ಶಿವಮೊಗ್ಗ: ಅಧ್ಯಾತ್ಮವೇ ಭಾರತದ ಶಕ್ತಿ. ಅಧ್ಯಾತ್ಮದ ಆಂತರ್ಯವನ್ನು ಅರಿತುಕೊಂಡು ಅದರ ಶಕ್ತಿಯ ಮೂಲಕವೇ ಭಾರತ ವಿಶ್ವಗುರುವಾಗಲು ಸಾಧ್ಯ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ಶಿವಮೊಗ್ಗದಲ್ಲಿ ಆ.17ರಂದು ನಡೆದ ‘ದಿವ್ಯ ಸಂಜೆ’ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಭಾರತದಲ್ಲಿನ ಅಧ್ಯಾತ್ಮದ ಬಗ್ಗೆ ಇಂದು ಟರ್ಕಿ, ಇರಾನ್, ಅಮೆರಿಕ, ಚೀನಾ ಹಾಗೂ ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ಕುತೂಹಲ ಮೂಡಿದೆ ಎಂದರು.
‘ವಸುಧೈವ ಕುಟುಂಬಕಂ’ ಎಂಬ ಭಾರತೀಯ ಪರಿಕಲ್ಪನೆಯಲ್ಲಿ ಮನುಷ್ಯರು ಮಾತ್ರವಲ್ಲದೆ ಭೂಮಿ, ನೀರು, ಗಾಳಿ, ಆಕಾಶ ಸೇರಿದಂತೆ ಪಂಚಭೂತಗಳು ಹಾಗೂ ವನ್ಯಜೀವಿಗಳೂ ನಮ್ಮ ಕುಟುಂಬದ ಭಾಗವಾಗಿವೆ. ಪ್ರಕೃತಿ ಸಂರಕ್ಷಣೆಯ ಉದ್ದೇಶದಿಂದ ಕರ್ನಾಟಕದಲ್ಲಿ ವಕೀಲರ ಸಂಘದ ಸಹಯೋಗದೊಂದಿಗೆ 5 ಕೋಟಿ ಸಸ್ಯಗಳನ್ನು ನೆಡುವ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.

ವ್ಯಕ್ತಿಯ ಯಶಸ್ಸನ್ನು ಕೇವಲ ಹಣದ ಆಧಾರದ ಮೇಲೆ ಅಳೆಯುತ್ತಿರುವುದು ಸಮಾಜದ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ‘ಸಕ್ಸಸ್ ಈಕ್ವಲ್ಸ್ ಟು ಮನಿ’ ಎನ್ನುವ ಸೂತ್ರವೇ ತಪ್ಪು. ನಿಸ್ವಾರ್ಥ ಸೇವಾ ಮನೋಭಾವ ಬೆಳೆಸದೆ ನೀಡುವ ಶಿಕ್ಷಣಕ್ಕೆ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.
ಮಕ್ಕಳು ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವಂತಹ ಶಿಕ್ಷಣ ಪಡೆಯಬೇಕು. ಕೇವಲ ಉದ್ಯೋಗ ಅಥವಾ ಹಣ ಗಳಿಸುವ ಗುರಿಗಿಂತಲೂ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದನ್ನು ಬೆಳೆಸಲು ಸಮಾಜ ಅವಕಾಶ ಕಲ್ಪಿಸಬೇಕು. ಎಲ್ಲರೂ ವೈದ್ಯರಾಗಬೇಕೆಂಬ ಅಗತ್ಯವಿಲ್ಲ; ಪ್ರತಿಯೊಬ್ಬ ಮಗುವಿಗೂ ತನ್ನದೇ ಆದ ಪ್ರತಿಭೆ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ನಿಸ್ವಾರ್ಥ ಸೇವೆಯೇ ಆದರ್ಶ
ಸೊರಬ ತಾಲೂಕಿನ ಕಮರೂರಿನ ಶ್ರೀ ಸತ್ಯ ಸಾಯಿ ಸರ್ವನಿಕೇತನಂ ಗುರುಕುಲದ ಪ್ರಧಾನ ಪಾಲಕರಾದ ಶಿವಪ್ರಸಾದ್ ಭಟ್ ಮಾತನಾಡಿ, ‘ಒಂದು ಜಗತ್ತು, ಒಂದು ಕುಟುಂಬ’ ಎಂಬ ಪರಿಕಲ್ಪನೆಯು ಪ್ರಪಂಚದ ಬಹುತೇಕ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು ಎಂದರು.
ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಉಚಿತ ಶಿಕ್ಷಣ, ಆರೋಗ್ಯ ಹಾಗೂ ಪೌಷ್ಟಿಕ ಆಹಾರ ಒದಗಿಸುವ ಮೂಲಕ ನಾವೆಲ್ಲರೂ ಒಂದೇ ಕುಟುಂಬದವರು ಎಂಬ ಸಂದೇಶ ಸಾರುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆ ಮಾನವಕುಲಕ್ಕೆ ಆದರ್ಶವಾಗಿದೆ ಎಂದು ಹೇಳಿದರು.
‘ನಾನು ಬದಲಾಗಿದ್ದೇನೆ’
ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡ ಸೊರಬ ತಾಲೂಕಿನ ಕಮರೂರು ಗ್ರಾಮದ ಶ್ರೀ ಸತ್ಯ ಸಾಯಿ ಸರ್ವನಿಕೇತನಂ ಗುರುಕುಲದ 8ನೇ ತರಗತಿ ವಿದ್ಯಾರ್ಥಿ ಸಚಿನ್, ಗುರುಕುಲಕ್ಕೆ ಸೇರಿದ ಬಳಿಕ ತಮ್ಮಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಹೇಳಿದರು.
ಮೊದಲು ಹೆಚ್ಚು ಕೋಪ ಬರುತ್ತಿತ್ತು. ಇದೀಗ ತಮ್ಮನ್ನು ನೋಡಿದರೆ ಅಪ್ಪ-ಅಮ್ಮನೇ ಆಶ್ಚರ್ಯಪಡುತ್ತಾರೆ. ಹಿಂದೆ ಇಂಗ್ಲಿಷ್ ಎಂದರೆ ಭಯವಾಗುತ್ತಿತ್ತು. ಈಗ ಇಂಗ್ಲಿಷ್ ಮಾತನಾಡಲು ಸಾಧ್ಯವಾಗುತ್ತಿದೆ. ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ. ಸಾಮಾನ್ಯ ಶಿಕ್ಷಣದ ಜೊತೆಗೆ ವೇದ, ಉಪನಿಷತ್ತು ಹಾಗೂ ಭಗವದ್ಗೀತೆಯನ್ನೂ ಕಲಿಯುತ್ತಿದ್ದೇನೆ ಎಂದು ತಿಳಿಸಿದರು.
ಗ್ರಾಮೀಣ ಮಕ್ಕಳಿಗೆ ಉಚಿತ ಶಿಕ್ಷಣ
ಸೊರಬ ತಾಲೂಕಿನ ಕಮರೂರು ಗ್ರಾಮದಲ್ಲಿರುವ ಶ್ರೀ ಸತ್ಯ ಸಾಯಿ ಸರ್ವನಿಕೇತನಂ ವಸತಿ ಶಾಲೆ 2019ರಿಂದ ಕಾರ್ಯನಿರ್ವಹಿಸುತ್ತಿದೆ. ಸುಮಾರು 40 ಎಕರೆ ವಿಸ್ತೀರ್ಣದ ಕ್ಯಾಂಪಸ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ 6ರಿಂದ 8ನೇ ತರಗತಿಯವರೆಗೆ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.
ಇಲ್ಲಿ ಓದುತ್ತಿರುವ ಮಕ್ಕಳಲ್ಲಿ ಹೆಚ್ಚಿನವರು ಗ್ರಾಮೀಣ ಹಿನ್ನೆಲೆಯವರಾಗಿದ್ದು, ಬಡ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಇದೇ ಆವರಣದಲ್ಲಿ ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಸೆಂಟರ್ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ.

ಸಂತರ ನಿಸ್ವಾರ್ಥ ಸೇವೆಯಿಂದ ಭಾರತಕ್ಕೆ ಗೌರವ: ಈಶ್ವರಪ್ಪ
ಸಾಧು-ಸಂತರ ನಿಸ್ವಾರ್ಥ ಸೇವೆಯೇ ಜಗತ್ತಿನಲ್ಲಿ ಭಾರತಕ್ಕೆ ಗೌರವ ಸಿಗಲು ಪ್ರಮುಖ ಕಾರಣ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
‘ದಿವ್ಯ ಸಂಜೆ’ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಹಲವರು ನೀಡುತ್ತಿದ್ದಾರೆ. ಆದರೆ ಆಧ್ಯಾತ್ಮಿಕತೆಯನ್ನು ನೀಡುವ ಕಾರ್ಯ ವಿರಳವಾಗಿದೆ. ಆಧ್ಯಾತ್ಮಿಕತೆ ಇಲ್ಲದಿದ್ದರೆ ನೆಮ್ಮದಿ ಸಿಗುವುದು ಕಷ್ಟ ಎಂದರು.
ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸೇವೆ ಜಗತ್ತಿಗೆ ಮಾದರಿಯಾಗಿದೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.
ಕಾರ್ಯಕ್ರಮದ ಬಳಿಕ ಶ್ರೀ ಸತ್ಯ ಸಾಯಿ ಲೋಕಸೇವಾ ಗುರುಕುಲಂ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ‘ಸಾಯಿ ಸಿಂಪೋನಿ’ ಆರ್ಕೆಸ್ಟ್ರಾ ಮೂಲಕ ಸಂಗೀತ ಕಾರ್ಯಕ್ರಮ ನೀಡಿದರು.











