ಒಂದು ಹೆಣ್ಣಿನ ಆಕ್ರಂದನ – ಸಮಾಜಕ್ಕೆ ಒಂದು ಬಹಿರಂಗ ಪತ್ರ
ನಾನು ಹೆಣ್ಣು…ಹೌದು, ಅದೇ ಹೆಣ್ಣು. ನಿಮ್ಮ ಮನೆಯಲ್ಲಿ ತಾಯಿಯಾಗಿ, ಅಕ್ಕನಾಗಿ, ತಂಗಿಯಾಗಿ, ಮಗಳಾಗಿ, ಸ್ನೇಹಿತೆಯಾಗಿ, ಪತ್ನಿಯಾಗಿ ಬದುಕುವ ಹೆಣ್ಣು.ಆದರೆ ಇಂದು ನಾನು ನನ್ನ ಪರಿಚಯವನ್ನು ಹೇಳಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಏಕೆಂದರೆ ಈ ಸಮಾಜದಲ್ಲಿ ನಾನು ಯಾರು ಎನ್ನುವುದಕ್ಕಿಂತ, ನನ್ನ ದೇಹವನ್ನು ಹೇಗೆ ನೋಡುತ್ತಾರೆ ಎಂಬುದೇ ಹೆಚ್ಚು ಮುಖ್ಯವಾಗಿಬಿಟ್ಟಿದೆ.
ನಾನು ಇಂದು ನಿಮ್ಮ ಮುಂದೆ ಲೇಖಕಿಯಾಗಿ ಬಂದಿಲ್ಲ;
ಪ್ರತಿದಿನ ಭಯದೊಂದಿಗೆ ಮನೆ ಬಿಟ್ಟು ಹೊರಡುವ ಲಕ್ಷಾಂತರ ಹೆಣ್ಣುಮಕ್ಕಳ ಧ್ವನಿಯಾಗಿ ಈ ಮಾತುಗಳನ್ನು ಹೇಳುತ್ತಿದ್ದೇನೆ.
ಪ್ರತಿ ದಿನ ಪತ್ರಿಕೆ ತೆರೆದಾಗ, ಸುದ್ದಿ ವಾಹಿನಿ ನೋಡಿದಾಗ ಅಥವಾ ಮೊಬೈಲ್‌ನಲ್ಲಿ ಸುದ್ದಿ ಓದಿದಾಗ, ಮತ್ತೊಬ್ಬ ಹೆಣ್ಣುಮಗಳ ಅತ್ಯಾಚಾರ, ಕೊಲೆ ಅಥವಾ ದೌರ್ಜನ್ಯದ ಸುದ್ದಿ ಕಣ್ಣಿಗೆ ಬೀಳುತ್ತದೆ. ಆ ಸುದ್ದಿಯಲ್ಲಿ ಹೆಸರು ಮಾತ್ರ ಬದಲಾಗುತ್ತದೆ; ನೋವು ಮಾತ್ರ ಒಂದೇ ಆಗಿರುತ್ತದೆ.
ನೋವಿನಿಂದ ನಾನು ಕೇಳುತ್ತೇನೆ…
ಹೆಣ್ಣಾಗಿ ಹುಟ್ಟಿರುವುದು ನನ್ನ ಅಪರಾಧವೇ?
ನನ್ನ ನಗುವನ್ನು ತಪ್ಪಾಗಿ ಅರ್ಥೈಸುವ ಮನಸ್ಸು ಯಾರದು?
ನನ್ನ ಸ್ವಾತಂತ್ರ್ಯವನ್ನು ತಮ್ಮ ಹಕ್ಕು ಎಂದುಕೊಳ್ಳುವ ಧೈರ್ಯ ಯಾರಿಗೆ ಕೊಟ್ಟಿದ್ದು?.ನನ್ನ “ಇಲ್ಲ” ಎಂಬ ಒಂದು ಪದವನ್ನು ಒಪ್ಪಿಕೊಳ್ಳಲಾಗದಷ್ಟು ನಿಮ್ಮ ಪುರುಷತ್ವ ದುರ್ಬಲವಾಗಿದೆಯೇ?
ನವರಾತ್ರಿಯಲ್ಲಿ ನನ್ನನ್ನೇ ದೇವಿಯ ರೂಪವೆಂದು ಪೂಜಿಸುತ್ತೀರಿ. ನನ್ನ ಕಾಲಿಗೆ ನಮಸ್ಕರಿಸುತ್ತೀರಿ. ಹೂವು ಅರ್ಪಿಸುತ್ತೀರಿ.
ಆದರೆ ಅದೇ ಸಮಾಜದಲ್ಲಿ ಬದುಕಿರುವ ಹೆಣ್ಣನ್ನು ನೋಡಿದಾಗ ನಿಮ್ಮ ದೃಷ್ಟಿ ಏಕೆ ಬದಲಾಗುತ್ತದೆ?
ನನಗೆ ಒಂದು ಪ್ರಶ್ನೆಗೆ ಉತ್ತರ ಸಿಗದಂತಾಗಿದೆ …
ಹೆಣ್ಣು ದೇವಿಯೇ… ಅಥವಾ ಕಾಮದ ವಸ್ತುವೇ?
ಒಂದು ದಿನ “ಅಮ್ಮ” ಎಂದು ಕರೆಯುವ ನಾಲಿಗೆಯೇ ಮತ್ತೊಂದು ದಿನ ಮತ್ತೊಬ್ಬ ಹೆಣ್ಣಿನ ಗೌರವವನ್ನು ತುಳಿಯಲು ಹೇಗೆ ಸಿದ್ಧವಾಗುತ್ತದೆ?ಒಬ್ಬ ತಾಯಿಯ ಹೊಟ್ಟೆಯಲ್ಲಿ ಹುಟ್ಟಿ, ಅದೇ ತಾಯಿಯಂತೆಯೇ ಇರುವ ಇನ್ನೊಬ್ಬ ಹೆಣ್ಣಿನ ಬದುಕನ್ನು ಹಾಳು ಮಾಡುವ ಮನಸ್ಸು ಹೇಗೆ ಬರುತ್ತದೆ?
ನಿಮ್ಮ ಕಾಮ ಕ್ಷಣಿಕವಾಗಿರಬಹುದು.ಆದರೆ ಅದರ ಪರಿಣಾಮವಾಗಿ ಒಬ್ಬ ಹೆಣ್ಣಿನ ಜೀವನವಿಡೀ ಕತ್ತಲೆಯಾಗುತ್ತದೆ.
ಅವಳ ಕನಸುಗಳು ಸಾಯುತ್ತವೆ.ಅವಳ ಆತ್ಮವಿಶ್ವಾಸ ಮುರಿಯುತ್ತದೆ.ಅವಳ ಕುಟುಂಬ ಪ್ರತಿದಿನ ಸಾಯುತ್ತದೆ.

ಕೆಲವರು ಕೇಳುತ್ತಾರೆ…
“ಹೆಣ್ಣು ಹೇಗೆ ಬಟ್ಟೆ ಹಾಕಿದ್ದಳು?”
“ಅವಳು ರಾತ್ರಿ ಏಕೆ ಹೊರಗಿದ್ದಳು?”
“ಅವಳು ಯಾರ ಜೊತೆ ಮಾತನಾಡುತ್ತಿದ್ದಳು?”
ಆದರೆ ಅಂಥವರಿಗೆ ನಾನು ಕೇಳುತ್ತೇನೆ…
ಅತ್ಯಾಚಾರ ಮಾಡುವವನನ್ನು ಕೇಳುವ ಪ್ರಶ್ನೆಗಳು ಎಲ್ಲಿವೆ?
ಅವನ ಸಂಸ್ಕಾರವನ್ನು ಯಾರು ಪ್ರಶ್ನಿಸುತ್ತಾರೆ?
ಅವನ ಮನೆತನವನ್ನು ಯಾರು ಪ್ರಶ್ನಿಸುತ್ತಾರೆ?
ಹೆಣ್ಣಿನ ಬದುಕನ್ನು ವಿಚಾರಣೆಗೆ ಒಳಪಡಿಸುವ ಸಮಾಜ, ಗಂಡಸಿನ ಮನಸ್ಥಿತಿಯನ್ನು ಏಕೆ ವಿಚಾರಿಸುವುದಿಲ್ಲ?
ಇಂದು ನನಗೆ ಕೇವಲ ಅಪರಿಚಿತರಿಂದ ಭಯವಿಲ್ಲ.
ಪರಿಚಿತರಿಂದಲೂ ಭಯವಿದೆ.
ಬಂಧುಗಳಿಂದಲೂ ಭಯವಿದೆ.
ಸ್ನೇಹಿತರಿಂದಲೂ ಭಯವಿದೆ.
ಗುರುತು ಇರುವ ಮುಖಗಳಿಂದಲೂ ಭಯವಿದೆ.
ಇದು ನಾನು ಬದುಕುತ್ತಿರುವ ಸಮಾಜದ ಅತ್ಯಂತ ದೊಡ್ಡ ದುರಂತ.
ನಾನು ಇಂದು ಎಲ್ಲ ಗಂಡಸರನ್ನು ದೂಷಿಸುತ್ತಿಲ್ಲ.
ಏಕೆಂದರೆ ನನ್ನ ಬದುಕಿನಲ್ಲಿ ನನ್ನನ್ನು ಗೌರವಿಸಿದ ತಂದೆಯೂ ಇದ್ದಾನೆ.ನನ್ನನ್ನು ರಕ್ಷಿಸಿದ ಸಹೋದರನೂ ಇದ್ದಾನೆ.
ನನ್ನ ಕನಸುಗಳಿಗೆ ಬೆಂಬಲವಾದ ಗೆಳೆಯರು ಇದ್ದಾರೆ.
ನಿಜವಾದ ಪುರುಷ ಎಂದರೆ ಮಹಿಳೆಯನ್ನು ಭಯಪಡಿಸುವವನು ಅಲ್ಲ; ಅವಳಿಗೆ ಭದ್ರತೆಯ ಭಾವನೆ ನೀಡುವವನು.
ಆದರೆ ಹೆಣ್ಣಿನ ದೇಹವನ್ನು ತನ್ನ ಹಕ್ಕು ಎಂದುಕೊಳ್ಳುವ ಮನಸ್ಸಿನವರಿಗೆ ಒಂದು ಮಾತು…
ನೀವು ಪುರುಷರಲ್ಲ.ನಿಮ್ಮೊಳಗಿನ ಕಾಮವೇ ನಿಮ್ಮ ಮಾನವೀಯತೆಯನ್ನು ಕೊಂದಿದೆ.
ಒಬ್ಬ ಹೆಣ್ಣಿನ “ಇಲ್ಲ” ಅನ್ನು ಒಪ್ಪಿಕೊಳ್ಳಲು ಆಗದವನು ಪ್ರೀತಿಸಲು ಅರ್ಹನಲ್ಲ.ಅವಳ ದೇಹವನ್ನು ಗೆಲ್ಲಬಹುದು ಎಂದುಕೊಳ್ಳಬಹುದು.
ಆದರೆ ಅವಳ ಆತ್ಮಗೌರವವನ್ನು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ.
ಇನ್ನು ನಮ್ಮ ಸಮಾಜ
ಇನ್ನು ಹೆಣ್ಣುಮಕ್ಕಳಿಗೆ “ಜಾಗ್ರತೆ” ಎಂದು ಹೇಳುವುದನ್ನು ಸ್ವಲ್ಪ ಕಡಿಮೆ ಮಾಡಬೇಕಿದೆ,ಗಂಡುಮಕ್ಕಳಿಗೆ “ಗೌರವ ಕಲಿಯಿರಿ” ಎಂದು ಹೇಳುವುದನ್ನು ಆರಂಭಿಸಬೇಕಾಗಿದೆ.ಮಗಳ ಸ್ವಾತಂತ್ರ್ಯಕ್ಕೆ ಬೇಲಿ ಹಾಕುವ ಬದಲು, ಮಗನ ಮನಸ್ಸಿಗೆ ಸಂಸ್ಕಾರದ ಗಡಿ ಹಾಕಬೇಕಾಗಿದೆ.ಹೆಣ್ಣಿಗೆ ಆತ್ಮರಕ್ಷಣೆ ಕಲಿಸುವುದರ ಜೊತೆಗೆ, ಗಂಡಸಿಗೆ ಆತ್ಮನಿಯಂತ್ರಣವನ್ನೂ ಕಲಿಸಬೇಕಾಗಿದೆ ಅದೇ ನಿಜವಾದ ಶಿಕ್ಷಣ.
ಅದೇ ನಿಜವಾದ ನಾಗರಿಕತೆ.ನನಗೆ ಕರುಣೆ ಬೇಡ.ನನಗೆ ವಿಶೇಷ ಸ್ಥಾನಮಾನವೂ ಬೇಡ.ನನಗೆ ಬೇಕಾಗಿರುವುದು ಒಂದೇ ಒಂದು ವಿಷಯ…

ಒಬ್ಬ ಮನುಷ್ಯಳಾಗಿ ಬದುಕುವ ಹಕ್ಕು.ನನ್ನ ನಗುವಿಗೆ ಅರ್ಥ ಹುಡುಕಬೇಡಿ.ನನ್ನ ಮೌನವನ್ನು ದುರ್ಬಲತೆ ಎಂದುಕೊಳ್ಳಬೇಡಿ.
ನನ್ನ ಉಡುಪನ್ನು ನನ್ನ ವ್ಯಕ್ತಿತ್ವದ ಅಳತೆಯನ್ನಾಗಿಸಬೇಡಿ.
ನನ್ನ ಒಪ್ಪಿಗೆಯಿಲ್ಲದೆ ನನ್ನ ಜೀವನದ ಮೇಲೆ ಯಾರಿಗೂ ಹಕ್ಕಿಲ್ಲ.
ಕೊನೆಯದಾಗಿ…ನಾನು ದೇವಿಯಾಗಬೇಕೆಂದು ಬಯಸುವುದಿಲ್ಲ.
ದೇವಾಲಯದಲ್ಲಿ ಪೂಜೆ ಮಾಡುವ ಮೊದಲು, ರಸ್ತೆಯಲ್ಲಿ ನಡೆಯುವ ಹೆಣ್ಣನ್ನು ಗೌರವಿಸುವ ಸಮಾಜ ಬೇಕು.
ನನ್ನ ಹೆಜ್ಜೆಗಳಿಗೆ ಭಯವಲ್ಲ, ಭರವಸೆ ಜೊತೆಯಾಗಿರುವ ನಾಳೆ ಬೇಕು.ಏಕೆಂದರೆ…ನಾನು ದೇವಿಯಲ್ಲ…
ನಾನು ಕೇವಲ ಕಾಮದ ವಸ್ತುವೂ ಅಲ್ಲ…
ನಾನು ಬದುಕುವ ಹಕ್ಕಿರುವ ಒಬ್ಬ ಮನುಷ್ಯಳು.
ನಮ್ಮ ಟೀನ್ ಏಜ್ ಪೀಳಿಗೆಗಂತೂ ಇಂದು “ಪ್ರೀತಿ” ಎಂಬ ಪದವನ್ನು ಉಚ್ಚರಿಸುವುದು ಸುಲಭವಾಗಿದೆ. ಆದರೆ ಅದರ ಅರ್ಥವನ್ನು ಬದುಕುವುದು ಕಷ್ಟವಾಗಿದೆ. ಪ್ರೀತಿ ಎಂಬ ಹೆಸರಿನಲ್ಲಿ ಮೋಸ, ವಂಚನೆ, ಸ್ವಾರ್ಥ, ಬೆದರಿಕೆ ಮತ್ತು ಹಿಂಸೆ ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ನಿಜವಾದ ಪ್ರೀತಿಯ ಅರ್ಥವನ್ನೇ ನಾವು ಮರೆತಿದ್ದೇವೆಯೇ ಎಂಬ ಪ್ರಶ್ನೆ ಕಾಡುತ್ತದೆ. ಸಮಾಜದಲ್ಲಿನ
ಗಂಡಸರಿಗೆ ನನ್ನ ವಿನಂತಿ…
ನೀನು ನಿಜವಾಗಿಯೂ ಪ್ರೀತಿಸುತ್ತಿದ್ದರೆ, ಅವಳನ್ನು ನಿನ್ನ ಸ್ವತ್ತಾಗಿ ಅಲ್ಲ, ಸ್ವತಂತ್ರ ವ್ಯಕ್ತಿಯಾಗಿ ನೋಡು. ಅವಳು ನಿನ್ನನ್ನು ನಿರಾಕರಿಸಿದರೆ, ಅವಳ ನಿರ್ಧಾರವನ್ನು ಗೌರವಿಸು. ಪ್ರೀತಿಯನ್ನು ಬಲವಂತದಿಂದ ಪಡೆಯಲು ಸಾಧ್ಯವಿಲ್ಲ; ಗೌರವದಿಂದ ಮಾತ್ರ ಗಳಿಸಲು ಸಾಧ್ಯ. ಮೋಸ ಮಾಡಿ ಗೆಲ್ಲುವ ಸಂಬಂಧಗಳು ಕ್ಷಣಿಕ; ನಂಬಿಕೆಯಿಂದ ಕಟ್ಟಿದ ಸಂಬಂಧಗಳು ಶಾಶ್ವತ.
ಹಾಗೆ ಸಮಾಜದಲ್ಲಿನ ಹೆಣ್ಣು ಮಕ್ಕಳಿಗೆ
ನನ್ನ ಮನವಿ…
ನಿನ್ನನ್ನು ಗೌರವಿಸದವನು ನಿನ್ನನ್ನು ಪ್ರೀತಿಸುವುದಿಲ್ಲ. ನಿನ್ನ ಕನಸುಗಳನ್ನು ಮುರಿದು, ನಿನ್ನ ಸ್ವಾಭಿಮಾನವನ್ನು ಕಳೆಸಿ, ನಿನ್ನನ್ನು ನಿಯಂತ್ರಿಸಲು ಪ್ರಯತ್ನಿಸುವ ಸಂಬಂಧವನ್ನು ಪ್ರೀತಿ ಎಂದು ನಂಬಬೇಡ. ನಿಜವಾದ ಪ್ರೀತಿ ನಿನ್ನನ್ನು ಚಿಕ್ಕವಳನ್ನಾಗಿ ಮಾಡುವುದಿಲ್ಲ; ಇನ್ನಷ್ಟು ದೃಢವಾಗಿ ಬೆಳೆಯಲು ಪ್ರೇರೇಪಿಸುತ್ತದೆ.
ನಮ್ಮ ಸಂಸ್ಕೃತಿಯಲ್ಲಿ ಪ್ರೀತಿಯ ಕಥೆಗಳು ಕೇವಲ ಇಬ್ಬರು ವ್ಯಕ್ತಿಗಳ ಕಥೆಗಳಲ್ಲ; ಅವು ವಿಶ್ವಾಸ, ಧರ್ಮ, ತ್ಯಾಗ, ಪರಸ್ಪರ ಗೌರವ ಮತ್ತು ನಿಷ್ಠೆಯ ಮೌಲ್ಯಗಳನ್ನು ನೆನಪಿಸುವ ಸಂಕೇತಗಳಾಗಿವೆ. ಸೀತೆ–ರಾಮರ ಬದುಕು ಧರ್ಮ, ಜವಾಬ್ದಾರಿ ಮತ್ತು ನಿಷ್ಠೆಯ ಮೌಲ್ಯವನ್ನು ನೆನಪಿಸಿದರೆ, ರಾಧಾ–ಕೃಷ್ಣರ ಸಂಬಂಧವು ಪ್ರೀತಿಯ ಆಧ್ಯಾತ್ಮಿಕತೆ ಮತ್ತು ಆತ್ಮೀಯತೆಯ ಸಂಕೇತವಾಗಿ ಅನೇಕರು ಕಾಣುತ್ತಾರೆ. ಈ ಕಥೆಗಳನ್ನು ನಾವು ಕೇವಲ ಪೂಜಿಸಲು ಅಲ್ಲ, ಅವುಗಳಿಂದ ಗೌರವ, ನಂಬಿಕೆ ಮತ್ತು ಹೊಣೆಗಾರಿಕೆಯ ಮೌಲ್ಯಗಳನ್ನು ಕಲಿಯಲು ನೆನಪಿಸಿಕೊಳ್ಳಬೇಕು.
ಪ್ರೀತಿ ಎಂದರೆ ಯಾರನ್ನಾದರೂ ಪಡೆಯುವುದು ಅಲ್ಲ…
ಪ್ರೀತಿ ಎಂದರೆ ಅವರನ್ನು ಗೌರವಿಸುವುದು.
ಪ್ರೀತಿ ಎಂದರೆ ಸ್ವಾರ್ಥವಲ್ಲ…
ಪ್ರೀತಿ ಎಂದರೆ ತ್ಯಾಗ ಮತ್ತು ವಿಶ್ವಾಸ.
ಪ್ರೀತಿ ಎಂದರೆ ದೇಹವಲ್ಲ…
ಪ್ರೀತಿ ಎಂದರೆ ಮನಸ್ಸಿನ ಪಾವಿತ್ರ್ಯ.
ಈ ಸಮಾಜಕ್ಕೆ ಇಂದು ಬೇಕಾಗಿರುವುದು ಪ್ರೀತಿಯ ಹೆಸರಿನಲ್ಲಿ ಜೀವಗಳನ್ನು ಕಸಿಯುವವರು ಅಲ್ಲ; ಪ್ರೀತಿಯ ಹೆಸರಿನಲ್ಲಿ ಜೀವನಗಳನ್ನು ಕಟ್ಟುವವರು.
ಕೊನೆಯದಾಗಿ ಒಂದು ಮಾತು…
ಒಬ್ಬ ಹೆಣ್ಣಿನ ಕಣ್ಣೀರಿನ ಮೇಲೆ ಯಾವ ಪ್ರೀತಿಯೂ ಕಟ್ಟಲಾಗುವುದಿಲ್ಲ.
ಒಬ್ಬ ಗಂಡಸಿನ ಗೌರವ, ಒಬ್ಬ ಹೆಣ್ಣಿನ ಸುರಕ್ಷತೆ ಮತ್ತು ಇಬ್ಬರ ಪರಸ್ಪರ ನಂಬಿಕೆಯ ಮೇಲೆಯೇ ನಿಜವಾದ ಪ್ರೀತಿಯ ಅಡಿಪಾಯ ನಿರ್ಮಾಣವಾಗುತ್ತದೆ.ಪ್ರೀತಿಯನ್ನು ಪವಿತ್ರವಾಗಿಯೇ ಉಳಿಸೋಣ…ಹೆಣ್ಣನ್ನು ಗೌರವದಿಂದಲೇ ಕಾಣೋಣ…
ಮಾನವೀಯತೆಯನ್ನು ನಮ್ಮ ಸಂಬಂಧಗಳ ಮೊದಲ ಭಾಷೆಯನ್ನಾಗಿಸೋಣ.

ಬರಹ..✒️.. ನಂದಿತಾ ಎನ್
ಕುವೆಂಪು ವಿಶ್ವವಿದ್ಯಾಲಯ ,ಶಂಕರಘಟ್ಟ
ಜಾಹೀರಾತು












