ಶಿವಮೊಗ್ಗ,ಆ,25: ಜಿಲ್ಲೆಯಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ಮುಂಜಾಗ್ರತಾ ಕ್ರಮವಾಗಿ, ಆ.25 ರಿಂದ 28 ರವರೆಗೆ ಜಿಲ್ಲೆಯಾದ್ಯಂತ ಯಾವುದೇ ಬೈಕ್ ಲ್ಯಾಲಿಗಳನ್ನು, ಡಿಜೆ ಸಿಸ್ಟಂ ಬಳಕೆ, ಪೇಪರ್ ಬ್ಲಾಸ್ಟಿಂಗ್ ಹಾಗೂ ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಪೊಲೀಸ್ ಕಾಯ್ದೆ-1963 ರ ಕಲಂ 35(3) ರಡಿ ನೀಡಿರುವ ಅಧಿಕಾರವನ್ನು ಬಳಸಿ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಇಂದಿನಿಂದ 28 ರವರೆಗೆ ನಿಷೇಧ ಜಾರಿಯಲ್ಲಿರುತ್ತದೆ. ಆ.26 ನಾಳೆ ಈದ್ ಮಿಲಾದ್ ಆಚರಣೆ ನಡೆಯಲಿದ್ದು, ಸೌಹಾರ್ದತೆ, ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ, ಪೊಲೀಸ್ ಅಧೀಕ್ಷಕರ ಶಿಫಾರಸ್ಸಿನಂತೆ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಪೊಲೀಸ್ ಕಾಯ್ದೆ-1963 ರ ಕಲಂ 35, 36 ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, ಜಿಲ್ಲಾದ್ಯಂತ ಆಗಸ್ಟ್ 25 ರಿಂದ ಆಗಸ್ಟ್ 28 ರವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.











