ಶಿವಮೊಗ್ಗ(ಆನಂದಪುರ, ಜು).21: ಮೀನು ಕೃಷಿಯು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯ ತರುವ ಲಾಭದಾಯಕ ಕೃಷಿ ಚಟುವಟಿಕೆಯಾಗಿದ್ದು, ರೈತರು ವೈಜ್ಞಾನಿಕ ಪದ್ಧತಿಯಲ್ಲಿ ಮೀನು ಸಾಕಾಣಿಕೆ ಕೈಗೊಳ್ಳುವ ಮೂಲಕ ಉತ್ತಮ ಆರ್ಥಿಕ ಪ್ರಗತಿಯನ್ನು ಸಾಧಿಸಬಹುದು ಎಂದು ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ. ಶಾಮರಾವ ಜಾಗೀರದಾರ ಹೇಳಿದರು.
ವಿಶ್ವವಿದ್ಯಾಲಯದ ಇರುವಕ್ಕಿ ಆವರಣದಲ್ಲಿ ಆಯೋಜಿಸಿದ್ದ ಒಂದು ದಿನದ ಉಚಿತ ಮೀನು ಕೃಷಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ವೈಜ್ಞಾನಿಕ ವಿಧಾನದಲ್ಲಿ ಮೀನು ಸಾಕಾಣಿಕೆ ಕೈಗೊಂಡರೆ ಗ್ರಾಮೀಣ ಯುವಕರಿಗೆ ಸ್ವಯಂ ಉದ್ಯೋಗದ ಅವಕಾಶಗಳ ಜೊತೆಗೆ ಆರ್ಥಿಕ ಸ್ವಾವಲಂಬನೆಯನ್ನೂ ಸಾಧಿಸಲು ಸಾಧ್ಯವಾಗುತ್ತದೆ. ರೈತರು ಹಾಗೂ ಆಸಕ್ತರು ವಿಶ್ವವಿದ್ಯಾಲಯದ ತಜ್ಞರ ಮಾರ್ಗದರ್ಶನ ಪಡೆದು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ವಿಶ್ವವಿದ್ಯಾಲಯವು ಕಾಲಕಾಲಕ್ಕೆ ಇಂತಹ ಉಚಿತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಆಧುನಿಕ ಕೃಷಿ ಹಾಗೂ ಮೀನುಗಾರಿಕೆ ತಂತ್ರಜ್ಞಾನವನ್ನು ರೈತರ ಮನೆಬಾಗಿಲಿಗೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಮೀನುಗಾರ ಸಂಘದ ಅಧ್ಯಕ್ಷ ಡಾ. ದೇವಿ ಪ್ರಸಾದ್ ಹೆಜ್ಮಾಡಿ ಮಾತನಾಡಿ, ಮೀನು ಕೃಷಿಯು ಇಂದಿನ ದಿನಗಳಲ್ಲಿ ರೈತರಿಗೆ ಹಾಗೂ ಗ್ರಾಮೀಣ ಯುವಕರಿಗೆ ಉತ್ತಮ ಆದಾಯ ತರುವ ಉದ್ಯಮವಾಗಿ ಬೆಳೆಯುತ್ತಿದೆ. ವೈಜ್ಞಾನಿಕ ಮೀನು ಸಾಕಾಣಿಕೆ ವಿಧಾನಗಳು, ಗುಣಮಟ್ಟದ ಮೀನು ಮರಿಗಳ ಆಯ್ಕೆ, ಸಮರ್ಪಕ ಆಹಾರ ನಿರ್ವಹಣೆ ಹಾಗೂ ರೋಗ ನಿಯಂತ್ರಣ ಕ್ರಮಗಳನ್ನು ಅನುಸರಿಸುವ ಮೂಲಕ ಉತ್ತಮ ಉತ್ಪಾದನೆ ಮತ್ತು ಹೆಚ್ಚಿನ ಲಾಭ ಗಳಿಸಬಹುದಾಗಿದೆ. ಇಂತಹ ತರಬೇತಿ ಕಾರ್ಯಕ್ರಮಗಳು ಮೀನು ಕೃಷಿಕರಲ್ಲಿ ತಾಂತ್ರಿಕ ಜ್ಞಾನವನ್ನು ಹೆಚ್ಚಿಸಿ, ಆತ್ಮವಿಶ್ವಾಸ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ವಿಸ್ತರಣಾ ನಿರ್ದೇಶಕರಾದ ಡಾ. ರಾಘವೇಂದ್ರ ಕೆ. ಮೇಸ್ತ ಮಾತನಾಡಿ, ವಿಶ್ವವಿದ್ಯಾಲಯವು ರೈತರಿಗೆ ಅಗತ್ಯವಿರುವ ತಾಂತ್ರಿಕ ಜ್ಞಾನವನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಕೃಷಿ, ತೋಟಗಾರಿಕೆ ಹಾಗೂ ಮೀನು ಕೃಷಿಗೆ ಸಂಬಂಧಿಸಿದ ವಿವಿಧ ಉಚಿತ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ. ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಂಡರೆ ಮೀನು ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆ ಹಾಗೂ ಉತ್ತಮ ಆದಾಯ ಗಳಿಸಲು ಸಾಧ್ಯವಾಗುತ್ತದೆ. ರೈತರು ತರಬೇತಿಯಲ್ಲಿ ಪಡೆದ ಜ್ಞಾನವನ್ನು ತಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಂಡು ಆತ್ಮನಿರ್ಭರರಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮೀನುಗಾರ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಡಿ. ರವಿ ಕುಮಾರ್, ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ರಾಮಕೃಷ್ಣ ಹೆಗಡೆ, ಸಹಾಯಕ ಪ್ರಾಧ್ಯಾಪಕರಾದ ಡಾ. ಶಾಂತನಗೌಡ, ಸಹಾಯಕ ನಿರ್ದೇಶಕ ರಾಘವೇಂದ್ರ. ಕೆ.ಎಸ್., ಡಾ. ಕೃಷ್ಣಾ ರೆಡ್ಡಿ, ಸಹ ವಿಸ್ತರಣಾ ನಿರ್ದೇಶಕ ಡಾ. ಬಿ ಸಿ ಹನುಮಂತ ಸ್ವಾಮಿ ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು, ವಿವಿಧ ವಿಭಾಗಗಳ ಸಿಬ್ಬಂದಿ, ರೈತರು, ಮೀನು ಕೃಷಿಕರು ಹಾಗೂ ತರಬೇತಿಯಲ್ಲಿ ಭಾಗವಹಿಸಿದ್ದ ಆಸಕ್ತರು ಉಪಸ್ಥಿತರಿದ್ದರು.
ಜಾಹೀರಾತು












