✒️..ಅಮಿತ್ ಆರ್ ಆನಂದಪುರ
ಸಾಗರ (ಆನಂದಪುರ): ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಟೈರ್ ಕಳ್ಳತನ ಪ್ರಕರಣವನ್ನು ಪಿಎಸ್‌ಐ ಪ್ರವೀಣ್ ಅವರ ನೇತೃತ್ವದ ಪೊಲೀಸ್ ತಂಡ ಯಶಸ್ವಿಯಾಗಿ ಭೇದಿಸಿದೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು, ₹45,000 ಮೌಲ್ಯದ ಕಳುವಾಗಿದ್ದ ಮೂರು ಸ್ಟೆಪ್ನಿ ಟೈರ್ ಹಾಗೂ ರಿಮ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಟೌನ್‌ನ ಟಿಪ್ಪು ನಗರದ 5ನೇ ಕ್ರಾಸ್ ನಿವಾಸಿ, ಟೈಲ್ಸ್ ಕೆಲಸಗಾರ ಸೋನು ತಂದೆ ಸೈಯದ್ ಸಮಿವುಲ್ಲಾ (27) ಬಂಧಿತ ಆರೋಪಿ.

ಫೆಬ್ರುವರಿ 6ರಂದು ಆಜಾಪುರ ಗ್ರಾಮದ ಶಿವ ಶ್ರೇಯಾ ಎಂಟರ್‌ಪ್ರೈಸಸ್ ಮಳಿಗೆಯ ಮುಂಭಾಗ ನಿಲ್ಲಿಸಿದ್ದ ಮೂರು ಟಾಟಾ ಇಂಟ್ರಾ ವಾಹನಗಳ ಮೂರು ಸ್ಟೆಪ್ನಿ ಟೈರ್ ಹಾಗೂ ರಿಮ್‌ಗಳನ್ನು ಕಳವು ಮಾಡಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಮೇಲಾಧಿಕಾರಿಗಳ ಸೂಚನೆಯಂತೆ ಪಿಎಸ್‌ಐ ಪ್ರವೀಣ್ ಅವರು ವಿಶೇಷ ತನಿಖಾ ತಂಡ ರಚಿಸಿ ತನಿಖೆಯನ್ನು ಚುರುಕುಗೊಳಿಸಿದ್ದರು.
ಸಿಬ್ಬಂದಿಗಳಾದ ಪ್ರಶಾಂತ್ , ಉಮೇಶ್ ಅವರೊಂದಿಗೆ ನಿರಂತರವಾಗಿ ಮಾಹಿತಿ ಸಂಗ್ರಹಿಸಿದ ಪಿಎಸ್‌ಐ ಪ್ರವೀಣ್, ಆರೋಪಿಯ ಸಣ್ಣ ಸುಳಿವನ್ನೂ ಬಿಡದೆ ಬೆನ್ನತ್ತಿ ಜುಲೈ 3ರಂದು ಚಾಣಾಕ್ಷ ಕಾರ್ಯಾಚರಣೆ ನಡೆಸಿದರು. ಇದರ ಫಲವಾಗಿ ಆರೋಪಿಯನ್ನು ಬಂಧಿಸಿ, ಕಳುವಾಗಿದ್ದ ಎಲ್ಲಾ ಮೂರು ಸ್ಟೆಪ್ನಿ ಟೈರ್ ಹಾಗೂ ರಿಮ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ತಂಡ ಯಶಸ್ವಿಯಾಯಿತು.
ಜಾಹೀರಾತು












