Home Blog ಸಾಗರ ನ್ಯಾಯಾಲಯದಲ್ಲಿ ಹೈ ಅಲರ್ಟ್: ದಿಡೀರನೆ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ತಪಾಸಣೆ..!!

ಸಾಗರ ನ್ಯಾಯಾಲಯದಲ್ಲಿ ಹೈ ಅಲರ್ಟ್: ದಿಡೀರನೆ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ತಪಾಸಣೆ..!!

49
0

✒️..ಅಮಿತ್ ಆರ್ ಆನಂದಪುರ

ಸಾಗರ: ಶಿವಮೊಗ್ಗ ನ್ಯಾಯಾಲಯಕ್ಕೆ ಬಂದ ಬಾಂಬ್ ಬೆದರಿಕೆ ಇ-ಮೇಲ್‌ನ ಬೆನ್ನಲ್ಲೇ ಸಾಗರ ನ್ಯಾಯಾಲಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ದಿಡೀರನೆ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ತಪಾಸಣೆ ನಡೆಸಲಾಯಿತು.

ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಂದಿದ್ದ ಸರಣಿ ಬಾಂಬ್ ಬೆದರಿಕೆ ಪ್ರಕರಣದ ಬೆನ್ನಲ್ಲೇ, ಜಿಲ್ಲೆಯಾದ್ಯಂತ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಅದರ ಭಾಗವಾಗಿ ಸಾಗರ ನ್ಯಾಯಾಲಯ ಸಂಕೀರ್ಣದಲ್ಲೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (BDDS) ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ತೀವ್ರ ತಪಾಸಣೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಶಿವಮೊಗ್ಗದ ಘಟನೆಯಿಂದ ಎಚ್ಚೆತ್ತ ಸಾಗರ ಉಪವಿಭಾಗದ ಪೊಲೀಸರು ನ್ಯಾಯಾಲಯದ ಆವರಣ, ಕಾರಿಡಾರ್‌ಗಳು, ನ್ಯಾಯಾಧೀಶರ ಕೊಠಡಿಗಳು, ದಾಖಲೆ ಕೊಠಡಿಗಳು ಸೇರಿದಂತೆ ಪ್ರತಿಯೊಂದು ಭಾಗವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದರು. ಕೋರ್ಟ್‌ಗೆ ಆಗಮಿಸುವ ವಕೀಲರು, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಕಟ್ಟುನಿಟ್ಟಿನ ತಪಾಸಣೆಯ ನಂತರವೇ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು.

ಇದರ ಜೊತೆಗೆ, ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳನ್ನೂ ಮೆಟಲ್ ಡಿಟೆಕ್ಟರ್‌ಗಳ ಮೂಲಕ ಪರಿಶೀಲಿಸಿ ಯಾವುದೇ ಅನುಮಾನಾಸ್ಪದ ವಸ್ತುಗಳಿವೆಯೇ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡರು.

ಹುಸಿ ಬೆದರಿಕೆ, ಆದರೆ ಭದ್ರತೆಯಲ್ಲಿ ಯಾವುದೇ ರಾಜಿ ಇಲ್ಲ

ಇತ್ತೀಚೆಗೆ ತಮಿಳುನಾಡಿನ ಪ್ರಕರಣವೊಂದನ್ನು ಉಲ್ಲೇಖಿಸಿ ಶಿವಮೊಗ್ಗ ಜಿಲ್ಲಾ ನ್ಯಾಯಾಲಯಕ್ಕೆ ಮಿನಿ ಸಿಲಿಂಡರ್ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು, ಶ್ವಾನದಳ ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗಿರಲಿಲ್ಲ. ಬಳಿಕ ಅದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿತ್ತು.

ಆದರೂ ಮುಂಜಾಗ್ರತಾ ಕ್ರಮವಾಗಿ ಸಾಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ನ್ಯಾಯಾಲಯಗಳಲ್ಲಿ ಭದ್ರತಾ ತಪಾಸಣೆ ಮುಂದುವರಿದಿದ್ದು, ಪ್ರಕರಣದ ಇ-ಮೇಲ್ ಮೂಲ ಪತ್ತೆ ಹಾಗೂ ಆರೋಪಿಗಳ ಶೋಧಕ್ಕಾಗಿ ಸೈಬರ್ ಕ್ರೈಮ್ ಮತ್ತು ಸ್ಥಳೀಯ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಜಾಹೀರಾತು: