Home Blog ₹75 ಲಕ್ಷದ ಸೇತುವೆ ಕಾಮಗಾರಿ: ತಾಲ್ಲೂಕು ಗಡಿ ವಿವಾದ, ತನಿಖೆಗೆ ಆಗ್ರಹ..!!

₹75 ಲಕ್ಷದ ಸೇತುವೆ ಕಾಮಗಾರಿ: ತಾಲ್ಲೂಕು ಗಡಿ ವಿವಾದ, ತನಿಖೆಗೆ ಆಗ್ರಹ..!!

32
0

ಸಾಗರ: ತಾಲ್ಲೂಕಿನ ಆನಂದಪುರ ಹೋಬಳಿ, ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಟಿನಕೊಪ್ಪ ಗ್ರಾಮದ ಸರ್ವೆ ನಂ.15 ಮತ್ತು 16ರ ಸಮೀಪ ಹಳ್ಳಕ್ಕೆ ನಿರ್ಮಿಸಲಾಗುತ್ತಿರುವ ಸುಮಾರು ₹75 ಲಕ್ಷ ವೆಚ್ಚದ ಸೇತುವೆ ಕಾಮಗಾರಿಯ ಸ್ಥಳ ಹಾಗೂ ತಾಲ್ಲೂಕು ಗಡಿ ಕುರಿತು ಗಂಭೀರ ಅನುಮಾನ ವ್ಯಕ್ತಪಡಿಸಿ ಕೆ.ಎಸ್. ರಾಜಶೇಖರಪ್ಪ ಎಂಬುವವರು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.

ದೂರಿನ ಪ್ರಕಾರ, ಕಾಮಗಾರಿ ನಡೆಯುತ್ತಿರುವ ಸ್ಥಳ ಸಾಗರ ತಾಲ್ಲೂಕಿನ ಗಡಿಗೆ ಸಂಬಂಧಪಟ್ಟ ಪ್ರದೇಶವಾಗಿದ್ದರೂ, ಕಾಮಗಾರಿಯನ್ನು ಹೊಸನಗರ ತಾಲ್ಲೂಕಿಗೆ ಸಂಬಂಧಿಸಿದೆ ಎಂದು ತೋರಿಸಿ, ಹೊಸನಗರ ತಾಲ್ಲೂಕಿನ ಗ್ರಾಮ ಪಂಚಾಯಿತಿಯಿಂದ NOC ಪಡೆದು ಕಾಮಗಾರಿ ನಡೆಸಲಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಹೀಗಾಗಿ ಕಾಮಗಾರಿಯ ನೈಜ ಭೌಗೋಳಿಕ ಸ್ಥಳ, ತಾಲ್ಲೂಕು ಗಡಿ ಹಾಗೂ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ನೇರವಾಗಿ ಪರಿಶೀಲಿಸಬೇಕು ಎಂದು ಮನವಿ ಮಾಡಲಾಗಿದೆ.
ಒಂದು ತಾಲ್ಲೂಕಿನ ವ್ಯಾಪ್ತಿಯ ಕಾಮಗಾರಿಯನ್ನು ಮತ್ತೊಂದು ತಾಲ್ಲೂಕಿಗೆ ಸಂಬಂಧಿಸಿದೆ ಎಂದು ತೋರಿಸಿ NOC ಪಡೆದಿರುವುದು ಸತ್ಯವಾಗಿದ್ದರೆ, ತಪ್ಪು ಮಾಹಿತಿ ಅಥವಾ ದಾಖಲೆಗಳ ಆಧಾರದ ಮೇಲೆ ಅನುಮೋದನೆ ಪಡೆದಿರುವ ಸಾಧ್ಯತೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಇದರ ಜೊತೆಗೆ ಸೇತುವೆಗೆ ಸೂಕ್ತವಾದ ಸಾರ್ವಜನಿಕ ರಸ್ತೆ ಸಂಪರ್ಕವಿದೆಯೇ, ಕಾಮಗಾರಿಯಿಂದ ನಿಜವಾಗಿಯೂ ಸಾರ್ವಜನಿಕರಿಗೆ ಪ್ರಯೋಜನವಿದೆಯೇ ಹಾಗೂ ಸ್ಥಳ ಆಯ್ಕೆ ತಾಂತ್ರಿಕವಾಗಿ ಸಮರ್ಥನೀಯವಾಗಿದೆಯೇ ಎಂಬುದನ್ನೂ ಪರಿಶೀಲಿಸುವಂತೆ ಕೋರಲಾಗಿದೆ.

ಕಾಮಗಾರಿ ಫಲಕವೂ ಇಲ್ಲ!

ಕಾಮಗಾರಿ ಸ್ಥಳದಲ್ಲಿ ಕಡ್ಡಾಯವಾಗಿ ಅಳವಡಿಸಬೇಕಾದ ಕಾಮಗಾರಿ ಫಲಕ ಅಳವಡಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಾಮಗಾರಿಯ ಅಂದಾಜು ಮೊತ್ತ, Administrative Approval, Technical Sanction, ಗುತ್ತಿಗೆದಾರರ ವಿವರ, Work Order ಹಾಗೂ ಕಾಮಗಾರಿ ಅವಧಿಯಂತಹ ಮಾಹಿತಿಗಳನ್ನು ಸಾರ್ವಜನಿಕರಿಗೆ ತಿಳಿಯುವಂತೆ ಪ್ರದರ್ಶಿಸಿಲ್ಲ ಎಂದು ಉಲ್ಲೇಖಿಸಲಾಗಿದೆ.

ಸರ್ವೆ ದಾಖಲೆಗಳು, ಸ್ಥಳದ ನಕ್ಷೆ, ಗಡಿ ವಿವರಗಳು ಸೇರಿದಂತೆ ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಲಾಗಿದೆ.

KRIDLನ ಹಿರಿಯ ತಾಂತ್ರಿಕ ಅಧಿಕಾರಿಗಳ ತಂಡದಿಂದ ತುರ್ತು ಸ್ಥಳ ಪರಿಶೀಲನೆ ನಡೆಸುವುದು, ಅಧಿಕೃತ ಕಂದಾಯ ದಾಖಲೆಗಳ ಆಧಾರದಲ್ಲಿ ಸಾಗರ ಅಥವಾ ಹೊಸನಗರ ತಾಲ್ಲೂಕಿನ ವ್ಯಾಪ್ತಿಯನ್ನು ಖಚಿತಪಡಿಸುವುದು, NOC ನೀಡಿದ ಗ್ರಾಮ ಪಂಚಾಯಿತಿಗೆ ಅಧಿಕಾರವಿದೆಯೇ ಎಂಬುದನ್ನು ಪರಿಶೀಲಿಸುವುದು, Administrative Approval, Technical Sanction, Estimate, Tender ಹಾಗೂ Work Order ದಾಖಲೆಗಳನ್ನು ಪರಿಶೀಲಿಸುವಂತೆ ದೂರುದಾರರು ಒತ್ತಾಯಿಸಿದ್ದಾರೆ.

ಅಲ್ಲದೆ, ಸೇತುವೆ ಯಾವುದೇ ಖಾಸಗಿ ವ್ಯಕ್ತಿ ಅಥವಾ ಖಾಸಗಿ ಆಸ್ತಿಗೆ ಮಾತ್ರ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಲಾಗುತ್ತಿದೆಯೇ ಎಂಬುದನ್ನೂ ಪರಿಶೀಲಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸ್ಥಳ ಪರಿಶೀಲನೆ ಮತ್ತು ದಾಖಲೆಗಳ ಪರಿಶೀಲನೆ ಪೂರ್ಣಗೊಳ್ಳುವವರೆಗೆ ನಿಯಮಾನುಸಾರ ಮುಂದಿನ ಕಾಮಗಾರಿ ಹಾಗೂ ಬಿಲ್/ಹಣ ಬಿಡುಗಡೆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಕೋರಲಾಗಿದೆ.

ತಪ್ಪು ಮಾಹಿತಿ, ತಪ್ಪು ದಾಖಲೆ ಅಥವಾ ತಪ್ಪು NOC ಆಧರಿಸಿ ಕಾಮಗಾರಿ ಕೈಗೊಂಡಿರುವುದು ತನಿಖೆಯಲ್ಲಿ ದೃಢಪಟ್ಟರೆ, ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಹಾಗೂ ತನಿಖೆಯ ಫಲಿತಾಂಶವನ್ನು ಲಿಖಿತವಾಗಿ ತಿಳಿಸಬೇಕು ಎಂದು ಕೆ.ಎಸ್. ರಾಜಶೇಖರಪ್ಪ ಅವರು ಆಗಸ್ಟ್ 24ರಂದು ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ಜಾಹೀರಾತು