✒️..ಅಮಿತ್ ಆರ್ ಆನಂದಪುರ
ಸಾಗರ (ಆನಂದಪುರ,) ಜು.20: ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಿ ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಅವರ ನೇತೃತ್ವದಲ್ಲಿ ಐಗಿನಬೈಲು ಕ್ರಾಸ್ ಹಾಗೂ ಹೊಸೂರು ಅರಣ್ಯ ನರ್ಸರಿ ಕ್ರಾಸ್ ಬಳಿ ಸುರಕ್ಷತಾ ಬ್ಯಾರಲ್‌ಗಳನ್ನು ಅಳವಡಿಸಿ, ಅವುಗಳಿಗೆ ರಾತ್ರಿ ವೇಳೆಯಲ್ಲೂ ದೂರದಿಂದಲೇ ಸ್ಪಷ್ಟವಾಗಿ ಗೋಚರಿಸುವಂತೆ ರೇಡಿಯಂ ಸ್ಟಿಕರ್‌ಗಳನ್ನು ಅಂಟಿಸಿದರು.
ಈ ಎರಡೂ ಸ್ಥಳಗಳು ಅಪಘಾತ ಪ್ರದೇಶಗಳಾಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡಲು ಹಾಗೂ ರಸ್ತೆ ವಿಭಜನೆ ಸ್ಪಷ್ಟವಾಗಿ ಕಾಣುವಂತೆ ಈ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪಿಎಸ್‌ಐ ಪ್ರವೀಣ್, “ಅಪಘಾತಗಳನ್ನು ತಡೆಗಟ್ಟುವುದು ಪೊಲೀಸರಷ್ಟೇ ಅಲ್ಲ, ಪ್ರತಿಯೊಬ್ಬ ವಾಹನ ಸವಾರರ ಜವಾಬ್ದಾರಿಯೂ ಆಗಿದೆ. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆಯನ್ನು ಸಂಪೂರ್ಣವಾಗಿ ತೊರೆದು ಸುರಕ್ಷಿತವಾಗಿ ವಾಹನ ಚಲಾಯಿಸಬೇಕು. ಜೀವಕ್ಕಿಂತ ಅಮೂಲ್ಯವಾದುದು ಮತ್ತೊಂದಿಲ್ಲ” ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ರಸ್ತೆ ಸುರಕ್ಷತೆಗೆ ಆದ್ಯತೆ ನೀಡಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವ ಪಿಎಸ್‌ಐ ಪ್ರವೀಣ್ ಅವರ ಈ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರು ಹಾಗೂ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಾಹೀರಾತು












