ಸಾಗರ (ಆನಂದಪುರ):ಅಧಿಕಾರಿಗಳಿಗೆ ಜವಾಬ್ದಾರಿ ಹಾಗೂ ಮಾನ ಮರ್ಯಾದೆ ಇದೆಯೇ? ಶಾಸಕರ ಬೆಂಬಲಿಗರಾದ ಭೂಮಾಫಿಯಾದವರೊಂದಿಗೆ ಸೇರಿಕೊಂಡು ಅವರಿಗೆ ಸಾಥ್ ನೀಡುತ್ತಿದ್ದರಲ್ಲ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಕಿಡಿಕಾರಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆನಂದಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ. 148ರಲ್ಲಿ 11.17 ಗುಂಟೆ ಗ್ರಾಮಠಾಣಾ ಜಾಗವಿದ್ದು, 15 ರಿಂದ 20 ಕೋಟಿ ರೂ. ಬೆಲೆಬಾಳುವ ಈ ಜಾಗವನ್ನು ಶಾಸಕರ ಬೆಂಬಲಿಗರಾದ ಭೂಮಾಫಿಯಾದವರು ಅಕ್ರಮವಾಗಿ ಹೊಡೆದುಕೊಳ್ಳಲು ಪ್ರಯತ್ನ ನಡೆಸಿದ್ದರು. ಇದರ ವಿರುದ್ಧವಾಗಿ ಸ್ಥಳೀಯರು ಹಾಗೂ ನಾವೆಲ್ಲರೂ ಹೋಗಿ ಪ್ರತಿಭಟಿಸಿ, ಅಧಿಕಾರಿಗಳಿಗೆ ಸೂಚಿಸಿ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲು ಮುಂದಾಗಿದ್ದೇವೆ. ಆದರೆ ಇದುವರೆಗೂ ಸ್ಥಳಕ್ಕೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಯಾಕೆ ಎಂದು ಪ್ರಶ್ನಿಸಿದರು.
ಪಿಡಿಒ ಅವರು ಇದರ ಬಗ್ಗೆ ಕಾಳಜಿ ವಹಿಸಿ ಗ್ರಾಮಠಾಣಾ ಜಾಗಕ್ಕೆ ಬೋರ್ಡ್ ಹಾಕಿಸಿದ್ದರು. ಆದರೆ ಅಕ್ರಮವಾಗಿ ಯಾರು ಆ ಜಾಗವನ್ನು ಹೊಡೆದುಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮ ಆಸ್ತಿಯನ್ನು ಹೊಡೆದುಕೊಳ್ಳಲು ಪಿಡಿಒ ಅವರು ಶಾಸಕರ ಬೆಂಬಲಿಗರಾದ ಭೂಮಾಫಿಯಾದವರಿಗೆ ಸಹಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಅವರಿಗೆ ಯಾವ ರೀತಿಯ ಒತ್ತಡ ಹಾಗೂ ಬೆದರಿಕೆ ಹಾಕಿದ್ದಾರೆ ಎಂಬುದು ನಮಗೆ ಗೊತ್ತಿದೆ. ಆದರೆ ಈಗ ಅವರನ್ನು ತಾಲೂಕು ಪಂಚಾಯಿತಿಗೆ ವರ್ಗಾವಣೆ ಮಾಡಿದ್ದಾರೆ. ಗೌತಮಪುರ ಪಿಡಿಒ ಅವರನ್ನು ಇಲ್ಲಿಗೆ ಪ್ರಭಾರವಾಗಿ ಹಾಕಿದ್ದಾರೆ. ಉತ್ತಮವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿದ್ದ ಪಿಡಿಒ ಅವರನ್ನು ವರ್ಗಾವಣೆ ಮಾಡಿರುವುದರ ಹಿಂದೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿ ಭೂಮಾಫಿಯಾದವರೊಂದಿಗೆ ಶಾಮಿಲ್ ಆಗಿ ಈ ಕೆಲಸ ಮಾಡಿದ್ದಾರೆ ಎಂದು ಇದರ ವಿರುದ್ಧ ಕಿಡಿಕಾರಿದರು.
ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗೆ ಚುನಾಯಿತ ಪ್ರತಿನಿಧಿಗಳು ಇಲ್ಲ. ಈಗ ಇರುವುದು ಶಾಸಕರು ಮಾತ್ರ. ಅವರು ಸಚಿವ ಸ್ಥಾನಕ್ಕಾಗಿ ಹೋಗಿ ಮೂರು ತಿಂಗಳಾಗಿದೆ. ಅವರ ಮೂಲಕ ಲಾಭಕ್ಕಾಗಿ ಅವರ ಬೆಂಬಲಿಗರು ಇಲ್ಲಿ ಅಧಿಕಾರ ಚಲಾಯಿಸುತ್ತಿರುವುದು ಸರಿಯಲ್ಲ.
ಪಿಡಿಒ ಅವರನ್ನು ವರ್ಗಾವಣೆ ಮಾಡಿರುವುದು ಸಮಂಜಸವಲ್ಲ. ಆದಷ್ಟು ಬೇಗನೆ ಇದನ್ನು ರದ್ದುಗೊಳಿಸಬೇಕು. ನಾವು ಇದರ ವಿರುದ್ಧ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಚೇರಿ ಮುಂದೆ ಎಚ್ಚರಿಕೆ ನೀಡಿ ಹೋರಾಟ ಮಾಡಲಿದ್ದೇವೆ ಎಂದು ಕಿಡಿಕಾರಿದರು.
ಫೋನ್ ಕರೆ ಮೂಲಕ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಕರೆಮಾಡಿ ಇದರ ವಿರುದ್ಧ ಆಕ್ರೋಶ ಹೊರಹಾಕಿ ಪಿಡಿಒ ಅವರ ವರ್ಗಾವಣೆ ರದ್ದುಗೊಳಿಸಬೇಕು ನಾವು ಇದರ ವಿರುದ್ಧ ಹೋರಾಟ ಮಾಡಲು ಸಿದ್ಧವಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೋಹನ್ ಮಾತನಾಡಿ, ಗ್ರಾಮಠಾಣಾ ಜಾಗವನ್ನು ಅಕ್ರಮವಾಗಿ ಹೊಡೆದುಕೊಳ್ಳಲು ಮುಂದಾಗಿರುವುದನ್ನು ನಾವು ರಕ್ಷಿಸಿದ್ದೇವೆ. ಆದರೆ ಇದುವರೆಗೂ ಯಾವುದೇ ಅಧಿಕಾರಿಗಳು ಸಹ ಜಾಗಕ್ಕೆ ಬಂದು ಪರಿಶೀಲನೆ ನಡೆಸಿಲ್ಲ. ಪಿಡಿಒ ಮಾತ್ರ ಜಾಗಕ್ಕೆ ತೆರಳಿ ಸೂಚನಾ ಫಲಕವನ್ನು ಹಾಕಿದ್ದರು. ಆದರೆ ಅವರು ಅಕ್ರಮವಾಗಿ ಜಾಗವನ್ನು ಹೊಡೆದುಕೊಳ್ಳಲು ಬೆಂಬಲವಾಗಿ ನಿಂತಿಲ್ಲ ಎಂಬ ಕಾರಣಕ್ಕೆ ಇದೀಗ ಅವರನ್ನು ಆಡಳಿತದ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಸಮಂಜಸವಲ್ಲ ಎಂದು ಕಿಡಿಕಾರಿದರು.
ಮಾನ್ಯ ಸಾಗರ ತಹಸೀಲ್ದಾರ್ ಅವರಿಗೆ ಇದರ ಬಗ್ಗೆ ಮನವಿ ಮಾಡುತ್ತಿದ್ದೇನೆ. ನೀವು ಒತ್ತುವರಿ ಜಾಗವನ್ನು ಎಲ್ಲೆಡೆ ತೆರವುಗೊಳಿಸುತ್ತಿದ್ದೀರಿ. ನಮ್ಮ ಆನಂದಪುರ ಗ್ರಾಮಠಾಣಾ ಜಾಗದ ಬಗ್ಗೆ ಸ್ವಲ್ಪ ನಿಗಾ ವಹಿಸಿ, ಜಾಗವನ್ನು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಗುರುರಾಜ್, ಮ್ಯಾನ್ ಕೋಸ್ ನಿರ್ದೇಶಕರಾದ ಭರಮಪ್ಪ ಅಂದಾಸರ, ಡಿಎಸ್ಎಸ್ ಸಂಚಾಲಕರಾದ ರೇವಪ್ಪ, ಹಾಗೂ ಪ್ರಮುಖರಾದ ಮೋಹನ್ , ಚೌಡಪ್ಪ, ನವೀನ ರವೀಂದ್ರ,ಹಾಗೂ ಮಂಜುನಾಥ್ ಮುರ್ಕಟ್ಟೆ ಉಪಸ್ಥಿತರಿದ್ದರು.
ಜಾಹೀರಾತು












