✒️..ಅಮಿತ್ ಆರ್ ಆನಂದಪುರ
ಸಾಗರ: ಆನಂದಪುರ ಹೋಬಳಿಯ ದಾಸಕೊಪ್ಪ, ಆಚಾಪುರ, ಯಡೇಹಳ್ಳಿ ಹಾಗೂ ತಳಗೆರಿ ಗ್ರಾಮಗಳಲ್ಲಿ ಹಲವು ದಶಕಗಳಿಂದ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು. ಇದೇ ವೇಳೆ ಹಕ್ಕುಪತ್ರದ ವಿಚಾರವಾಗಿ ಮಾಜಿ ಸಚಿವ ಹರತಾಳು ಹಾಲಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ನಡುವೆ ಆರೋಪ–ಪ್ರತ್ಯಾರೋಪಗಳು ಕೇಳಿಬಂದವು.
ಸರ್ಕಾರಿ ಪದವಿಪೂರ್ವ ಕಾಲೇಜು ಎದುರಿನಿಂದ ಮೆರವಣಿಗೆ ನಡೆಸಿದ ಗ್ರಾಮಸ್ಥರು ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ, ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಹರತಾಳು ಹಾಲಪ್ಪ, ನಾಲ್ಕು ಗ್ರಾಮಗಳ ನೂರಾರು ಬಡ ಕುಟುಂಬಗಳು ಹಲವು ದಶಕಗಳಿಂದ ಇಲ್ಲಿ ವಾಸಿಸುತ್ತಿದ್ದು, ಇಂದಿಗೂ ಅವರ ಹೆಸರಿಗೆ ಹಕ್ಕುಪತ್ರ ನೀಡದಿರುವುದು ಅನ್ಯಾಯವಾಗಿದೆ ಎಂದು ಹೇಳಿದರು.

ಯಾರು ಭೂಮಿಯಲ್ಲಿ ವಾಸಿಸುತ್ತಿದ್ದಾರೋ ಅವರಿಗೆ ಭೂಮಿಯ ಹಕ್ಕು ಸಿಗಬೇಕು. ‘ಉಳುವವನೇ ಹೊಲದೊಡೆಯ’ ಎಂಬ ಮೂಲತತ್ವಕ್ಕೆ ಅನುಗುಣವಾಗಿ ಬಡವರಿಗೆ ಜಮೀನು ದೊರೆಯಬೇಕು. ದಾಖಲೆಯಲ್ಲಿ ಖಾಸಗಿ ಜಮೀನು ಎಂದು ನಮೂದಾಗಿದ್ದರೂ, ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ಕುಟುಂಬಗಳ ಹಿತದೃಷ್ಟಿಯಿಂದ ಕಾನೂನುಬದ್ಧವಾಗಿ ಭೂಮಿ ವರ್ಗಾವಣೆ ಮಾಡುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಅಗತ್ಯ ಕಾನೂನು ಪ್ರಕ್ರಿಯೆ ಮೂಲಕ ಭೂಮಿಯನ್ನು ವಶಪಡಿಸಿಕೊಂಡು, ಅರ್ಹ ಕುಟುಂಬಗಳ ಹೆಸರಿಗೆ ಹಕ್ಕುಪತ್ರ 94 ಡಿ ಅಡಿಯಲ್ಲಿ ನೀಡಬೇಕು. ಈ ಬೇಡಿಕೆ ಈಡೇರುವವರೆಗೆ ನಡೆಯುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ನಾಲ್ಕು ಗ್ರಾಮಗಳ ನೂರಾರು ಕುಟುಂಬಗಳು ಇಂದು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರು ಹಾಗೂ ಕೂಲಿಕಾರ್ಮಿಕರು ವಾಸಿಸುವ ಭೂಮಿಗೆ ಹಕ್ಕು ನೀಡಲು ಅಧಿಕಾರಿಗಳು ಸಹಕರಿಸಬೇಕು. ಈ ವಿಷಯವನ್ನು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರ ಗಮನಕ್ಕೂ ತರಲಾಗುವುದು. ಬಡ ಕುಟುಂಬಗಳ ಭೂಹಕ್ಕಿನ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸಬೇಕು ಎಂದು ಹಾಲಪ್ಪ ಹೇಳಿದರು.
ಹೋರಾಟದ ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು, ನಾಲ್ಕು ಗ್ರಾಮಗಳ ಜನರು ಹಲವು ವರ್ಷಗಳಿಂದ ಭೂಮಿಹಕ್ಕಿಗಾಗಿ ಸರ್ಕಾರದ ಬಾಗಿಲು ಬಡಿಯುತ್ತಿದ್ದರೂ ಇದುವರೆಗೆ ನ್ಯಾಯ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಡವರು ಹಾಗೂ ಕೂಲಿಕಾರ್ಮಿಕರು ವಾಸಿಸುತ್ತಿರುವ ಭೂಮಿಯನ್ನು ಅವರಿಗೆ ಮಂಜೂರು ಮಾಡಿದರೆ ಯಾವುದೇ ಲಾಭವಿಲ್ಲ ಎಂಬ ಧೋರಣೆಯನ್ನು ಅಧಿಕಾರಿಗಳು ಕೈಬಿಡಬೇಕು. ಭೂಹಕ್ಕಿಗಾಗಿ ಕಾಯುತ್ತಿರುವ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಉಪವಿಭಾಗಾಧಿಕಾರಿಗಳು ಕೆಲವೇ ದಿನಗಳಲ್ಲಿ ಗ್ರಾಮಸ್ಥರು ವಾಸಿಸುತ್ತಿರುವ ಭೂಮಿಯ ಹಕ್ಕಿನ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ನಿಗದಿತ ಅವಧಿಯಲ್ಲಿ ಹಕ್ಕುಪತ್ರ ನೀಡದಿದ್ದರೆ ಅಹೋರಾತ್ರಿ ಹೋರಾಟ ನಡೆಸಲಾಗುವುದು ಎಂದು ರತ್ನಾಕರ ಹೊನಗೋಡು ಎಚ್ಚರಿಸಿದರು.

‘ಹೋರಾಟ ರಾಜಕೀಯ ಪ್ರೇರಿತ’ ಎಂದ ಶಾಸಕ ಬೇಳೂರು
ಇದರ ನಡುವೆ, ಉಪವಿಭಾಗಾಧಿಕಾರಿಗಳ ಕಚೇರಿ ಎದುರು ನಡೆದಿರುವ ಭೂಹಕ್ಕು ಹೋರಾಟ ರಾಜಕೀಯ ಪ್ರೇರಿತವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಈಗ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಿರುವವರು ಈ ಹಿಂದೆ ತಮ್ಮದೇ ಸರ್ಕಾರ ಇದ್ದಾಗ ಏಕೆ ಹಕ್ಕುಪತ್ರ ಹಂಚಿಕೆ ಮಾಡಲಿಲ್ಲ? ಪ್ರಸ್ತುತ ಆಚಾಪುರದ ಜಮೀನು ಪ್ರಕರಣ ನ್ಯಾಯಾಲಯದಲ್ಲಿದ್ದು, ಹಕ್ಕುಪತ್ರ ನೀಡಲು ಸಾಧ್ಯವಿಲ್ಲ. ಈ ವಿಚಾರ ತಿಳಿದಿದ್ದರೂ ಕೆಲವರು ಹೋರಾಟ ನಡೆಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಬೇಳೂರು ವಿರುದ್ಧ ಹಾಲಪ್ಪ ಆಕ್ರೋಶ..
ಶಾಸಕರಾಗಿದ್ದವರು ಜನರಿಗೆ ಹಕ್ಕುಪತ್ರ ಏಕೆ ನೀಡಲಿಲ್ಲ ಎಂದು ಪ್ರಶ್ನಿಸಿರುವ ಮಾಜಿ ಸಚಿವ ಹರತಾಳು ಹಾಲಪ್ಪ, ಒಂದು ಗ್ರಾಮದ ಜಮೀನು ಪ್ರಕರಣ ನ್ಯಾಯಾಲಯದಲ್ಲಿದ್ದರೂ ಉಳಿದ ಮೂರು ಗ್ರಾಮಗಳ ಜನರಿಗೆ ಹಕ್ಕುಪತ್ರ ನೀಡಬಹುದಿತ್ತಲ್ಲವೇ ಎಂದು ಪ್ರತಿಕ್ರಿಯಿಸಿದ್ದಾರೆ.
ಜನರಿಗೆ ತಪ್ಪು ಮಾಹಿತಿ ನೀಡಬಾರದು. ಜನಪರ ವಿಷಯಗಳಲ್ಲಿ ರಾಜಕೀಯ ಪಕ್ಷವಾಗಿ ಬಡವರ ಪರ ನಿಲ್ಲುವುದು ತಮ್ಮ ಬದ್ಧತೆ ಎಂದು ಆಕ್ರೋಶ ಹೊರ ಹಾಕಿದರು.

‘ಬೇಳೂರು ಬಡವರ ಪರ ನಿಂತಿಲ್ಲ’—ರತ್ನಾಕರ ಹೊನಗೋಡು
ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ರತ್ನಾಕರ ಹೊನಗೋಡು, ಪ್ರಕರಣ ಯಾವ ನ್ಯಾಯಾಲಯದಲ್ಲಿದೆ ಎಂಬುದು ಶಾಸಕರಿಗೆ ಗೊತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಪ್ರಕರಣ ನ್ಯಾಯಾಲಯದಲ್ಲಿದ್ದರೆ ಸರ್ಕಾರದ ವತಿಯಿಂದ ಸಮರ್ಥ ನ್ಯಾಯವಾದಿಗಳನ್ನು ನೇಮಿಸಿ ಬಡವರ ಪರವಾಗಿ ಕಾನೂನು ಹೋರಾಟ ನಡೆಸಬಹುದಿತ್ತು. ನ್ಯಾಯಾಲಯದಲ್ಲಿರುವ ಪ್ರಕರಣದ ಇತ್ಯರ್ಥಕ್ಕೆ ಕ್ರಮ ಕೈಗೊಂಡು ಅರ್ಹ ಬಡ ಕುಟುಂಬಗಳಿಗೆ ಭೂಮಿಹಕ್ಕು ಕೊಡಿಸಬಹುದಿತ್ತು. ಆದರೆ ಶಾಸಕರು ಬಡವರ ಪರವಾಗಿ ನಿಂತಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವಿಕುಗ್ವೆ, ರೇವಪ್ಪ ಎಚ್. ಹೊಸಕೊಪ್ಪ, ಭರ್ಮಪ್ಪ ಅಂದಾಸುರ, ವೀರೇಶ್ ಕುಮಾರ್, ದೇವೇಂದ್ರಪ್ಪ, ಗಣೇಶ್ ಪ್ರಸಾದ್, ರಾಜು ದೇವಾಡಿಗ, ಮೋಹನ್ ಕುಮಾರ್, ನಾಗರಾಜ್ ದಾಸಕೊಪ್ಪ, ಕನ್ನಪ್ಪ ಬೆಳಲಮಕ್ಕಿ, ಜಗನ್ನಾಥ್, ಉಮಾ ಸೇರಿದಂತೆ ಹಲವರು ಭಾಗವಹಿಸಿದ್ದರು.











