ಸಾಗರ:ನಾಡವಳ್ಳಿ ಗ್ರಾಮದಲ್ಲಿ ಐದು ಕುಟುಂಬಗಳಿಗೆ ನೀಡಿದ ಹಕ್ಕುಪತ್ರವನ್ನು ರದ್ದುಪಡಿಸಿದ ಉಪವಿಭಾಗಾಧಿಕಾರಿಗಳ ಕ್ರಮ ಅಮಾನವೀಯವಾದದ್ದು. ಹಕ್ಕುಪತ್ರ ರದ್ದತಿಗೆ ಕನಿಷ್ಟ ತಿಳುವಳಿಕೆ ಪತ್ರವನ್ನು ಸಹ ನೀಡದೆ ಏಕಾಏಕಿ ರದ್ದು ಮಾಡಿರುವುದು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮಾಡಿದ ಘೋರ ಅವಮಾನವಾಗಿದೆ ಎಂದು ಮಲೆನಾಡು ರೈತ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಡವಳ್ಳಿ ಗ್ರಾಮದ ಸರ್ವೇ ನಂ. 12ರಲ್ಲಿರುವ 15 ಎಕರೆ 27 ಗುಂಟೆ ಸಾಗುವಳಿ, ವಾಸದ ಭೂಮಿಯನ್ನು ದಿನಾಂಕ 24/11/2017 ರಂದು ಉಪವಿಭಾಗಾಧಿಕಾರಿಗಳು ವಜಾ ಮಾಡಿದ್ದಾರೆ ಎಂದು ಹೇಳಿದರು.
ನಾಡವಳ್ಳಿ ಗ್ರಾಮದ ವೆಂಕಟೇಶ್, ಬಸಪ್ಪ,ಮಾಮ್ಮ, ರತ್ನಮ್ಮ, ಮಂಜಮ್ಮ ಅವರಿಗೆ 1994ರಲ್ಲಿ ಸರ್ಕಾರ ಬಗರ್‌ಹುಕುಂ ಸಕ್ರಮ ಯೋಜನೆಯಡಿ ಹಕ್ಕುಪತ್ರ ನೀಡಲಾಗಿತ್ತು. ಈ ಕುಟುಂಬಗಳು ಶರಾವತಿ ಮುಳುಗಡೆ ಸಂದರ್ಭದಲ್ಲಿ ಸರ್ಕಾರವೇ ಇಲ್ಲಿ ತಂದು ಬಿಟ್ಟಿದೆ. ಮರಣ ದಂಡನೆ ಶಿಕ್ಷೆ ವಿಧಿಸುವಾಗ ಸಹ ಕನಿಷ್ಟ ನಿಮ್ಮ ಕೊನೆ ಆಸೆ ಏನು ಎಂದು ಕೇಳುತ್ತಾರೆ. ಆದರೆ ನಾಡವಳ್ಳಿ ಗ್ರಾಮದ ಈ ಮುಳುಗಡೆ ಸಂತ್ರಸ್ತ ಐದು ಕುಟುಂಬಗಳಿಗೆ ನೋಟಿಸ್ ಸಹ ನೀಡದೆಹಕ್ಕುಪತ್ರ ವಜಾ ಮಾಡಿ, ಈ ಜಮೀನು ಗೋಮಾಳಎಂದು ಹೆಸರಿಸಲಾಗಿದೆ. ಜಿಲ್ಲಾಧಿಕಾರಿಗಳು ಸಹ ಈ ಆದೇಶವನ್ನು ಎತ್ತಿ ಹಿಡಿದಿದ್ದು ಖಂಡನೀಯ.

ತಹಶೀಲ್ದಾರ್ ಅವರು ಈ ಸಂಬಂಧ ಗ್ರಾಮಸ್ಥರು ನೀಡಿದ ಮನವಿಗೆ ಸ್ಪಂದಿಸಿ ಪುನರ್ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಉಪವಿಭಾಗಾಧಿಕಾರಿಗಳು ಷರಾ ಬರೆದಿದ್ದಾರೆ.ಆದರೆ ಉಪವಿಭಾಗಾಧಿಕಾರಿಗಳು ಯಾವ ರೀತಿಯಲ್ಲಿ ಕ್ರಮ ಕೈಗೊಂಡಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ.
ಮುಂದಿನ 10 ದಿನದೊಳಗೆ ಸ್ಥಳ ಸಮೀಕ್ಷೆ ನಡೆಸಿ ಐದು ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಡಬೇಕು. ಇಲ್ಲವಾದರೆ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಗ್ರಾಮಸ್ಥರಾದ ಟೀಕಪ್ಪ ಮಾತನಾಡಿ, ನಮ್ಮ ಅಜ್ಜ, ತಂದೆಯವರ ಕಾಲದಿಂದಲೂ ನಾವು ಈ ಜಮೀನಿನಲ್ಲಿ ವಾಸ ಮಾಡುತ್ತಿದ್ದೇವೆ. ನಮ್ಮ ಭೂಮಿ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಮುಳುಗಡೆಯಾಗಿದೆ. ನಮ್ಮನ್ನು ಸರ್ಕಾರವೇ ಇಲ್ಲಿ ಬಿಟ್ಟು ಹೋಗಿತ್ತು. ಇದೀಗ ಭೂಮಿ ನಮ್ಮದ್ದಲ್ಲ, ಗೋಮಾಳ ಎಂದು ಹೇಳುತ್ತಿರುವುದು ಸರಿಯಲ್ಲ. ತಕ್ಷಣ ನಮ್ಮ ಭೂಮಿಹಕ್ಕು ಮರಳಿಸಬೇಕು. ಇಲ್ಲವಾದಲ್ಲಿ ತಹಶೀಲ್ದಾರ್ ಕಚೇರಿ ಎದುರು ಕುಟುಂಬ ಸಹಿತ ಪ್ರತಿಭಟನೆ ಮಾಡುತ್ತೇವೆ ಎಂದರು.ಗೋಷ್ಟಿಯಲ್ಲಿ ರೇವಪ್ಪ, ಆದರ್ಶ, ಕೃಷ್ಣಪ್ಪ, ರಾಮಚಂದ್ರ ಹಾಜರಿದ್ದರು.
ಜಾಹೀರಾತು












