Home Shivamogga Sagara ಗುಂಡಿಮಯ ರಸ್ತೆಯಿಂದ ನಿತ್ಯ ಸಂಕಷ್ಟ; ಮಾದರಸನಕೊಪ್ಪ ಗ್ರಾಮಸ್ಥರ ಅಳಲು..!!

ಗುಂಡಿಮಯ ರಸ್ತೆಯಿಂದ ನಿತ್ಯ ಸಂಕಷ್ಟ; ಮಾದರಸನಕೊಪ್ಪ ಗ್ರಾಮಸ್ಥರ ಅಳಲು..!!

52
0

✒️..ಅಮಿತ್ ಆರ್ ಆನಂದಪುರ

ಸಾಗರ(ಆನಂದಪುರ,) ಜು.20: ಆನಂದಪುರ ಸಮೀಪದ ಮಾದರಸನಕೊಪ್ಪದಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 2 ಕಿ.ಮೀ. ಉದ್ದದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಗ್ರಾಮಸ್ಥರು ನಿತ್ಯ ಸಂಚಾರಕ್ಕೆ ಪರದಾಡುವಂತಾಗಿದೆ.

ಹಲವು ವರ್ಷಗಳಿಂದ ರಸ್ತೆ ದುರಸ್ತಿಯಾಗದ ಕಾರಣ ಎಲ್ಲೆಡೆ ಗುಂಡಿಗಳು ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ಕೆಸರು ತುಂಬಿ ದ್ವಿಚಕ್ರ ವಾಹನಗಳ ಸಂಚಾರವೂ ಅಪಾಯಕಾರಿಯಾಗಿದೆ.

ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳಿದ್ದು, ರೈತರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಸಾರ್ವಜನಿಕರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ರೈತರು ತೊಂದರೆ ಅನುಭವಿಸುತ್ತಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಇದೇ ರಸ್ತೆಯಲ್ಲಿ ಓಡಾಡಬೇಕಾದ ಅನಿವಾರ್ಯತೆ ಇದೆ.

ಗ್ರಾಮದ ನಿವಾಸಿ ನವೀನ್ ಗುತ್ತಿಕೇವಿ ಮಾತನಾಡಿ, “ಮಾದರಸನಕೊಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಲವು ವರ್ಷಗಳಿಂದ ಸಂಪೂರ್ಣ ಹಾಳಾಗಿದೆ. ಮಳೆ ಬಂದರೆ ರಸ್ತೆ ಕೆಸರಿನಿಂದ ತುಂಬಿ ವಾಹನ ಸಂಚಾರ ಅಸಾಧ್ಯವಾಗುತ್ತದೆ. ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿ ಶೀಘ್ರದಲ್ಲೇ ಡಾಂಬರೀಕರಣ ಕಾಮಗಾರಿ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಗ್ರಾಮದ ರಸ್ತೆ ಸಮಸ್ಯೆ ಬಗೆಹರಿದರೆ ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರಿಗೆ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಜಾಹೀರಾತು