ಸಾಗರ, ಸೆ.6: ಆರೋಗ್ಯಕರ ಜೀವನವೇ ಮನುಷ್ಯನ ಬಹುದೊಡ್ಡ ಸಂಪತ್ತು ಎಂದು ನಗರಸಭೆ ಮಾಜಿ ಅಧ್ಯಕ್ಷೆ ಮಧುರ ಶಿವಾನಂದ ಹೇಳಿದರು.
ನಗರದ ಕಾನ್ಲೆ ಛತ್ರದ ಎದುರಿನ ಕಾಂತು ಸ್ಯಾರಿ ಸಭಾಂಗಣದಲ್ಲಿ ಪದ್ಮಶ್ರೀ ಮಹಿಳಾ ಸಮಾಜ, ಶ್ವೇತಾಂಬರ ಜೈನ ಸಮಾಜ ಹಾಗೂ ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ ಆರು ದಿನಗಳ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವಂತ ವ್ಯಕ್ತಿ ದೇಶದ ಆಸ್ತಿಯಾಗಿದ್ದು, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಂತ ಮುಖ್ಯ. ಜೀವನದ ಸುಂದರ ಕ್ಷಣಗಳನ್ನು ಆರೋಗ್ಯದಿಂದ ಅನುಭವಿಸಬೇಕು. ಇಂತಹ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುತ್ತಿರುವುದು ಅಭಿನಂದನೀಯ ಎಂದರು.
ಡಾ.ವಿ.ಆರ್. ಚೌದರಿ ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಸೂಕ್ತ ಜಾಗೃತಿ ಹೊಂದಬೇಕು. ಶಿಬಿರದಲ್ಲಿ ಅಡ್ಡ ಪರಿಣಾಮಗಳಿಲ್ಲದ ನೈಸರ್ಗಿಕ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪದ್ಮಶ್ರೀ ಮಹಿಳಾ ಸಮಾಜದ ಅಧ್ಯಕ್ಷೆ ಚಂದ್ರಕಲಾ ರಾಜಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರಸಭೆ ಮಾಜಿ ಸದಸ್ಯ ಗಣೇಶ್ ಪ್ರಸಾದ್, ಶ್ವೇತಾಂಬರ ಜೈನ ಸಮಾಜದ ಅಧ್ಯಕ್ಷ ಜಗನ್ ಲಾಲ್, ದಿಗಂಬರ ಜೈನ ಸಮಾಜದ ಪ್ರಧಾನ ಕಾರ್ಯದರ್ಶಿ ನೇಮಯ್ಯ ಜೈನ್, ಪ್ರಮುಖರಾದ ದೇವರಾಂ ಜಾಕಡ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿ.ಟಿ. ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ತನ್ವಿತ್ ಸಂಗಡಿಗರು ಪ್ರಾರ್ಥಿಸಿದರು. ಕವಿತಾ ಜೈನ್ ಸ್ವಾಗತಿಸಿದರು. ಪದ್ಮಾವತಿ ವಂದಿಸಿದರು.
ಸೆ.11ರವರೆಗೆ ಶಿಬಿರ
ಆರೋಗ್ಯ ಶಿಬಿರವು ಸೆಪ್ಟೆಂಬರ್ 11ರವರೆಗೆ ನಡೆಯಲಿದ್ದು, ಬೆಳಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8.30ರವರೆಗೆ ಚಿಕಿತ್ಸೆ ನೀಡಲಾಗುತ್ತದೆ.
ಮೈಗ್ರೇನ್ ಹಾಗೂ ದೀರ್ಘಕಾಲದ ತಲೆನೋವು, ಗರ್ಭಕಂಠದ ನೋವು, ಸಿಯಾಟಿಕಾ, ಕೈ-ಕಾಲುಗಳಲ್ಲಿ ಜೋಮು, ಬೆನ್ನು ಮತ್ತು ಸೊಂಟದ ನೋವು, ಮೊಣಕಾಲು ನೋವು, ಗ್ಯಾಸ್, ಮಲಬದ್ಧತೆ, ಕಣ್ಣು-ಕಿವಿ-ಮೂಗಿನ ಸಮಸ್ಯೆಗಳು, ಖಿನ್ನತೆ, ಮಾನಸಿಕ ಒತ್ತಡ, ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯು, ಮೂಲವ್ಯಾಧಿ, ವಾಕಿಂಗ್ ಸಮತೋಲನ, ಹೊಕ್ಕಳಿನ ಸ್ಥಳಾಂತರ, ಉಬ್ಬಿರುವ ರಕ್ತನಾಳಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.











