ಶಿವಮೊಗ್ಗ: ಹಗಲಿರುಳು ಶ್ರಮವಹಿಸಿ ಓದುವ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಪರೀಕ್ಷಾ ವ್ಯವಸ್ಥೆ ಯಾವ ಸ್ಥಿತಿಯಲ್ಲಿದೆ ಎಂಬುದಕ್ಕೆ ಆಗಾಗ್ಗೆ ಹಲವು ಘಟನೆಗಳು ಸಾಕ್ಷಿಯಾಗುತ್ತಿವೆ. ರಾಜ್ಯದಲ್ಲಿ ಕೆಪಿಎಸ್ಸಿ ಹಗರಣ ದೊಡ್ಡ ಸುದ್ದಿಯಾದ ಬೆನ್ನಲ್ಲೇ ಇದೀಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್ಓಯು) ಶಿವಮೊಗ್ಗ ಪ್ರಾದೇಶಿಕ ಕಚೇರಿಯ ಪರೀಕ್ಷಾ ವ್ಯವಸ್ಥೆಯಲ್ಲಿ ಅಕ್ರಮ ನಡೆದಿದೆ.
ಕೆಎಸ್ಓಯು ಶಿವಮೊಗ್ಗ ಪ್ರಾದೇಶಿಕ ಕಚೇರಿಯಲ್ಲಿ ಹಣ ನೀಡಿದರೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಸುಲಭವಾಗಿ ಬರೆಯಬಹುದು . ಪ್ರಾದೇಶಿಕ ಕಚೇರಿಯಲ್ಲಿನ ಪರೀಕ್ಷಾ ವ್ಯವಸ್ಥೆಯಲ್ಲೇ ಹಣದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ವಿಭಿನ್ನ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ, ಈ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.
ಹಣ ನೀಡಿದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಮೊಬೈಲ್ಗಳನ್ನು ಬಳಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿ ನಕಲು ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂಬುದಕ್ಕೆ ಸಂಬಂಧಿಸಿದ ವಿಡಿಯೋ ದೃಶ್ಯಗಳು ಬಹಿರಂಗವಾಗಿವೆ.

ಹಣ ಕೊಟ್ಟವರಿಗೆ ಒಂದು ವ್ಯವಸ್ಥೆ, ಕೊಡದವರಿಗೆ ಮತ್ತೊಂದು ವ್ಯವಸ್ಥೆ!
ಪರೀಕ್ಷಾ ಕೇಂದ್ರದಲ್ಲಿ ಹಣ ನೀಡದ ವಿದ್ಯಾರ್ಥಿಗಳಿಗೆ ಮೊದಲ ಮಹಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದ್ದರೆ, ಹಣ ನೀಡಿದ ವಿದ್ಯಾರ್ಥಿಗಳಿಗೆ ಎರಡನೇ ಮಹಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಎರಡನೇ ಮಹಡಿಯಲ್ಲಿ ವಿದ್ಯಾರ್ಥಿಗಳು ಪುಸ್ತಕ ಹಾಗೂ ಮೊಬೈಲ್ಗಳನ್ನು ನೋಡಿಕೊಂಡು ಪರೀಕ್ಷೆ ಬರೆಯುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಅಕ್ರಮದಲ್ಲಿ ಸಿಬ್ಬಂದಿಯನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಪರೀಕ್ಷಾ ನಿಯಮಗಳನ್ನು ಪಾಲಿಸಬೇಕಾದ ಕೇಂದ್ರದಲ್ಲೇ ಇಂತಹ ಚಟುವಟಿಕೆಗಳು ನಡೆದಿವೆ ಎನ್ನಲಾದ ವಿಚಾರವು ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಒಂದು ವಿಷಯಕ್ಕೆ ₹1,000 ವಸೂಲಿ?
ಶಿವಮೊಗ್ಗ ನಗರದ ಆಲ್ಕೋಳ ಸರ್ಕಲ್ ಸಮೀಪದಲ್ಲಿರುವ ಕೆಎಸ್ಓಯು ಪ್ರಾದೇಶಿಕ ಕಚೇರಿಯ ಪರೀಕ್ಷಾ ಕೇಂದ್ರದಲ್ಲೇ ಈ ಅಕ್ರಮ ನಡೆದಿದೆ.ವಿದ್ಯಾರ್ಥಿಗಳಿಂದ ಪ್ರತಿ ವಿಷಯಕ್ಕೆ ತಲಾ ₹1,000 ಹಣ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.



