ಶಿವಮೊಗ್ಗ: ನಗರದ ದುರ್ಗಿಗುಡಿಯ ರಾಘವೇಂದ್ರಸ್ವಾಮಿ ಮಠದ ಎದುರಿನ ತನು ಜ್ಯೂಸ್ ಸೆಂಟರ್‌ನಲ್ಲಿ ಕೊಳೆತ ಹಣ್ಣುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಜ್ಯೂಸ್ ಸೆಂಟರ್‌ನ್ನು ಸೀಜ್ ಮಾಡಿದ ಘಟನೆ ಬುಧವಾರ ನಡೆದಿದೆ.
ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದಲ್ಲಿ ಆಹಾರ ಮಳಿಗೆಗಳ ತಪಾಸಣೆ ನಡೆಸಲಾಗಿದ್ದು, ತನು ಜ್ಯೂಸ್ ಸೆಂಟರ್‌ನಲ್ಲಿ ಸ್ವಚ್ಛತೆ ಹಾಗೂ ಆಹಾರ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಹಲವು ಲೋಪಗಳು ಕಂಡುಬಂದಿವೆ. ಕೊಳೆತ ಹಣ್ಣುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ತಪಾಸಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಪವಿಭಾಗಾಧಿಕಾರಿ ಡಾ. ಮೈತ್ರಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ (FSSAI) ಮಾರ್ಗಸೂಚಿಗಳಂತೆ ಆಹಾರ ಮಳಿಗೆಗಳಲ್ಲಿ ಸ್ವಚ್ಛತೆ ಹಾಗೂ ಆಹಾರ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದರು.
ದುರ್ಗಿಗುಡಿ ದರ್ಗಾ ಕಾಂಪ್ಲೆಕ್ಸ್ ಸೇರಿದಂತೆ ವಿವಿಧೆಡೆ ಸುಮಾರು 15 ಹೋಟೆಲ್‌ಗಳು ಹಾಗೂ ಆಹಾರ ಮಳಿಗೆಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಹಲವು ಕಡೆ ಅಡುಗೆ ಪ್ರದೇಶ, ಪಾತ್ರೆ ತೊಳೆಯುವ ಸ್ಥಳ ಸೇರಿದಂತೆ ವಿವಿಧೆಡೆ ಸ್ವಚ್ಛತೆಯ ಕೊರತೆ ಕಂಡುಬಂದಿದ್ದು, ಕೆಲವು ಮಳಿಗೆಗಳಲ್ಲಿ ಜಿರಳೆಗಳು ಓಡಾಡುತ್ತಿರುವುದು ಕೂಡ ಪತ್ತೆಯಾಗಿದೆ ಎಂದು ತಿಳಿಸಿದರು.

15 ದಿನಗಳ ಗಡುವು
ಆಹಾರ ಮಳಿಗೆಗಳ ಮಾಲೀಕರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದ್ದು, ಕಂಡುಬಂದಿರುವ ಲೋಪಗಳನ್ನು ಸರಿಪಡಿಸಿಕೊಳ್ಳಲು 15 ದಿನಗಳ ಗಡುವು ನೀಡಲಾಗಿದೆ. ಗಡುವು ಮುಗಿದ ಬಳಿಕ ಮತ್ತೆ ಪರಿಶೀಲನೆ ನಡೆಸಲಾಗುವುದು. ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಆಹಾರ ಪರವಾನಗಿ ರದ್ದುಪಡಿಸುವ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಮೈತ್ರಿ ಎಚ್ಚರಿಸಿದರು.
ಇದೇ ವೇಳೆ ಮಲ್ನಾಡ್ ರೆಸ್ಟೋರೆಂಟ್‌ನಲ್ಲಿ ಅವಧಿ ಮೀರಿದ ಕೂಲ್‌ಡ್ರಿಂಕ್ಸ್‌ಗಳು ಪತ್ತೆಯಾಗಿದ್ದು, ಅವುಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಈರುಳ್ಳಿ ಸೇರಿದಂತೆ ಕತ್ತರಿಸಿದ ತರಕಾರಿಗಳನ್ನು ಹಲವು ದಿನಗಳ ಕಾಲ ಫ್ರಿಡ್ಜ್‌ನಲ್ಲಿ ಸಂಗ್ರಹಿಸುವುದು ಹಾಗೂ ಬೋಂಡಾ, ಬಜ್ಜಿ ಮತ್ತಿತರ ಆಹಾರ ಪದಾರ್ಥಗಳನ್ನು ಪತ್ರಿಕೆಯಲ್ಲಿ ಸುತ್ತಿ ನೀಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ರೀತಿಯ ಕ್ರಮಗಳನ್ನು ತಪ್ಪಿಸಿ ಆಹಾರ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಳಿಗೆಗಳ ಮಾಲೀಕರಿಗೆ ಸೂಚಿಸಲಾಗಿದೆ.
ತಪಾಸಣೆ ವೇಳೆ ಕೆಲವು ಕಡೆ ಕೊಳೆತ ಮೀನು ಪತ್ತೆಯಾಗಿದ್ದು, ಅದರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಬಂದ ಬಳಿಕ ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಮೈತ್ರಿ ತಿಳಿಸಿದರು.
ಆಹಾರ ಸುರಕ್ಷತೆ ಕುರಿತು ಈಗಾಗಲೇ ಕಾರ್ಯಾಗಾರಗಳನ್ನು ನಡೆಸಿ, ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಆಹಾರ ಮಳಿಗೆಗಳ ಮಾಲೀಕರಿಗೆ ತರಬೇತಿ ಮತ್ತು ಮಾರ್ಗಸೂಚಿಗಳನ್ನು ನೀಡಲಾಗಿದೆ. ಆದರೂ ಕೆಲವು ಕಡೆ ನಿರ್ಲಕ್ಷ್ಯ ಮುಂದುವರಿದಿರುವುದು ಕಂಡುಬಂದಿದ್ದು, ಲೋಪಗಳನ್ನು ತಕ್ಷಣ ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಸ್ಟ್ರೀಟ್ ಫುಡ್ ಸೆಂಟರ್‌ಗಳ ಮೇಲೂ ನಿಗಾ
ಪಾನಿಪುರಿ, ಚಾಟ್ಸ್, ಬೋಂಡಾ–ಬಜ್ಜಿ ಸೇರಿದಂತೆ ರಸ್ತೆ ಬದಿಯ ಆಹಾರ ಮಳಿಗೆಗಳ ಮೇಲೂ ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಟಿಹೆಚ್‌ಓ ತಂಡ ನಿಯಮಿತವಾಗಿ ಪರಿಶೀಲನೆ ನಡೆಸುತ್ತಿದೆ. ಆಹಾರ ಪದಾರ್ಥಗಳಲ್ಲಿ ಬಣ್ಣಗಳು, ಟೇಸ್ಟಿಂಗ್ ಪೌಡರ್ ಸೇರಿದಂತೆ ವಿವಿಧ ಪದಾರ್ಥಗಳ ಬಳಕೆಯ ಮೇಲೂ ನಿಗಾ ವಹಿಸಲಾಗುತ್ತಿದೆ.
ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಆಹಾರ ಮಾರಾಟ ಮಾಡುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
15 ದಿನಗಳ ಬಳಿಕ ಇದೇ ಪ್ರದೇಶಗಳಲ್ಲಿ ಫಾಲೋಅಪ್ ತಪಾಸಣೆ ನಡೆಸಲಾಗುವುದು. ಈ ಹಿಂದೆ ಪರಿಶೀಲನೆ ನಡೆಸಿದ ಹೋಟೆಲ್‌ಗಳು ಹಾಗೂ ಆಹಾರ ಕೇಂದ್ರಗಳ ಮೇಲೂ ನಿರಂತರ ನಿಗಾ ಮುಂದುವರಿಯಲಿದೆ. ಆಹಾರ ಮಾದರಿಗಳ ಪರೀಕ್ಷಾ ವರದಿ ನಿಯಮ ಉಲ್ಲಂಘನೆ ದೃಢಪಡಿಸಿದಲ್ಲಿ ಸಂಬಂಧಪಟ್ಟ ಮಳಿಗೆಗಳ ವಿರುದ್ಧ ಸೀಜರ್ ಹಾಗೂ ಪರವಾನಗಿ ರದ್ದುಪಡಿಸುವ ಕ್ರಮ ಸೇರಿದಂತೆ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಮೈತ್ರಿ ತಿಳಿಸಿದರು.











