Home Blog ಮೀನು ಹಿಡಿಯಲು ತೆರಳುತ್ತಿದ್ದ ವೇಳೆ ಬೈಕ್ ಮೇಲೆ ಮರದ ರೆಂಬೆ ಬಿದ್ದು ಯುವಕ ಸ್ಥಳದಲ್ಲೇ ಸಾವು..!!

ಮೀನು ಹಿಡಿಯಲು ತೆರಳುತ್ತಿದ್ದ ವೇಳೆ ಬೈಕ್ ಮೇಲೆ ಮರದ ರೆಂಬೆ ಬಿದ್ದು ಯುವಕ ಸ್ಥಳದಲ್ಲೇ ಸಾವು..!!

53
0

✒️..ಅಮಿತ್ ಆರ್ ಆನಂದಪುರ

(ಹೊಸನಗರ)ರಿಪ್ಪನ್‌ಪೇಟೆ:ಮೀನು ಹಿಡಿಯಲು ತೆರಳುತ್ತಿದ್ದ ವೇಳೆ ಚಲಿಸುತ್ತಿದ್ದ ಬೈಕ್ ಮೇಲೆ ಒಣ ಮರದ ಬೃಹತ್ ರೆಂಬೆ ಬಿದ್ದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗರ್ತಿಕೆರೆ ಸಮೀಪದ ಸುಣ್ಣದಬಸ್ತಿ ಬಳಿ ತಾರಿಗ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಚೋರಡಿ ಗ್ರಾಮದ ಸಂತೋಷ್ (26), ತಂದೆ ಬೊಮ್ಮಣ್ಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೀರಭದ್ರ, ತಂದೆ ರಾಮಪ್ಪ ಅವರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

ಸಂತೋಷ್ ಹಾಗೂ ವೀರಭದ್ರ ಅವರು ಮೀನು ಹಿಡಿಯಲು ಅಗತ್ಯವಾದ ಉಕ್ಕಡವನ್ನು ಬೈಕ್‌ನಲ್ಲಿ ಹೊತ್ತುಕೊಂಡು ಚೋರಡಿಯಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ತಾರಿಗ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿದ್ದ ಸುಮಾರು 50 ಅಡಿ ಎತ್ತರದ ಒಣ ಮರದ ಬೃಹತ್ ರೆಂಬೆ ಏಕಾಏಕಿ ಮುರಿದು ಬೈಕ್ ಮೇಲೆ ಬಿದ್ದಿದೆ ಎಂದು ತಿಳಿದು ಬಂದಿದೆ.

ರೆಂಬೆ ಬಿದ್ದ ರಭಸಕ್ಕೆ ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು, ಸಂತೋಷ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ, ವೀರಭದ್ರ ಅವರಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಮೃತ ಸಂತೋಷ್ ಅವರ ಮೃತದೇಹವನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಜಾಹೀರಾತು: