ಶಿವಮೊಗ್ಗ:ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿಯಲ್ಲಿ (KSNUAHS) ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಿಗುತ್ತಿಲ್ಲ ಎಂಬ ಚರ್ಚೆ ನಡುವೆ, ಹಂಗಾಮಿ ನೌಕರರ ವೇತನ, ದಿನ ಭತ್ಯೆಯಲ್ಲಿ ಭ್ರಷ್ಟಾಚಾರ ನಡೆದಿರುವ ವಿಚಾರವೀಗ ಸಾರ್ವಜನಿಕ ಚರ್ಚೆಗೆ ಬಂದಿದೆ.
ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಗುತ್ತಿಗೆ ನೌಕರರಿಗೆ ಸರ್ಕಾರ ನಿಗದಿಪಡಿಸಿರುವ ನ್ಯಾಯಯುತ ವೇತನ ಮತ್ತು ಕಾನೂನುಬದ್ಧ ಸೌಲಭ್ಯಗಳು ಸರಿಯಾಗಿ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕೆಲಸ ಕಳೆದುಕೊಳ್ಳುವ ಭೀತಿ ಹಾಗೂ ಅಧಿಕಾರಶಾಹಿ ಅಧಿಕಾರಿಗಳ ದೌರ್ಜನ್ಯಕ್ಕೆ ಹೆದರಿರುವ ನೌಕರರು ಈ ಬಗ್ಗೆ ಧ್ವನಿ ಎತ್ತಲು ಹಿಂಜರಿಕೆ ಇದೆ ಎಂದು ಹೆಸರು ಹೇಳಲು ಇಚ್ಛಿಸದ ನೌಕರರೊಬ್ಬರು ಮಾಧ್ಯಮಕ್ಕೆ ವಿವರಿಸಿದರು.
ಲಭ್ಯ ಮಾಹಿತಿಯ ಪ್ರಕಾರ, ವಿಶ್ವವಿದ್ಯಾಲಯದ ಇರುವಕ್ಕಿ ಮುಖ್ಯ ಕ್ಯಾಂಪಸ್ ಸೇರಿದಂತೆ ವಿವಿಧ ಕಾಲೇಜುಗಳು ಹಾಗೂ ಸಂಶೋಧನಾ ಕೇಂದ್ರಗಳಲ್ಲಿ ಸುಮಾರು 350 ರಿಂದ 500ಕ್ಕೂ ಹೆಚ್ಚು ಗುತ್ತಿಗೆ ಮತ್ತು ದಿನಗೂಲಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.

ಅಂದಾಜು ಪ್ರಕಾರ, 150 ರಿಂದ 200 ಮಂದಿ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದ ಕಾರ್ಮಿಕರು, 60 ರಿಂದ 80 ಮಂದಿ ಭದ್ರತಾ ಸಿಬ್ಬಂದಿ, 50 ರಿಂದ 70 ಮಂದಿ ಕಚೇರಿ ಹಾಗೂ ತಾಂತ್ರಿಕ ಸಿಬ್ಬಂದಿ ಮತ್ತು 40 ರಿಂದ 50 ಮಂದಿ ಸ್ವಚ್ಛತಾ ಕಾರ್ಮಿಕರು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಗುತ್ತಿಗೆ ಆಧಾರದಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.
ಸರ್ಕಾರದ ಕನಿಷ್ಠ ವೇತನ ನಿಯಮಗಳ ಪ್ರಕಾರ ಕೃಷಿ ಕಾರ್ಮಿಕರಿಗೆ ದಿನಕ್ಕೆ ₹500 ರಿಂದ ₹650, ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ತಿಂಗಳ ವೇತನ ₹18,500 ರಿಂದ ₹22,000, ಲ್ಯಾಬ್ ಸಹಾಯಕರಿಗೆ ₹16,000 ರಿಂದ ₹19,500, ಚಾಲಕರಿಗೆ ₹18,500 ರಿಂದ ₹23,000, ಭದ್ರತಾ ಸಿಬ್ಬಂದಿಗೆ ₹17,000 ರಿಂದ ₹20,000 ಹಾಗೂ ಸ್ವಚ್ಛತಾ ಕಾರ್ಮಿಕರಿಗೆ ₹15,000 ರಿಂದ ₹17,500 ಮಾಸಿಕ ವೇತನ ನೀಡಬೇಕು.
ಸರ್ಕಾರದ ಕನಿಷ್ಠ ವೇತನ ನಿಯಮಗಳ ಪ್ರಕಾರ ವಿವಿಧ ಹುದ್ದೆಗಳಿಗೆ ನಿಗದಿತ ಸಂಬಳ ಮತ್ತು ಸೌಲಭ್ಯಗಳು ದೊರೆಯಬೇಕಾಗಿದ್ದರೂ, ಎಲ್ಲ ಕಾರ್ಮಿಕರಿಗೂ ಅದೇ ಪ್ರಮಾಣದಲ್ಲಿ ವೇತನ ಪಾವತಿಯಾಗುತ್ತಿಲ್ಲವೆಂಬ ಮಾತುಗಳು ಕೇಳಿಬರುತ್ತಿದೆ. ಕಚೇರಿ ಕಡತದಲ್ಲಿ ಹೆಚ್ಚಿನ ವೇತನ ತೋರಿಸಿ ನೌಕರರಿಗೆ ಕಡಿಮೆ ದಿನಗೂಲಿ ಹಣ ನೀಡಿ ಮೇಲಧಿಕಾರಿಗಳು ವಂಚಿಸುತ್ತಾದ್ದಾರೆ ಎಂಬುದು ನೌಕರರ ಗಂಭೀರ ಆರೋಪವಾಗಿದೆ.
ಪಿಎಫ್ (PF), ಇಎಸ್‌ಐ (ESI) ಸೇರಿದಂತೆ ಕಾರ್ಮಿಕರ ಹಕ್ಕುಗಳಿಗೆ ಸಂಬಂಧಿಸಿದ ಸೌಲಭ್ಯಗಳು ಸಮರ್ಪಕವಾಗಿ ಜಾರಿಯಲ್ಲಿವೆಯೇ ಎಂಬುದರ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ. ಈ ಬಗ್ಗೆ ಜಿಲ್ಲೆಯ ಮತ್ತು ತಾಲ್ಲೂಕಿನ ಕಾರ್ಮಿಕ ಇಲಾಖೆ ಅಧಿಕಾರಿ. ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ನ್ಯಾಯ ಒದಗಿಸಬೇಕು ಎಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ.

ಒಂದೆಡೆ ಸ್ಥಳೀಯ ವಿದ್ಯಾವಂತ ಯುವಕರು ಉದ್ಯೋಗಕ್ಕಾಗಿ ಅಲೆದಾಡುತ್ತಿರುವಾಗ, ಮತ್ತೊಂದೆಡೆ ಈಗಾಗಲೇ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರ ವೇತನ ಮತ್ತು ಹಕ್ಕುಗಳ ಕುರಿತು ಪ್ರಶ್ನೆಗಳು ಉದ್ಭವಿಸಿರುವುದು ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಯ ಕುರಿತು ಹಲವು ಅನುಮಾನಗಳಿಗೆ ಕಾರಣವಾಗಿದೆ.
“ಸ್ಥಳೀಯರಿಗೆ ಉದ್ಯೋಗವಿಲ್ಲ, ಗುತ್ತಿಗೆ ನೌಕರರಿಗೆ ನ್ಯಾಯಯುತ ವೇತನವಿಲ್ಲ; ಹಾಗಾದರೆ ಈ ವ್ಯವಸ್ಥೆಯಿಂದ ಲಾಭವಾಗುತ್ತಿರುವವರು ಯಾರು?” ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮತ್ತು ಕಾರ್ಮಿಕ ವಲಯಗಳು ಕೇಳಲಾರಂಭಿಸಿವೆ.
ಸಾರ್ವಜನಿಕ ಹಣದಿಂದ ನಡೆಯುವ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾದ ಕೃಷಿ ವಿಶ್ವವಿದ್ಯಾಲಯದಲ್ಲಿ ಕಾರ್ಮಿಕರಿಗೆ ನ್ಯಾಯಯುತ ವೇತನ, ಕಾನೂನುಬದ್ಧ ಸೌಲಭ್ಯಗಳು ಹಾಗೂ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕೆಂದು ವಿವಿಧ ವಲಯಗಳು ಒತ್ತಾಯಿಸಿವೆ.
ಜಾಹೀರಾತು












