ಸಾಗರ: ಸರ್ಕಾರಿ ಜಮೀನು ಉಳಿಸುವ ಅಭಿಯಾನದ ಮುಂದುವರಿದ ಭಾಗವಾಗಿ ಸಾಗರ ತಾಲೂಕಿನ ಬಾರಂಗಿ ಹೋಬಳಿಯ ಭಾನುಕುಳಿ ಗ್ರಾಮದ ಸರ್ವೇ ನಂಬರ್ 44ರಲ್ಲಿ ಒಂದು ಎಕರೆಗೂ ಹೆಚ್ಚು ಜಮೀನಿನ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ತಹಶೀಲ್ದಾರ್ ಡಾ. ಪ್ರತಿಭಾ ಆರ್. ದಿಟ್ಟ ಕ್ರಮ ಕೈಗೊಂಡಿದ್ದಾರೆ.
ಸರ್ವೇ ನಂಬರ್ 44ರ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕಬ್ಬಿಣದ ಗೇಟ್ ಅಳವಡಿಸಲಾಗಿತ್ತು. ಈ ಕುರಿತು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸಕಲ ಸಿದ್ಧತೆಗಳೊಂದಿಗೆ ಸ್ಥಳಕ್ಕೆ ತೆರಳಿದ ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರ ನೇತೃತ್ವದಲ್ಲಿ ಜೆಸಿಬಿ ಮೂಲಕ ಕಬ್ಬಿಣದ ಗೇಟ್ ತೆರವುಗೊಳಿಸಿ, ಸರ್ಕಾರಿ ಜಮೀನನ್ನು ಕಂದಾಯ ಇಲಾಖೆಯ ವಶಕ್ಕೆ ಪಡೆಯಲಾಯಿತು.
ಮಳೆ ನಡುವೆಯೂ ಮುಂದುವರಿದ ಕಾರ್ಯಾಚರಣೆ

ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದರೂ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸದೆ ತಹಶೀಲ್ದಾರ್ ಹಾಗೂ ಸಿಬ್ಬಂದಿ ಕಾರ್ಯ ಮುಂದುವರಿಸಿದರು. ಕಾರ್ಯಾಚರಣೆ ವೇಳೆ ಉಂಬಳ/ಜಿಗಣೆಗಳ ಕಾಟ ಎದುರಾದರೂ ಅದನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸಿದ ತಹಶೀಲ್ದಾರ್ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಅತಿಕ್ರಮಣ ನಿಷೇಧದ ಎಚ್ಚರಿಕೆ ಫಲಕ
ಸರ್ಕಾರಿ ಜಮೀನನ್ನು ಅತಿಕ್ರಮಣದಿಂದ ರಕ್ಷಿಸುವ ಉದ್ದೇಶದಿಂದ ಸ್ವಾಧೀನಪಡಿಸಿಕೊಂಡ ಸ್ಥಳದಲ್ಲಿ ‘ಅತಿಕ್ರಮಣ ನಿಷೇಧಿಸಿದೆ’ ಎಂಬ ಎಚ್ಚರಿಕೆ ಫಲಕವನ್ನು ಅಳವಡಿಸಲಾಗಿದೆ. ಸರ್ಕಾರಿ ಜಮೀನಿಗೆ ಅತಿಕ್ರಮಣ ಪ್ರವೇಶ ಅಥವಾ ಒತ್ತುವರಿ ಮಾಡಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ತಹಶೀಲ್ದಾರ್ ಡಾ. ಪ್ರತಿಭಾ ಆರ್. ಖಡಕ್ ಎಚ್ಚರಿಕೆ
“ನಮ್ಮ ತಾಲೂಕಿನಲ್ಲಿ ಎಲ್ಲಿಯೇ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿರುವುದು ಕಂಡುಬಂದರೂ ಅಥವಾ ಅತಿಕ್ರಮಣ ಪ್ರವೇಶ ಮಾಡಿರುವುದು ಗಮನಕ್ಕೆ ಬಂದರೂ ಸಂಬಂಧಪಟ್ಟವರ ವಿರುದ್ಧ ಕಾನೂನು ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಜಮೀನಿನ ಒತ್ತುವರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ,” ಎಂದು ತಹಶೀಲ್ದಾರ್ ಡಾ. ಪ್ರತಿಭಾ ಆರ್. ಎಚ್ಚರಿಕೆ ನೀಡಿದ್ದಾರೆ.
ತೆರವು ಕಾರ್ಯಾಚರಣೆಯಲ್ಲಿ ಉಪ ತಹಶೀಲ್ದಾರ್ ಮಾಲಿನಿ, ಕಂದಾಯ ನಿರೀಕ್ಷಕ ಬೀರಪ್ಪ, ಪಿಡಿಒ ವಿಶ್ವಾಸ್, ಸರ್ವೆಯರ್ ಹನುಮಂತಪ್ಪ, ಅರಣ್ಯ ಇಲಾಖೆಯ ಅಧಿಕಾರಿ ನವೀನ್ ಕುಮಾರ್ ಸೇರಿದಂತೆ ಕಂದಾಯ ಹಾಗೂ ಸಂಬಂಧಪಟ್ಟ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದು ಕಾರ್ಯಾಚರಣೆಗೆ ಸಹಕರಿಸಿದರು.
ಜಾಹೀರಾತು












