Home Blog ಪಿಎಸ್‌ಐ ಪ್ರವೀಣ್ ಕ್ಷಿಪ್ರ ಕಾರ್ಯಾಚರಣೆ: ಮನೆ ಬಿಟ್ಟು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳು ಸುರಕ್ಷಿತ ಪತ್ತೆ..!!

ಪಿಎಸ್‌ಐ ಪ್ರವೀಣ್ ಕ್ಷಿಪ್ರ ಕಾರ್ಯಾಚರಣೆ: ಮನೆ ಬಿಟ್ಟು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳು ಸುರಕ್ಷಿತ ಪತ್ತೆ..!!

61
0

✒️..ಅಮಿತ್ ಆರ್ ಆನಂದಪುರ

(ಸಾಗರ)ಆನಂದಪುರ: ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಮನೆ ಬಿಟ್ಟು ತೆರಳಿದ್ದ ನಾಲ್ವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಅವರ ಕ್ಷಿಪ್ರ ಹಾಗೂ ಪರಿಣಾಮಕಾರಿ ಕಾರ್ಯಾಚರಣೆಯಿಂದ ಸುರಕ್ಷಿತವಾಗಿ ಪತ್ತೆಹಚ್ಚಲಾಗಿದೆ.

ಸಾಗರ ತಾಲ್ಲೂಕಿನ ತ್ಯಾಗರ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಉಮೇಶ್ ಅವರ ಪುತ್ರ ಸಂಜಯ್ (16), ಬಸವರಾಜ್ ಅವರ ಪುತ್ರ ಸೃಜನ್ (16), ನಾಗೇಶ್ ಅವರ ಪುತ್ರ ಸಾತ್ವಿಕ್ (16) ಹಾಗೂ ಲಿಂಗರಾಜ್ ಅವರ ಪುತ್ರ ಶಿವಪ್ಪ (16) ಜುಲೈ 1ರಂದು ಮನೆಯಿಂದ ಹೊರಟು ಹೋಗಿದ್ದರು.

ಶಿವಮೊಗ್ಗ ರೈಲು ನಿಲ್ದಾಣದಿಂದ ಮೈಸೂರು ಕಡೆಗೆ ತೆರಳಿರುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆಯುತ್ತಿದ್ದಂತೆಯೇ ಪಿಎಸ್‌ಐ ಪ್ರವೀಣ್ ನೇತೃತ್ವದಲ್ಲಿ ಆನಂದಪುರ ಪೊಲೀಸರು ತಕ್ಷಣವೇ ಕಾರ್ಯಾಚರಣೆ ಆರಂಭಿಸಿದರು.


ತ್ವರಿತ ಹುಡುಕಾಟದ ಫಲವಾಗಿ ಶಿವಮೊಗ್ಗ ಜಿಲ್ಲೆಯ ಗೊಂದಿ-ಚಟ್ನಿಹಳ್ಳಿ ಪ್ರದೇಶದಲ್ಲಿ ನಾಲ್ವರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಪತ್ತೆಹಚ್ಚಲಾಯಿತು. ಬಳಿಕ ಪೋಷಕರನ್ನು ಠಾಣೆಗೆ ಕರೆಸಿ, ಮಕ್ಕಳಿಗೆ ಹಾಗೂ ಪೋಷಕರಿಗೆ ಸೂಕ್ತ ತಿಳುವಳಿಕೆ ನೀಡಿ ಮಕ್ಕಳನ್ನು ಪೋಷಕರೊಂದಿಗೆ ಮನೆಗೆ ಕಳುಹಿಸಲಾಯಿತು.

ಪಿಎಸ್‌ಐ ಪ್ರವೀಣ್ ಅವರ ಸಮಯೋಚಿತ ಕಾರ್ಯಾಚರಣೆಯಿಂದ ನಾಲ್ವರು ವಿದ್ಯಾರ್ಥಿಗಳು ಸುರಕ್ಷಿತವಾಗಿ ಪತ್ತೆಯಾಗಿದ್ದು, ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಾಹೀರಾತು