ವಾಲ್ಮೀಕಿ ವಿರಚಿತ ರಾಮಾಯಣ ಇಡೀ ಜಗತ್ತಿಗೇ ಆದರ್ಶಪ್ರಾಯ: ಪ್ರೊ. ಶರತ್ ಅನಂತಮೂರ್ತಿ
ಶಿವಮೊಗ್ಗ (ಶಂಕರಘಟ್ಟ), ಅ 29: ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಭಾರತಕ್ಕೆ ಮಾತ್ರ ಸೀಮಿತವಾದ ಆದಿಕಾವ್ಯವಲ್ಲ, ಇಡೀ ಜಗತ್ತಿಗೇ ಆದರ್ಶಪ್ರಾಯವಾದ ಮಹಾಕಾವ್ಯ. ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಎತ್ತಿ ಹಿಡಿದಿರುವ ಶ್ರೇಷ್ಠ ಕೃತಿ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಘಟಕದ ವತಿಯಿಂದ ಜ್ಞಾನಸಹ್ಯಾದ್ರಿಯ ಪ್ರೊ. ಹಿರೇಮಠ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಮಾಯಣ ನಮ್ಮ ನೆಲದ ಮೊದಲ ಮಹಾಕಾವ್ಯ ಎಂದು ಪರಿಗಣಿಸಲಾಗಿದ್ದರೂ, ನಂತರದ ದಿನಗಳಲ್ಲಿ ಇಂಡೋನೇಷ್ಯಾ, ಥಾಯ್ಲೆಂಡ್ಡ್, ಕಾಂಬೋಡಿಯಾ, ಮಲೇಷಿಯಾ, ನೇಪಾಳ, ಶ್ರೀಲಂಕಾದಂತಹ ದೇಶಗಳಲ್ಲಿ, ಹಾಗೂ ಭಾರತೀಯ ಸಂಜಾತರು ನೆಲೆಸಿರುವ ಜಗತ್ತಿನ ವಿವಿಧ ದೇಶಗಳಲ್ಲಿ ಕೂಡ ಜನಜನಿತವಾಗಿರುವ ಆದಿಗ್ರಂಥ. “ಎ. ಕೆ. ರಾಮಾನುಜನ್ ತಮ್ಮ ಪ್ರಬಂಧವೊಂದರಲ್ಲಿ ರಾಮಾಯಣದ ವಿವಿಧ ಆವೃತ್ತಿಗಳು, ಸಾರ್ವತ್ರಿಕ ಮೌಲ್ಯಗಳನ್ನು ಪಾತ್ರಗಳೊಂದಿಗೆ ಸಮೀಕರಿಸಿರುವ ಸಂಕೀರ್ಣ ವಿಶ್ಲೇಷಣೆ” ಇದು ಎಲ್ಲ ಕಾಲಕ್ಕೂ ಸಲ್ಲುವ ಕೃತಿ ಎಂಬುದನ್ನು ಪ್ರತಿಪಾದಿಸುತ್ತದೆ ಎಂದರು.
ಕಾವ್ಯದ ಮೂಲಕ ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಮತ್ತಿತರ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿರುವ ಮಹರ್ಷಿ ವಾಲ್ಮೀಕಿ ಸಮಕಾಲೀನ ಜಗತ್ತಿಗೆ ಆದರ್ಶಪ್ರಾಯನಾದ ಮಹಾಕವಿ ಎಂದು ಬಣ್ಣಿಸಿದರು.
ಕನ್ನಡ ಭಾರತಿಯ ಪ್ರಾಧ್ಯಾಪಕ ಪ್ರೊ. ಜಿ. ಪ್ರಶಾಂತ್ ನಾಯಕ್ ಮಾತನಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ. ತಿಮ್ಮರಾಯಪ್ಪ, ಘಟಕದ ಸಂಚಾಲಕ ಪ್ರೊ. ದೇವಿದಾಸ್. ಜಿ. ಬಿ, ವಿವಿಧ ವಿಭಾಗಗಳ ಅಧ್ಯಾಪಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



