಾಲೂಕಿನ ಅಂಬಾರಗುಡ್ಡದ ತಪ್ಪಲಿನಲ್ಲೊಂದು ಸರ್ಕಾರಿ ಶಾಲೆ..!!

52
0

ಶಿಕ್ಷಣ ಪಯಣ..!!

ನಮ್ಮ ವಾಹನ ಸಾಗರದಿಂದ ಹೊರಟು ಸುಂದರವಾದ ಶರಾವತಿ ಹಿ್ನ್ನೀರಿನ ಹೊಳೆಬಾಗಿಲು ಸೇತುವೆ ಮೂಲಕ ಹಾದು ಹೋಗುವಾಗ ಯಾವುದೋ ಒಂದು ಪ್ರಪಂಚಕ್ಕೆ ಕಾಲಿಟ್ಟಿದ್ದೇವೆ ಎನಿಸುತ್ತಿತ್ತು.ಹಾಗೆ ತುಮರಿ, ಬ್ಯಾಕೋಡು, ಸುಳ್ಳಳ್ಳಿ ಮಾರ್ಗವಾಗಿ ಹಾಳಸಸಿ ಶಾಲೆಯ ರಸ್ತೆಯಲ್ಲಿ ಸಾಗಿದ ವಾಹನ,ಅದೊಂದು ಸುಂದರವಾದ ಪ್ರಾಕೃತಿಕ ಪ್ರಪಂಚದೊಳಗೆ ಹೋಗುತ್ತಿರುವ ಅನುಭವ.

ಅದೇಷ್ಟು ತಿರುವುಗಳು.. ಸಣ್ಣ ಸಣ್ಣ ಸೇತುವೆಗಳು.. ಕಾಡಿನ ಒಳ ಹೊಕ್ಕಂತೆಲ್ಲ ಹೊಸ ಜಗತ್ತೇ ನಮಗೆ ಕಾಣತೊಡಗಿತು.ಮುಗಿಲೆತ್ತರದ ಗುಡ್ಡದ ಸಾಲುಗಳು.. ನೋಡುತ್ತಾ ನೋಡುತ್ತಾ,, ನಮ್ಮ ದಾರಿ ಸಾಗಿದ್ದೆ ಗೋತ್ತಾಗಲಿಲ್ಲ.. ಕಾಡಡವಿಯಲ್ಲಿ.. ನಮಗೆ ಅಲ್ಲೊಂದು.. ಇಲ್ಲೊಂದು ಎಲ್ಲೋ ಒಂದೊಂದು ಮನೆಗಳು ಕಂಡು ನಮಗೆ ದೈರ್ಯ ಬರುತ್ತಿತ್ತು.. ಇಲ್ಲಿ ಆದರೂ ಭಯ.. ಎತ್ತರದ ಅಂಬಾರಗುಡ್ಡವನ್ನು ನೋಡುತ್ತಿದ್ದಂತೆ.. ಸ್ವರ್ಗ ಮೂರೆ ಗೇಣು ಎನ್ನುವ ಸಂತಸ ನಮ್ಮ ಮನೆ ಮಾಡಿತ್ತು. ನೋಡಿದಷ್ಟು ಆನಂದ ನಮ್ಮ ಮನದೊಳಗೆ ಮೂಡುತ್ತಿತ್ತು.ಮಲೆನಾಡಿನ ಸುಂದರವಾದ ಗುಡ್ಡ ಪ್ರದೇಶವೆ ಈ ಅಂಬಾರಗುಡ್ಡ ಎಂದು ಇದರ ವಿವರಣೆಯನ್ನು ತಿಳಿಯುತ್ತಿರುವಾಗ.

ನಮ್ಮ ಜೋತೆಗೆ ಇದ್ದ ಗೆಳೆಯ.ಸಾರ್ ನಾನು ಮೊನ್ನೆ ಇಲ್ಲಿ ಬರುವಾಗ ಹುಲಿ ಅಡ್ಡ ಬಂತು ಎಂದಾಗ ಒಮ್ಮೆಯೇ ಎದೆ ಝಲ್ಲೆಂದಿತ್ತು.ಸಾಕು ಹಿಂದೇ ತಿರುಗಿಸಿ ಎಂದಾಗ.ಹಾಗೇನು ಇಲ್ಲ ಸಾರ್ ಇಲ್ಲ ಅದೆಲ್ಲಾ ಕಾಮನ್.ಅಷ್ಟೆಲ್ಲ ಹೆದರಿಕೊಳ್ಳುವ ಅಗತ್ಯವಿಲ್ಲ.. ಎನ್ನುವ ದೈರ್ಯ ದಿಂದ ನಾವು ಕಾಡಿನ ರಸ್ತೆಯೊಳಗೆ.ನಮ್ಮ ವಾಹನ ಸಾಗಿತ್ತು..

ಅಂಬಾರಗುಡ್ಡದ ತಪ್ಪಲಿನಲ್ಲಿ ನಮ್ಮ ವಾಹನ ನಿಂತಾಗ ಸರ್ಕಾರಿ ಶಾಲೆ.. ಆಶ್ಚರ್ಯವಾಯಿತು.. ಸಾಗರ ನಗರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಈ ಶಾಲೆ.. ಅದು ಸರ್ಕಾರಿ ಶಾಲೆಯಲ್ಲಿ ಐದಾರು ಮಕ್ಕಳ ಓದು. ಅಲ್ಲೊಬ್ಬರು ಅತಿಥಿ ಶಿಕ್ಷಕರು..ಅಬ್ಬಾ.. ಶಾಲೆಯ ಸುತ್ತ ಎಲ್ಲೆಲ್ಲೋ ಒಂದೊಂದು ಮನೆ.. ಈ ಪ್ರದೇಶಲ್ಲಿ ಹೆಚ್ಚು ಕುಣಬಿ ಜನಾಂಗದವರ ವಾಸ.. ತಾವಾಯಿತು.. ತಮ್ಮ ಬದುಕಿನ ಜೀವನ.. ಇನ್ನೂ ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು ತಮ್ಮ ತಮ್ಮ ಕೆಲಸಕ್ಕೆ ಹೋಗುವುದು.. ಇದೆಲ್ಲ ಇಲ್ಲಿ ಸಹಜವಾದ ಜೀವನದ ಕ್ಷಣಗಳು.

ಶರಾವತಿ ಹಿನ್ನೀರ ಪ್ರದೇಶದ ಕರೂರು ಹೋಬಳಿ ಎಂದರೆ ಸಾಕು ಅದೊಂದು ತನ್ನದೆಯಾದ ಪ್ರಾದೇಶಿಕ ಪರಂಪರಯನ್ನು ಹೊಂದಿದೆ ಎನ್ನುವುದುರಲ್ಲಿ ಎರಡು ಮಾತಿಲ್ಲ… ದಟ್ಟಡವಿ.. ಎಲ್ಲಿ ನೋಡಿದರು.. ಹಚ್ಚ ಹಸಿರು.. ಮುಗಿಲೆತ್ತರದ ಮರಗಳು.. ಒಳ ಹೋದಂತೆ.. ಇದೇನು ಅಮೇಜಾನ್ ಕಾಡಿನಲ್ಲಿ ಹೊಕ್ಕ ರೀತಿಯಲ್ಲಿ ಭಾಸವಾಗುತ್ತಿತ್ತು.

ಮಲೆನಾಡು ಎಂದರೇ ಕೇಳಬೇಕೆ.. ಹಚ್ಚ ಹಸಿರಿನ ತಾಣವನ್ನು ವರ್ಣಿಸಲು ಎಷ್ಟು ಸಾಧ್ಯ? ಶರಾವತಿ ಹಿನ್ನೀರಿನ ಪ್ರದೇಶದಲ್ಲೊಂದು ಸುಂದರವಾದ ಗುಡ್ಡ..ಅದುವೆ ಅಂಬಾರಗುಡ್ಡ ಇದು ಕೊಡಚಾದ್ರಿಯ ಆಜುಬಾಜಿನಲ್ಲಿ ಕಾಣುವ ಈ ಶ್ರೇಣಿ.. ಸ್ವರ್ಗದಂತೆ ಕಂಗೊಳಿಸುತ್ತದೆ..

ಇಂತಹ ಸುಂದರವಾದ ಬೆಟ್ಟದ ತಪ್ಪಲಿನಲ್ಲಿರುವ ಆವಿಗೆ ಎನ್ನುವ ಊರು ಕೆಲವೇ ಮನೆಗಳು.. ನೂರು ದಾಟದ ಜನ ಸಂಖ್ಯೆ.. ಕೃಷಿ ಹಾಗೂ ಕೂಲಿ ಮಾಡಿ ಬದುಕು ಕಟ್ಟಿಕೊಂಡಿರುವವರೆ ಇಲ್ಲಿದ್ದಾರೆ.
ಇಲ್ಲಿನ ಮಕ್ಕಳ ಶಿಕ್ಷಣಕ್ಕಾಗಿ.. ಸರ್ವಶಿಕ್ಷಣ ಅಭಿಯಾನದಡಿಯಲ್ಲಿ ಆರಂಭಿಸಲಾದ ಶಾಲೆ ಈ ಭಾಗದ ಜನರ ಶೈಕ್ಷಣಿಕ ಬದುಕಿಗೆ ದಾರಿ ದೀಪವಾಗಿದೆ. ಅತಿ ದೂರದ ಈ ಶಾಲೆಗೆ ಅನೇಕ ಶಿಕ್ಷಕರು.. ಬಂದು ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ..

ನಂತರ ಇಲ್ಲಿಂದ ವರ್ಗಾವಣೆಯಾದ ನಂತರ ಅತಿಥಿ ಶಿಕ್ಷಕರೇ ಇಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ..ನಿಜವಾಗಿಯೂ ಸಾರ್ಥಕತೆಯನ್ನು ಹೇಳುತ್ತದೆ.. ಸುಮಾರು ನಾಲ್ಕೈದು ಕಿ.ಮೀ ದೂರದಿಂದ ನಡೆದುಕೊಂಡು ಬಂದು ಶಾಲೆ ನಡೆಸುವ ಅತಿಥಿ ಶಿಕ್ಷಕರ ಕಾರ್ಯ ಅತ್ಯಂತ ಶ್ಲಾಘನಿಯವಾದ ಸಂಗತಿಯಾಗಿದೆ.

ಇತ್ತೀಚೆಗೆ ಶಾಲೆಗೆ ಬೇಟಿ ನೀಡಿದಾಗ ಅತಿಥಿ ಶಿಕ್ಷಕರು ಎಲ್ಲಾರನ್ನೂ ಅತ್ಯಂತ ಆತ್ಮೀಯವಾಗಿ ಆಹ್ವಾನಿಸಿದ ಕ್ಷಣ.. ನಮ್ಮನ್ನೆಲ್ಲ ಬೆರಗುಗೊಳಿಸಿತ್ತು..

ಎಂದೂ ಸಹ ಯಾವುದೇ ರೀತಿಯ ದೂರು ದುಮ್ಮಾನಗಳಿಲ್ಲ.. ನನ್ನಿಂದ ಆಗುವುದಿಲ್ಲ ಎಂದೂ ಸಹ ಹೇಳಿಲ್ಲ…ನಿಜವಾಗಿಯೂ ಆಶ್ಚರ್ಯವಾಗುತ್ತದೆ.. ಇಲಾಖೆಯ ಮಾಹಿತಿಗಳನ್ನು ಕಾಲ ಕಾಲಕ್ಕೆ ಕೊಡುತ್ತಾ ಬರುವುದರ ಜೊತೆಗೆ ಬಿಸಿಯೂಟ ನಿರ್ವಹಣೆ ಮಕ್ಕಳ ಕಲಿಕೆಯು ಸಹ ಉತ್ತಮವಾಗಿದೆ ಎನ್ನುವುದನ್ನು ಸ್ವತಃ ಬಿಇಓ ಸದಾನಂದಸ್ವಾಮಿಯವರು ಮಕ್ಕಳೊಂದಿಗೆ ಬೆರೆತು ಅರಿತ ಮಾಹಿತಿಯನ್ನು ಹಂಚಿಕೊಂಡರು..ಅಲ್ಲದೆ ಶಿಕ್ಷಕಿಗೆ ದೈರ್ಯ ತುಂಬಿ.

ಮಾರ್ಗದರ್ಶನವನ್ನು ಸಹ ನೀಡಿದ್ದು ವಿಶೇಷವಾಗಿತ್ತು..ಈ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕಿ ಶ್ರೀಮತಿ ಪಾಟೀಲ್ ಸಹ ತಮ್ಮ ಸಂತಸವನ್ನು ವ್ಯಕ್ತ ಪಡಿಸುತ್ತ ಇಂತಹ ಪುಣ್ಯದ ಕೆಲಸ ಸಿಕ್ಕಿದ್ದು ನನ್ನ ಸುದೈವ ಈ ಭಾಗದ ಜನರು ಸಹ ನನ್ನನ್ನು ಮನೆ ಮಗಳಂತೆ ನೋಡಿಕೊಳ್ಳುತ್ತಿದ್ದಾರೆ, ಸಿ.ಆರ್.ಪಿ ಚಂದ್ರಪ್ಪ, ಪ್ರಸನ್ನ ಹಾಗೂ ಇಸಿಓ ದಿನೇಶ್ ಅವರ ಮಾರ್ಗರ್ಶನ ನಿಜವಾಗಿಯೂ ನನಗೆ ಆತ್ಮಸ್ಥೈರ್ಯ ಎನ್ನುವ ಮಾತುಗಳು ಅನೇಕ ಶಿಕ್ಷಕರಿಗೆ ಸ್ಪೂರ್ತಿ ಎನ್ನಬಹುದು.. ಅದರಲ್ಲೂ ಈ ಶಿಕ್ಷಕಿ ಬೆಳಗಾಂ ಜಿಲ್ಲೆಯವರಾಗಿದ್ದು ಆಶ್ಚರ್ಯವಾಗುತ್ತದೆ ಅವರ ನಗು ಮೊಗದ ಕಾರ್ಯ ಅಭಿನಂದನಿಯವಾದ ಸಂಗತಿಯಾಗಿದೆ.

ಸಾಗರ ತಾಲ್ಲೂಕಿನ ಅಂಬಾರಗುಡ್ಡ ತಪ್ಪಲಿನ ಆವಿಗೆ ಸರ್ಕಾರಿ ಶಾಲೆಗೆ ಒಂದು ಅಭಿನಂದನೆ ಹೆಳೋಣವೆ..


ವಿ.ಟಿ.ಸ್ವಾಮಿ, ಕವಿತೋಟ
ಸಾಗರ-577401
ಶಿಕ್ಷಣ ಸಂಯೋಜಕರು
ಎಂ.ಎ.ಕನ್ನಡ, ಎಂ.ಎ.ಪ್ರಾಕೃತ
ಪಿ.ಜಿ.ಡಿಪ್ಲಮೋ ಇನ್ ಜರ್ನಲಿಸಂ
ಎಂ.ಎ.ಎಂ.ಸಿ.ಜೆ, ಸಮೂಹ ಸಂವಹವನ ಮತ್ತು ಪತ್ರಿಕೋದ್ಯಮ