ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಕರೂರು ಹೋಬಳಿಯ ಕುದರೂರು ಗ್ರಾಮದ ಬೆಳಮಕ್ಕಿ ಸಮೀಪದ ನಿವಾಸಿ ವಾಣಿಶ್ರೀ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿ ‘ಸಮಾಜ ಪರಿವರ್ತನಾ ಟ್ರಸ್ಟ್ (ರಿ.)’ ವತಿಯಿಂದ ಸಾಗರ ಉಪವಿಭಾಗದ ಎಎಸ್ಪಿ ಡಾ.ಬೆನಕ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸಾಕ್ಷ್ಯಾಧಾರಗಳ ಸಂರಕ್ಷಣೆಗೆ ಆಗ್ರಹ ವಾಣಿಶ್ರೀ ಅವರ ಸಾವಿಗೆ ಸಂಬಂಧಿಸಿದಂತೆ ತನಿಖೆಯನ್ನು ತ್ವರಿತಗೊಳಿಸಬೇಕು ಹಾಗೂ ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಕಿರುಕುಳ ನೀಡಿದ ಆರೋಪಿಗಳನ್ನು ವಿಳಂಬವಿಲ್ಲದೆ ಕಾನೂನಿನಡಿ ಬಂಧಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಸಿಡಿಆರ್ ಮಾಹಿತಿ ಸಂಗ್ರಹಕ್ಕೆ ಒತ್ತಾಯ:
ಪ್ರಕರಣಕ್ಕೆ ಸಂಬಂಧಿಸಿದ ಮೊಬೈಲ್ ಫೋನ್, ಕರೆ ವಿವರಗಳು (ಸಿಡಿಆರ್), ಸಂದೇಶಗಳು ಹಾಗೂ ಸಾಮಾಜಿಕ ಜಾಲತಾಣಗಳ ಮಾಹಿತಿಗಳು ಸೇರಿದಂತೆ ಇತರೆ ಯಾವುದೇ ಸಾಕ್ಷ್ಯಗಳು ನಾಶವಾಗದಂತೆ ತಕ್ಷಣವೇ ಪರಿಶೀಲಿಸಿ ಸಂರಕ್ಷಿಸಬೇಕು ಮತ್ತು ತನಿಖೆಗೆ ಯಾವುದೇ ಅಡ್ಡಿಯಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಟ್ರಸ್ಟ್ನ ಮುಖಂಡರು ಒತ್ತಾಯಿಸಿದ್ದಾರೆ.
ಕಾನೂನಿನಡಿ ಸೂಕ್ತ ಕ್ರಮಕ್ಕೆ ಮನವಿ:
ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮೃತ ವಾಣಿಶ್ರೀ ಅವರ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಂಡು ಶೀಘ್ರ ನ್ಯಾಯ ಒದಗಿಸಬೇಕೆಂದು ಸಾಗರ ಉಪವಿಭಾಗ ಪೊಲೀಸ್ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ವೇಳೆಯಲ್ಲಿ ಕೆಡಿಪಿ ಸದಸ್ಯ ಜಿ.ಟಿ ಸತ್ಯನಾರಾಯಣ ತುಮರಿ, ಮಧು ದೇವಾಡಿಗ, ಸುಧಾಕರ ತುಮರಿ, ಸಮಾಜ ಪರಿವರ್ತನ ಟ್ರಸ್ಟ್ ನ ಸದಸ್ಯ ಅರುಣ್ ಕರೂರು, ಹರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.











