✒️..ಅಮಿತ್ ಆರ್ ಆನಂದಪುರ
ಸಾಗರ(ಆನಂದಪುರ): 45 ಹಳ್ಳಿಗಳ ವ್ಯಾಪ್ತಿಯನ್ನು ಹೊಂದಿರುವ ಆಚಾಪುರ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಸೆಪ್ಟೆಂಬರ್ 10ರಂದು ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಆರ್. ರಾಜು ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಣ್ಣ ಕೊಠಡಿಯಲ್ಲಿ ಆರಂಭಗೊಂಡಿದ್ದ ಸಂಘವು ಇಂದು ಸಹಕಾರ ಭವನದ ಮಟ್ಟಿಗೆ ಬೆಳೆದು ನಿಂತಿದ್ದು, ಇದಕ್ಕೆ ರೈತರು ಹಾಗೂ ಚುನಾಯಿತ ಪ್ರತಿನಿಧಿಗಳ ಸಹಕಾರ ಮತ್ತು ಸಂಘದ ನಿರ್ದೇಶಕರ ಪರಿಶ್ರಮ ಕಾರಣವಾಗಿದೆ ಎಂದರು.
ಈ ಬಾರಿಯ ಮಹಾಸಭೆಯ ವಿಶೇಷವೆಂದರೆ ಸಂಘವು ₹13.50 ಲಕ್ಷ ಲಾಭ ಗಳಿಸಿರುವುದು. ರೈತರಿಗೆ ಸಾಲ ಸೌಲಭ್ಯಗಳ ಜೊತೆಗೆ ಅಗತ್ಯ ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಸಂಘದ ಮಾರಾಟ ಮಳಿಗೆಯಲ್ಲಿ ಒದಗಿಸಲಾಗುತ್ತಿದೆ. ರೈತರ ಅನುಕೂಲಕ್ಕಾಗಿ ಬೆಳೆ ವಿಮೆ , ಯಶಸ್ವಿನಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಮಹಾಸಭೆಯಲ್ಲಿ ಉಚಿತ ಕಣ್ಣಿನ ತಪಾಸಣೆ
ವಾರ್ಷಿಕ ಮಹಾಸಭೆಯ ಅಂಗವಾಗಿ ಶಿವಮೊಗ್ಗದ ಐ ದೃಷ್ಟಿ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಶಾಸಕ ಗೋಪಾಲಕೃಷ್ಣ ಬೇಳೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಸಾಧಕರಿಗೆ ಸನ್ಮಾನ
ಮಹಾಸಭೆಯಲ್ಲಿ ಸಂಘದಲ್ಲಿ ಅತಿ ಹೆಚ್ಚು ಠೇವಣಿ ಇಟ್ಟಿರುವ ನಾಲ್ವರು ಸದಸ್ಯರನ್ನು ಸನ್ಮಾನಿಸಲಾಗುವುದು. ಸಂಘದ ಷೇರುದಾರರ ಪುತ್ರಿ ಪೂರ್ವಾ ಪಾಟೀಲ್ ಅವರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಅವರನ್ನು ಹಾಗೂ ಈ ಭಾಗದಲ್ಲಿ ಗ್ರಾಮ ಲೆಕ್ಕಿಗರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಚಂದ್ರಮೌಳಿ ಅವರನ್ನು ಸಹ ಸನ್ಮಾನಿಸಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಸಂಘದ ಮೂಲಕ ಪೆಟ್ರೋಲ್ ಪಂಪ್, ನ್ಯಾಯಬೆಲೆ ಅಂಗಡಿ, ಸಿಮ್ ಕಾರ್ಡ್ ಸೌಲಭ್ಯ ಹಾಗೂ ಪಾಣಿಗಳನ್ನು ವಿತರಿಸುವ ಜನಪರ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಲಾಗುತ್ತಿದೆ ಎಂದು ಅಧ್ಯಕ್ಷ ಕೆ.ಆರ್. ರಾಜು ತಿಳಿಸಿದರು.
ಕಳೆದ 15 ವರ್ಷಗಳಿಂದ ಅಧ್ಯಕ್ಷನಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮುಂದೆಯೂ ರೈತರು, ಸದಸ್ಯರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ನಿರ್ದೇಶಕರಾದ ಮೊಹಮ್ಮದ್ ಹುಸೇನ್ ಮಾತನಾಡಿ, ಸುತ್ತಮುತ್ತಲಿನ ಯಾವುದೇ ಸಹಕಾರ ಸಂಘಗಳು ನೀಡಲಾಗದಷ್ಟು, ಅಂದರೆ ₹6ರಿಂದ ₹7 ಕೋಟಿಗೂ ಅಧಿಕ ಸಾಲವನ್ನು ರೈತರಿಗೆ ಸಂಘದ ವತಿಯಿಂದ ವಿತರಿಸಲಾಗಿದೆ. ರೈತರಿಗೆ ಅಗತ್ಯವಿರುವ ಸಂದರ್ಭದಲ್ಲಿ ಸಾಲ ಸೌಲಭ್ಯ ಒದಗಿಸುವ ಮೂಲಕ ಸಂಘವು ಅವರ ಬೆನ್ನೆಲುಬಾಗಿ ನಿಂತಿದೆ ಎಂದರು.
ಆಚಾಪುರ ಕೃಷಿ ಪತ್ತಿನ ಸಹಕಾರ ಸಂಘವು ಇಷ್ಟೊಂದು ಮಟ್ಟಿಗೆ ಅಭಿವೃದ್ಧಿ ಹೊಂದಲು ಸಂಘದ ಅಧ್ಯಕ್ಷ ಕೆ.ಆರ್. ರಾಜು ಅವರ ಪರಿಶ್ರಮ ಹಾಗೂ ಮಾರ್ಗದರ್ಶನವೇ ಪ್ರಮುಖ ಕಾರಣ. ಅವರ ನೇತೃತ್ವದಲ್ಲಿ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಟಾಕಪ್ಪ ಡಿ, ನಿರ್ದೇಶಕರಾದ ಮಂಜಪ್ಪ ಜಂಬಳ್ಳಿ, ಪ್ರವೀಣ್ ಕುಮಾರ್, ಗಂಗಾಧರಪ್ಪ, ಮಂಜಪ್ಪ ಮತ್ತು ಕಾರ್ಯದರ್ಶಿ ಭಾಗ್ಯ ಹಾಗೂ ಇನ್ನಿತರ ನಿರ್ದೇಶಕರು ಉಪಸ್ಥಿತರಿದ್ದರು.











