ಸಾಗರ (ಆನಂದಪುರ):ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಹಲವು ವರ್ಷಗಳಿಂದ ಭ್ರಷ್ಟಾಚಾರ ಹಾಗೂ ಅನ್ಯಾಯಗಳು ನಡೆಯುತ್ತಿವೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಆರೋಪಿಸಿದರು.
ಇವರು ಇಂದು ಆನಂದಪುರದಲ್ಲಿ ಪತ್ರಕರ್ತರರೊಂದಿಗೆ ಮಾತನಾಡಿ ವಿಶ್ವವಿದ್ಯಾನಿಲಯ ನಿರ್ಮಾಣಕ್ಕಾಗಿ ಸ್ಥಳೀಯ ರೈತರು ತಮ್ಮ ಭೂಮಿಯನ್ನು ನೀಡಿದ್ದು, ಇದರಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಸ್ಥಳೀಯರಿಗೆ ಆದ್ಯತೆ ನೀಡದೇ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದವರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದು ಅವರು ದೂರಿದರು.

ಪ್ರಸ್ತುತವಾಗಿ ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ಮಾನದಂಡದಂತೆ ಸಂಬಳ ನೀಡುತ್ತಿಲ್ಲ. ಈ ವಿಚಾರದಲ್ಲಿಯೂ ಅಕ್ರಮ ಹಾಗೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದಿಂದ ಶೀಘ್ರದಲ್ಲೇ ವಿಶ್ವವಿದ್ಯಾನಿಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಮುನ್ಸೂಚನೆ ನೀಡಿದ್ದಾರೆ.
ಜಾಹೀರಾತು




