Home Blog “170ಕ್ಕೂ ಹೆಚ್ಚು ಮನೆಗಳ ಹಕ್ಕಿಗಾಗಿ ಅಹೋರಾತ್ರಿ ಹೋರಾಟ: ರತ್ನಾಕರ ಹೊನಗೋಡು..!!”

“170ಕ್ಕೂ ಹೆಚ್ಚು ಮನೆಗಳ ಹಕ್ಕಿಗಾಗಿ ಅಹೋರಾತ್ರಿ ಹೋರಾಟ: ರತ್ನಾಕರ ಹೊನಗೋಡು..!!”

31
0

✒️..ಅಮಿತ್ ಆರ್ ಆನಂದಪುರ

ಸಾಗರ(ಆನಂದಪುರ): ಆನಂದಪುರ ವ್ಯಾಪ್ತಿಯ ದಾಸಕೊಪ್ಪ, ಯಡೇಹಳ್ಳಿ ಹಾಗೂ ಮುರುಘಾಮಠದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತ ಬಡ ವರ್ಗದ ಕೂಲಿಕಾರ್ಮಿಕರಿಗೆ ಆದಷ್ಟು ಬೇಗ ಹಕ್ಕುಪತ್ರ ನೀಡಬೇಕು. ಇಲ್ಲವಾದಲ್ಲಿ ನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಎಚ್ಚರಿಕೆ ನೀಡಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನೂರಾರು ವರ್ಷಗಳಿಂದ ದಾಸಕೊಪ್ಪ, ಯಡೇಹಳ್ಳಿ ಹಾಗೂ ಮುರುಘಾಮಠದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತ ಕುಟುಂಬಗಳಿಗೆ ವಾಸವಿರುವ ಜಾಗದ ಹಕ್ಕುಪತ್ರ ದೊರೆತಿಲ್ಲ. ಬದಲಾಗಿ, ಈ ಜಾಗವನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಮಂಜೂರು ಮಾಡಲಾಗಿದೆ. ಇದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದಾಗ ‘ವಾಸಿಸುವವನೇ ಮನೆಯೊಡೆಯ’ ಎಂಬ ಕಾನೂನು ತಂದು ರಾಜ್ಯದ ಜನತೆಗೆ ಅನುಕೂಲ ಕಲ್ಪಿಸಲು ಮುಂದಾಗಿದ್ದರು. ಅದರ ಅಡಿಯಲ್ಲಿ ಇಂತಹ ಜಾಗಗಳನ್ನು ಮೂಲ ನಿವಾಸಿಗಳಿಗೆ ಕೊಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಬೇಕಾದ ಸಾಗರದ ಎಸಿ ಅವರು ಕಚೇರಿಯಲ್ಲಿ ‘ವಾಸ್ತು ಸರಿ ಇಲ್ಲ’ ಎಂಬ ಕಾರಣ ನೀಡಿ ಬೀಗ ಹಾಕಿಕೊಂಡಿದ್ದಾರೆ. ಡಿಎಫ್‌ಒ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ‘ಮೂರು ಗಂಟೆಯ ನಂತರ’ ಎಂದು ಬೋರ್ಡ್ ಹಾಕಲಾಗಿದೆ. ಈ ತಾಲೂಕಿನಲ್ಲಿ ಅಧಿಕಾರಿಗಳಿಗೆ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಇದನ್ನು ಪ್ರಶ್ನಿಸುವ ಯೋಗ್ಯತೆ ಶಾಸಕರಿಗೂ ಇಲ್ಲವಾಗಿದೆ ಎಂದು ರತ್ನಾಕರ ಹೊನಗೋಡು ಆಕ್ರೋಶ ವ್ಯಕ್ತಪಡಿಸಿದರು.

ಆನಂದಪುರ ವ್ಯಾಪ್ತಿಯ ಮೂಲ ನಿವಾಸಿಗಳಿಗೆ ಆಗುತ್ತಿರುವ ಇಂತಹ ತೊಂದರೆಯನ್ನು ನಾನು ಸಹಿಸುವುದಿಲ್ಲ. ಮುಂಬರುವ ಸೋಮವಾರ ಸಾಗರದ ಎಸಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಲು ಅನ್ಯಾಯಕ್ಕೊಳಗಾಗಿರುವ 170ಕ್ಕೂ ಹೆಚ್ಚು ಕುಟುಂಬಗಳು ಸಿದ್ಧವಾಗಿವೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ, ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವ ನಿರ್ಧಾರ ಕೈಗೊಂಡರೆ ಮಾತ್ರ ಧರಣಿಯಿಂದ ಹಿಂದೆ ಸರಿಯುತ್ತೇವೆ ಎಂದು ಎಚ್ಚರಿಸಿದರು.

ಹಕ್ಕುಪತ್ರ ನೀಡಲು ನಾಗರಾಜ್ ಆಗ್ರಹ

ನಾಗರಾಜ್ ದಾಸಕೊಪ್ಪ ಮಾತನಾಡಿ, ನೂರಾರು ವರ್ಷಗಳಿಂದ ದಾಸಕೊಪ್ಪ ಗ್ರಾಮದಲ್ಲಿ ವಾಸವಿರುವ ನಮಗೆ ಹಕ್ಕುಪತ್ರ ದೊರೆಯದೆ ಬಹಳಷ್ಟು ಅನ್ಯಾಯವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸ್ಥಳ ಪರಿಶೀಲನೆ ನಡೆಸಿ, ಅರ್ಹ ಕುಟುಂಬಗಳಿಗೆ ಹಕ್ಕುಪತ್ರ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

ಬೆಂಬಲ ಸೂಚಿಸಿದ ದಲಿತ ಸಂಘರ್ಷ ಸಮಿತಿ

ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ರೇವಪ್ಪ ಹೊಸಕೊಪ್ಪ ಮಾತನಾಡಿ, ಬಡ ವರ್ಗದ ಜನರಿಗೆ ಈ ರೀತಿ ಅನ್ಯಾಯವಾಗುತ್ತಿರುವುದನ್ನು ನಾವು ಸಹಿಸುವುದಿಲ್ಲ. ಸೋಮವಾರ ಎಸಿ ಕಚೇರಿ ಮುಂದೆ ನಡೆಯಲಿರುವ ಅಹೋರಾತ್ರಿ ಧರಣಿಗೆ ನಮ್ಮ ಬೆಂಬಲವೂ ಇದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಚಂದ್ರಶೇಖರ್ ದಾಸಕೊಪ್ಪ ಷಣ್ಮುಖಪ್ಪ ಯಡೇಹಳ್ಳಿ, ಶಾಂತಪ್ಪ ಆಚಾಪುರ, ಮುಜಾಹಿದ್ ಖಾನ್ ಹಾಗೂ ದಾಸಕೊಪ್ಪ, ಯಡೇಹಳ್ಳಿ ಹಾಗೂ ಮುರುಘಾಮಠದ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.