Home Shivamogga Sagara ಮಲೆನಾಡಿನ ರೈತರಿಗೆ ‘ಮರಣ ಶಾಸನ’ದ ಆತಂಕ; ಕಸ್ತೂರಿರಂಗನ್ ವರದಿ ವಿರುದ್ಧ ರತ್ನಾಕರ ಹೊನಗೋಡು..!!

ಮಲೆನಾಡಿನ ರೈತರಿಗೆ ‘ಮರಣ ಶಾಸನ’ದ ಆತಂಕ; ಕಸ್ತೂರಿರಂಗನ್ ವರದಿ ವಿರುದ್ಧ ರತ್ನಾಕರ ಹೊನಗೋಡು..!!

19
0

ಸಾಗರ(ಆನಂದಪುರ): ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಸೆಪ್ಟೆಂಬರ್ 3ರಂದು ಸಾಗರದಲ್ಲಿ ನಡೆಯಲಿರುವ ಪ್ರತಿಭಟನೆಗೆ ತಮ್ಮ ಪಕ್ಷದ ಸಂಪೂರ್ಣ ಬೆಂಬಲವಿದ್ದು, ವೈಯಕ್ತಿಕವಾಗಿಯೂ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿರುವ ಕಾನೂನುಗಳು ಹಾಗೂ ಅರಣ್ಯ ಇಲಾಖೆಯ ವಿವಿಧ ಕಾಯ್ದೆಗಳಿಂದ ರೈತರು ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾದರೆ ರೈತರು ಹಾಗೂ ಜನಸಾಮಾನ್ಯರು ಬೀದಿಗೆ ಬರುವುದು ಖಂಡಿತ ಇದರ ವಿರುದ್ಧ ಹೋರಾಟಕ್ಕೆ ಆನಂದಪುರ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ಈ ಭಾಗದ ರೈತರು ಕೂಡ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.

“ಕಸ್ತೂರಿ ರಂಗನ್ ವರದಿ ರೈತರಿಗೆ ಮರಣ ಶಾಸನ ಬರೆದಂತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸೆ.3ರಂದು ಸಾಗರದಲ್ಲಿ ನಡೆಯುವ ಹೋರಾಟಕ್ಕೆ ತಮ್ಮ ಪಕ್ಷದ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರೂ ಬೆಂಬಲವಾಗಿ ಸಜ್ಜಾಗಿದ್ದಾರೆ ಎಂದರು.

ಇರುವ ಕಾಡನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಅರಣ್ಯ ಇಲಾಖೆ ಹಾಗೂ ಸರ್ಕಾರ ಸಮರ್ಪಕವಾಗಿ ನಿರ್ವಹಿಸಬೇಕು. ಆದರೆ, ಅಧಿಕಾರಿಗಳು ಮನಸ್ಸಿಗೆ ಬಂದ ರೀತಿಯಲ್ಲಿ ಅವೈಜ್ಞಾನಿಕವಾಗಿ ಕಸ್ತೂರಿ ರಂಗನ್ ವರದಿಯನ್ನು ರೂಪಿಸಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದೆ ರೈತರ ಸಾಗುವಳಿಯಲ್ಲಿದ್ದ ಹಾಗೂ ಸಾಗುವಳಿ ಮಾಡದ ಕೆಲವು ಜಾಗಗಳನ್ನು ಅರಣ್ಯ ಪ್ರದೇಶವೆಂದು ಘೋಷಿಸುವ ಸಂದರ್ಭದಲ್ಲಿ ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಂಡೇ ಕಂದಾಯ ಭೂಮಿಯನ್ನು ಅರಣ್ಯ ಭೂಮಿಯಾಗಿ ಪರಿವರ್ತಿಸಿದ್ದಾರೆ. ಮತ್ತೊಂದೆಡೆ, ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲೂ ಗೊಂದಲ ಉಂಟಾಗಿದೆ. ಅಧಿಕಾರಿಗಳ ತಪ್ಪಿನಿಂದಾಗಿ ಅನೇಕ ಸಾಗುವಳಿದಾರರಿಗೆ ಇಂದಿಗೂ ತಮ್ಮ ಜಮೀನುಗಳಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ಆನಂದಪುರ ವ್ಯಾಪ್ತಿಯ ಮಲ್ಲಂದೂರು ಸರ್ವೆ ನಂಬರ್ 175ರಿಂದ ಮಧ್ಯ ಕಣ್ಣೂರುವರೆಗೆ ಕಂದಾಯ ಭೂಮಿ ಇದ್ದರೂ, ಅಧಿಕಾರಿಗಳು ಅದನ್ನು ಅರಣ್ಯ ಭೂಮಿ ಎಂದು ಪರಿವರ್ತಿಸಿದ್ದಾರೆ. ಇದನ್ನು ಮತ್ತೆ ಕಂದಾಯ ಭೂಮಿಯಾಗಿ ಪರಿವರ್ತಿಸಲು ಇಂದಿಗೂ ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳ ವಿರುದ್ಧವೂ ಹರತಾಳು ಹಾಲಪ್ಪ ಅವರ ನೇತೃತ್ವದಲ್ಲಿ ಹೋರಾಟ ನಡೆಸಲು ಮುಂದಾಗುವುದಾಗಿ ರತ್ನಾಕರ ಹೊನಗೋಡು ತಿಳಿಸಿದರು.

ಪಶ್ಚಿಮ ಘಟ್ಟದ ಕಾಡಿನ ಅಂಚಿನಲ್ಲಿರುವ ಗ್ರಾಮಗಳನ್ನು ಮಾತ್ರ ವರದಿಯ ವ್ಯಾಪ್ತಿಗೆ ಸೇರಿಸುವ ಬದಲು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಲೆನಾಡಿನ ಅನೇಕ ಜನವಸತಿ ಪ್ರದೇಶಗಳನ್ನೂ ಸೇರಿಸಿ ಅವೈಜ್ಞಾನಿಕವಾಗಿ ವರದಿ ರೂಪಿಸಲಾಗಿದೆ ಎಂದು ಆರೋಪಿಸಿದ ಅವರು, ಇಂತಹ ಕ್ರಮವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಅವಧಿಯಲ್ಲಿ ಅರಣ್ಯ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿ ಅನೇಕ ಬಡವರು ಹಾಗೂ ರೈತರಿಗೆ ಹಕ್ಕುಪತ್ರ ನೀಡಲಾಗಿತ್ತು. ಅದೇ ರೀತಿಯ ಬದ್ಧತೆಯಿಂದ ಇಂದಿನ ಸರ್ಕಾರವೂ ರೈತರ ಪರವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಮ್ಯಾಮ್ ಕೋಸ್ ನಿರ್ದೇಶಕ ಭರ್ಮಪ್ಪ ಅಂದಾಸುರ ಮಾತನಾಡಿ, ಕಸ್ತೂರಿ ರಂಗನ್ ವರದಿಯಿಂದ ಮಲೆನಾಡಿನ ಅನೇಕ ಜನಸಾಮಾನ್ಯರು ಹಾಗೂ ರೈತರು ಭಯಭೀತರಾಗಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರ ಈ ಅವೈಜ್ಞಾನಿಕ ನೀತಿಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.

ಇಂದಿರಾ ಗಾಂಧಿ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಇಡೀ ದೇಶಕ್ಕೆ ಹೇಗೆ ಕತ್ತಲು ಆವರಿಸಿತ್ತೋ, ಅದೇ ರೀತಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾದರೆ ರೈತರು ಹಾಗೂ ಜನಸಾಮಾನ್ಯರ ಬದುಕಿನ ಮೇಲೂ ಕತ್ತಲು ಆವರಿಸಲಿದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ರೇವಪ್ಪ ಹಾಗೂ ಮುಖಂಡರಾದ ಸಂಗಣ್ಣನಕೆರೆ ರೇವಪ್ಪ ಉಪಸ್ಥಿತರಿದ್ದರು.

ಜಾಹೀರಾತು