✒️..ಅಮಿತ್ ಆರ್ ಆನಂದಪುರ
ಸಾಗರ : ಶಾಲೆ-ಕಾಲೇಜುಗಳಿಗೆ ಹೋಗುತ್ತೇವೆ ಎಂದು ಪೋಷಕರಿಗೆ ಹೇಳಿ ತರಗತಿಗಳಿಗೆ ಹಾಜರಾಗದೇ ನಗರದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ಸಾಗರ ಉಪವಿಭಾಗದ ಎಎಸ್‌ಪಿ ಡಾ. ಬೆನಕ ಪ್ರಸಾದ್ ನೇತೃತ್ವದಲ್ಲಿ ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.
ಬಸ್ ನಿಲ್ದಾಣ, ನೆಹರು ಕ್ರೀಡಾಂಗಣ, ಆಡಿಟೋರಿಯಂ, ಗೋಪಾಲಗೌಡ ಕ್ರೀಡಾಂಗಣ, ಇಂದಿರಾ ಗಾಂಧಿ ಕಾಲೇಜು ಸುತ್ತಮುತ್ತ ಸೇರಿದಂತೆ ಹಲವು ಸ್ಥಳಗಳಲ್ಲಿ ತಪಾಸಣೆ ನಡೆಸಿ, ಕ್ಲಾಸ್‌ಗೆ ಬಂಕ್ ಮಾಡಿ ಅಲೆದಾಡುತ್ತಿದ್ದ ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ ತರಾಟೆಗೆ ತೆಗೆದುಕೊಂಡರು.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಅಂಗಡಿಗಳ ಬಳಿ ಧೂಮಪಾನ, ಗಾಂಜಾ ಸೇವನೆ ಸೇರಿದಂತೆ ಅನಗತ್ಯ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ ಎಂಬ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಯಿತು. ವಿದ್ಯಾರ್ಥಿಗಳು ಎಲ್ಲೆಲ್ಲಿ ಸೇರಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಡ್ರೋನ್ ಕ್ಯಾಮೆರಾಗಳ ಸಹಾಯವನ್ನೂ ಪಡೆದು, ಸ್ಥಳಕ್ಕೆ ತೆರಳಿ ಜಾಗೃತಿ ಮೂಡಿಸುವುದರ ಜೊತೆಗೆ ಕಾನೂನಿನ ಅರಿವು ಮತ್ತು ಭಯವನ್ನು ಮೂಡಿಸಲಾಯಿತು.

ಸುಮಾರು 60ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶ್ವಾನ ದಳದೊಂದಿಗೆ ಸಾಗರ ನಗರದ ವಿವಿಧ ಪ್ರದೇಶಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ವೇಳೆ ಸಾಗರ ಉಪವಿಭಾಗದಲ್ಲಿ ಮಾದಕ ವಸ್ತುಗಳ ಹಾವಳಿ ನಿಯಂತ್ರಿಸುವ ಉದ್ದೇಶದಿಂದ ಸಾಗರ ಟೌನ್ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳ ವ್ಯಾಪ್ತಿಯ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಯಿತು.
ಸಾರ್ವಜನಿಕರಿಂದ ಬಂದ ದೂರುಗಳು ಹಾಗೂ ಇಲಾಖೆಯ ಮಾಹಿತಿ ಆಧರಿಸಿ ನಡೆದ ಈ ಕಾರ್ಯಾಚರಣೆಯಲ್ಲಿ ಬಳಸಗೋಡು ಸಮೀಪದ ಹನ್ನು ಕ್ಯಾಂಟೀನ್ನಲ್ಲಿ ಅಲ್ಪ ಪ್ರಮಾಣದ ಗಾಂಜಾ ಪತ್ತೆಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ಅಲ್ಲದೆ, ಗಾಂಜಾ ಸೇವನೆ ಮಾಡಿರುವ ಶಂಕೆಯ ಮೇರೆಗೆ ಆರು ಮಂದಿಯನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಎಎಸ್‌ಪಿ ಡಾ. ಬೆನಕ ಪ್ರಸಾದ್ ತಿಳಿಸಿದ್ದಾರೆ.
ಯಾವುದೇ ಅಪರಾಧ ಚಟುವಟಿಕೆ, ಮಾದಕ ವಸ್ತುಗಳ ಮಾರಾಟ ಅಥವಾ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ತಿಳಿಸುವಂತೆ ಅವರು ಮನವಿ ಮಾಡಿದ್ದಾರೆ. ಮಾಹಿತಿ ನೀಡುವವರ ಗುರುತನ್ನು ಸಂಪೂರ್ಣ ಗೋಪ್ಯವಾಗಿಡಲಾಗುವುದು. ಸಾರ್ವಜನಿಕರು ಸುರಕ್ಷಿತವಾಗಿ ಮಾಹಿತಿ ಹಂಚಿಕೊಳ್ಳಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ KSP App ಬಳಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಾಹೀರಾತು:












