Home Blog ಶಾಲಾ ಕಾಲೇಜು ಸುತ್ತ ಪೊಲೀಸರ ಕಣ್ಣು: ಪುಂಡ-ಪೋಕರಿಗಳಿಗೆ ಪಿಎಸ್‌ಐ ಪ್ರವೀಣ್ ಖಡಕ್ ಎಚ್ಚರಿಕೆ..!!

ಶಾಲಾ ಕಾಲೇಜು ಸುತ್ತ ಪೊಲೀಸರ ಕಣ್ಣು: ಪುಂಡ-ಪೋಕರಿಗಳಿಗೆ ಪಿಎಸ್‌ಐ ಪ್ರವೀಣ್ ಖಡಕ್ ಎಚ್ಚರಿಕೆ..!!

49
0

✒️..ಅಮಿತ್ ಆರ್ ಆನಂದಪುರ

ಸಾಗರ (ಆನಂದಪುರ): ಶಾಲೆಗೆ ಹೋಗುವ ಹಾಗೂ ಶಾಲೆಯಿಂದ ಹಿಂದಿರುಗುವ ಸಂದರ್ಭದಲ್ಲಿ ಪುಂಡ-ಪೋಕರಿಗಳ ಕಿರಿಕಿರಿ, ಕಿರುಕುಳ ಅಥವಾ ಅತಿವೇಗದ ವಾಹನ ಸಂಚಾರ ಕಂಡುಬಂದರೆ ಎಚ್ಚರ, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆನಂದಪುರ ಪಿಎಸ್‌ಐ ಪ್ರವೀಣ್ ಖಡಕ್ ಎಚ್ಚರಿಕೆ ನೀಡಿದರು.

ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ರಸ್ತೆ ಸುರಕ್ಷತೆ ಹಾಗೂ ಭದ್ರತೆಯ ಕುರಿತು ಶಾಲಾ ಆಡಳಿತ ಮಂಡಳಿ (SDMC), ಶಿಕ್ಷಕರು, ಸ್ಥಳೀಯರು ಹಾಗೂ ಪೊಲೀಸ್ ಇಲಾಖೆಯ ನಡುವೆ ನಡೆದ ಮಹತ್ವದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಯ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಪೊಲೀಸರು ನಿರಂತರ ಕಣ್ಣಿಟ್ಟಿರುತ್ತಾರೆ. ಪುಂಡ-ಪೋಕರಿಗಳ ಕಿರಿಕಿರಿ, ಕಿರುಕುಳ, ಗಾಂಜಾ ಸೇರಿದಂತೆ ಯಾವುದೇ ಮಾದಕ ವಸ್ತುಗಳ ಅಕ್ರಮ ಚಟುವಟಿಕೆ ಹಾಗೂ ಅತಿವೇಗದ ವಾಹನ ಸಂಚಾರ ಕಂಡುಬಂದರೆ ಯಾವುದೇ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಶಾಲೆಯಲ್ಲಿರುವ ಶಿಕ್ಷಕರ ಪೈಕಿ ಪ್ರತಿದಿನ ಕನಿಷ್ಠ 4ರಿಂದ 5 ಶಿಕ್ಷಕರಿಗೆ ರಸ್ತೆ ಸುರಕ್ಷತೆಯ ಜವಾಬ್ದಾರಿ ಹಂಚಿಕೆ ಮಾಡಬೇಕು. ಸೋಮವಾರದಿಂದ ಶನಿವಾರದವರೆಗೆ ಕರ್ತವ್ಯದ ವೇಳಾಪಟ್ಟಿ ಸಿದ್ಧಪಡಿಸಿ, ಅದನ್ನು ಶಾಲೆಯ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಬೇಕು. ಶಾಲೆ ಬಿಡುವ ಸಂದರ್ಭದಲ್ಲಿ ಶಿಕ್ಷಕರು ಕಡ್ಡಾಯವಾಗಿ ಇದ್ದು ಮಕ್ಕಳ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ರಸ್ತೆ ಸುರಕ್ಷತೆಗಾಗಿ ಅಗತ್ಯವಿರುವ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳ ವೇಗವನ್ನು ನಿಯಂತ್ರಿಸುವ ವ್ಯವಸ್ಥೆ ಮಾಡಿಕೊಡಲಾಗುವುದು. ಮಕ್ಕಳು ಸುರಕ್ಷಿತವಾಗಿ ರಸ್ತೆ ದಾಟಿದ ಬಳಿಕ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು.

ಪುಂಡ-ಪೋಕರಿಗಳ ಕಿರಿಕಿರಿ, ಕಿರುಕುಳ, ಮಾದಕ ವಸ್ತುಗಳ ಅಕ್ರಮ ಚಟುವಟಿಕೆ ಅಥವಾ ಅತಿವೇಗದ ವಾಹನ ಸಂಚಾರದಂತಹ ಘಟನೆಗಳು ಕಂಡುಬಂದಲ್ಲಿ 112 ಅಥವಾ ಪೊಲೀಸ್ ಠಾಣೆಗೆ ತಕ್ಷಣ ಮಾಹಿತಿ ನೀಡಬೇಕು. ಮಾಹಿತಿ ದೊರೆತ ಕೂಡಲೇ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ದಾಸಕೊಪ್ಪ ಸರ್ಕಲ್‌ನಲ್ಲಿ ಶಾಲೆಗೆ ತೆರಳುವ ಹಾಗೂ ಶಾಲೆಯಿಂದ ಹಿಂದಿರುಗುವ ಸಮಯದಲ್ಲಿ 112 ವಾಹನ ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಪಿಎಸ್‌ಐ ಪ್ರವೀಣ್ ತಿಳಿಸಿದರು.

ಮಕ್ಕಳ ಸುರಕ್ಷತೆ ಕೇವಲ ಪೊಲೀಸ್ ಇಲಾಖೆಯ ಜವಾಬ್ದಾರಿಯಲ್ಲ. ಶಿಕ್ಷಕರು, ಪೋಷಕರು ಹಾಗೂ ಸ್ಥಳೀಯರು ಕೂಡ ಜವಾಬ್ದಾರಿ ವಹಿಸಿ ಮಕ್ಕಳ ಸುರಕ್ಷತೆಗೆ ಸಹಕರಿಸಬೇಕು ಎಂದು ಅವರು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ರವಿಶಂಕರ್, ಉಪ ಪ್ರಾಂಶುಪಾಲ ಈಶ್ವರಪ್ಪ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ಜಾಹೀರಾತು