✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ (ಆನಂದಪುರ): ಕೃಷಿ ಇಲಾಖೆಯಲ್ಲಿ ಕೃಷಿ ಅಧಿಕಾರಿ (ಎಒ) ಹಾಗೂ ಸಹಾಯಕ ಕೃಷಿ ಅಧಿಕಾರಿ (ಎಎಒ) ಹುದ್ದೆಗಳ ನೇಮಕಾತಿಯಲ್ಲಿ ಇಲಾಖೆಯ ‘ವೃಂದ ಮತ್ತು ನೇಮಕಾತಿ’ (ಸಿ ಅಂಡ್ ಆರ್) ನಿಯಮಗಳನ್ನು ಗಾಳಿಗೆ ತೂರಿ ಅನ್ಯ ಪದವೀಧರರಿಗೆ ಅವಕಾಶ ನೀಡಿರುವುದನ್ನು ವಿರೋಧಿಸಿ, ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಪದವೀಧರರು ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗಿದ್ದು ಇದರಂತೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಇರುವಕ್ಕಿ ಪದವಿ ವಿದ್ಯಾರ್ಥಿಗಳು ವಿವಿಯಿಂದ ಆನಂದಪುರ ಬಸ್ ನಿಲ್ದಾಣದವರೆಗೆ ಮಳೆಯಲ್ಲಿ ಘೋಷಣೆ ಕೂಗುತ್ತಾ ಮನವಿಯನ್ನು ಮಾನ್ಯ ಮುಖ್ಯಮಂತ್ರಿಗೆ ಉಪತಾಸಿಲ್ದಾರ್ ಶಾಂತಮೂರ್ತಿ ಮೂಲಕ ನೀಡಿ ಮಾತನಾಡಿದರು.
“ಕೃಷಿ ಅಧಿಕಾರಿ ಹುದ್ದೆಗಳು ತಾಂತ್ರಿಕ ಹಾಗೂ ಅತ್ಯಂತ ಜವಾಬ್ದಾರಿಯುತ ಹುದ್ದೆಗಳಾಗಿವೆ. ನಿಯಮಗಳ ಪ್ರಕಾರ ಇವುಗಳಿಗೆ ಸೂಕ್ತ ಕೃಷಿ ಶಿಕ್ಷಣ ಮತ್ತು ಕ್ಷೇತ್ರ ಮಟ್ಟದ ತರಬೇತಿ ಹೊಂದಿದ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಬೇಕು. ಆದರೆ, ಪ್ರಸ್ತುತ ನೇಮಕಾತಿಯಲ್ಲಿ ಖಾಸಗಿ ವಿಶ್ವವಿದ್ಯಾಲಯದ (ರಾಯ್ ಟೆಕ್) ವಿದ್ಯಾರ್ಥಿಗಳಿಗೆ ಹಾಗೂ ಬಿ.ಇ. ಬಯೋಟೆಕ್ನಾಲಜಿ ಪದವೀಧರರಿಗೂ ಅರ್ಹತೆ ನೀಡಿರುವುದು ಕೃಷಿ ಪದವೀಧರರ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ” ಎಂದು ಕೆಳದಿ ಶಿವಪ್ಪನಾಯಕ ಕೃಷಿ ವಿ.ವಿ. ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಪ್ರಕಟಿಸಲಾಗಿರುವ ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ನೇಮಕಾತಿ ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯಬೇಕು.ಕೃಷಿ ಇಲಾಖೆಯ ಎಲ್ಲಾ ತಾಂತ್ರಿಕ ಹುದ್ದೆಗಳಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ (ICAR) ಮಾನ್ಯತೆ ಪಡೆದ ಪದವೀಧರರಿಗೆ ಮಾತ್ರ ಅವಕಾಶ ನೀಡಬೇಕು.ರಾಜ್ಯದಲ್ಲಿರುವ ಖಾಸಗಿ ಕೃಷಿ ಕಾಲೇಜುಗಳಲ್ಲಿ 2026-27ನೇ ಶೈಕ್ಷಣಿಕ ವರ್ಷದಿಂದ ಹೊಸ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಸಂಪೂರ್ಣವಾಗಿ ತಡೆಹಿಡಿಯಬೇಕು. ಬೋಧನಾ ಗುಣಮಟ್ಟ ಹಾಗೂ ಮೂಲಸೌಕರ್ಯದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು.
ಸರ್ಕಾರಿ ನೀತಿಯಂತೆ ಕೃಷಿ ಇಲಾಖೆ ನೇಮಕಾತಿಯಲ್ಲೂ ಶೇಕಡ 2 ರಷ್ಟು ಕ್ರೀಡಾ ಮೀಸಲಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು.ಕೃಷಿ ವಿಜ್ಞಾನದ ಮೂಲ ಪರಿಜ್ಞಾನವಿಲ್ಲದವರಿಗೆ ತರಬೇತಿ ನೀಡಿ ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಕ್ಕೆ ಅವಕಾಶ ನೀಡುವ ‘ದೇಸಿ’ ಕಾರ್ಯಕ್ರಮವನ್ನು ತಕ್ಷಣವೇ ರದ್ದುಪಡಿಸಬೇಕು. ಕೃಷಿ ಪರಿಕರ ಮಾರಾಟಕ್ಕೆ ಕೃಷಿ ಪದವಿಯನ್ನೇ ಕಡ್ಡಾಯಗೊಳಿಸಬೇಕು ಎಂದು ತಮ್ಮ ಬೇಡಿಕೆಯನ್ನು ಕೃಷಿ ವಿದ್ಯಾರ್ಥಿಗಳಾದ ಕೊಟ್ರೇಶ್ ಮತ್ತು ಭಾಗ್ಯಲಕ್ಷ್ಮಿ ವ್ಯಕ್ತಪಡಿಸಿದರು.
ಸಾವಿರಾರು ಕೃಷಿ ಪದವೀಧರರ ಭವಿಷ್ಯಕ್ಕೆ ಧಕ್ಕೆಯುಂಟಾಗಿದ್ದರೂ ಸರ್ಕಾರ ಮತ್ತು ಇಲಾಖೆ ಮೌನ ವಹಿಸಿವೆ. ಹೀಗಾಗಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಎಲ್ಲಾ ಕೃಷಿ ವಿ.ವಿ. ವಿದ್ಯಾರ್ಥಿಗಳು ಶಾಂತಿಯುತ ಹಾಗೂ ಸಂವಿಧಾನಬದ್ಧವಾಗಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲು ತೀರ್ಮಾನಿಸಿದ್ದೇವೆ. ನಮ್ಮ ಬೇಡಿಕೆಗಳು ಈಡೇರುವವರೆಗೆ ಹೋರಾಟ ನಿಲ್ಲುವುದಿಲ್ಲ.”ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತೇವೆ: ದಿನೇಶ್ ಶಿರವಾಳ..!!
ವಿದ್ಯಾರ್ಥಿಗಳ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, “ರಾಜ್ಯಾದ್ಯಂತ ಕೃಷಿ ವಿದ್ಯಾರ್ಥಿಗಳಿಗೆ ನೇಮಕಾತಿ ವಿಚಾರದಲ್ಲಿ ತೀವ್ರ ಅನ್ಯಾಯವಾಗುತ್ತಿದೆ. ಇದರಿಂದಾಗಿ ನೈಜವಾಗಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ಬೀದಿಗೆ ಇಳಿಯುವ ಪರಿಸ್ಥಿತಿ ಬಂದಿದೆ. ಸರ್ಕಾರ ಏನು ಮಾಡಲು ಹೊರಟಿದೆ ಎಂಬುದು ತಿಳಿಯುತ್ತಿಲ್ಲ. ಅರ್ಹತೆ ಇರುವ ಕೃಷಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಬೇರೆಯವರಿಗೆ ಅವಕಾಶ ಮಾಡಿಕೊಡುತ್ತಿರುವುದು ತೀವ್ರ ವಿಷಾದನೀಯ ಸಂಗತಿ” ಎಂದು ಆಕ್ರೋಶ ಹೊರಹಾಕಿದರು.
“ಸರ್ಕಾರದ ಇಂತಹ ಕೆಲವೊಂದು ಹಸಿಬಿಸಿ ನಿರ್ಧಾರಗಳಿಂದ ನೈಜ ವಿದ್ಯಾರ್ಥಿಗಳಿಗೆ ತೀವ್ರ ನೋವುಂಟಾಗಿದೆ. ಕರ್ನಾಟಕ ರಾಜ್ಯ ರೈತ ಸಂಘವು ವಿದ್ಯಾರ್ಥಿಗಳ ಪರವಾಗಿ ಗಟ್ಟಿಯಾಗಿ ನಿಲ್ಲಲಿದೆ. ಮುಂಬರುವ ದಿನಗಳಲ್ಲಿ ಈ ಹೋರಾಟವನ್ನು ಇನ್ನಷ್ಟು ಉಗ್ರರೂಪಕ್ಕೆ ಕೊಂಡೊಯ್ದು, ನಿದ್ರಿಸುತ್ತಿರುವ ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸವನ್ನು ನಾವು ಮಾಡುತ್ತೇವೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮನವಿ ಕೊಡುವ ವೇಳೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್, ಕಂದಾಯ ಇಲಾಖೆಯ ಅಧಿಕಾರಿ ಕವಿರಾಜ್ ಹಾಗೂ ರೈತ ಸಂಘಟನೆ ನಾಯಕರು ಉಪಸ್ಥಿತರಿದ್ದರು. ಹೋರಾಟದಲ್ಲಿ ಕೃಷಿ ವಿದ್ಯಾರ್ಥಿಗಳಾದ ರಾಘವೇಂದ್ರ , ಪ್ರಥಮ್, ಸಾಗರಿಕ, ಕಾಶಿನಾಥ್, ಪ್ರಕೃತಿ, ನಿಧಿಶ್ರೀ, ವೈಷ್ಣವಿ ಇನ್ನಿತರ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಾಹೀರಾತು












