Home Blog ಶಾಂತಿಯುತ ಗಣಪತಿ ವಿಸರ್ಜನೆಗೆ ಖಾಕಿ ಸಜ್ಜು; ಡಿಜೆ ಬಳಕೆಗೆ ಅವಕಾಶವಿಲ್ಲ: ಐಪಿಎಸ್ ಬೆನಕ ಪ್ರಸಾದ್..!!

ಶಾಂತಿಯುತ ಗಣಪತಿ ವಿಸರ್ಜನೆಗೆ ಖಾಕಿ ಸಜ್ಜು; ಡಿಜೆ ಬಳಕೆಗೆ ಅವಕಾಶವಿಲ್ಲ: ಐಪಿಎಸ್ ಬೆನಕ ಪ್ರಸಾದ್..!!

0
14

✒️..ಅಮಿತ್ ಆರ್ ಆನಂದಪುರ

(ಸಾಗರ)ಆನಂದಪುರ: ಸುಪ್ರೀಂ ಕೋರ್ಟ್ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಯವರ ಆದೇಶದಂತೆ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಡಿಜೆ ಬಳಸಬಾರದು ಎಂದು ಸಾಗರ ಉಪವಿಭಾಗದ ಎಎಸ್‌ಪಿ ಡಾ. ಬೆನಕ ಪ್ರಸಾದ್ ಹೇಳಿದರು.

ಆನಂದಪುರ ಪೊಲೀಸ್ ಠಾಣೆಯಲ್ಲಿ ಸೋಮವಾರ ಗಣಪತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಾಗರ ಪೊಲೀಸ್ ಉಪವಿಭಾಗದ ವ್ಯಾಪ್ತಿಯಲ್ಲಿ ಒಟ್ಟು 420 ಗಣಪತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಮೂರು ದಿನಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಗಣಪತಿ ವಿಸರ್ಜನೆ ನಡೆಯುವ ಸಾಧ್ಯತೆ ಇರುವುದರಿಂದ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಈ ಬಾರಿ ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 125 ಹೋಂ ಗಾರ್ಡ್‌ಗಳ ಜೊತೆಗೆ ಕೆಎಸ್‌ಆರ್‌ಪಿ ಹಾಗೂ ಡಿಆರ್ ಸಿಬ್ಬಂದಿ ಸೇರಿದಂತೆ ಹೊರ ಜಿಲ್ಲೆಗಳಿಂದ 200 ಮಂದಿ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಸ್ಥಳಗಳನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಸಾಗರದ ಜನತ್ ಗಲ್ಲಿ ಹಾಗೂ ಎಸ್‌ಎನ್ ನಗರ , ಆನಂದಪುರ ವಲಯ ಸೇರಿದಂತೆ ಸೂಕ್ಷ್ಮ ಪ್ರದೇಶಗಳ ಗಣಪತಿ ವಿಸರ್ಜನೆ ವೇಳೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.

ವಿಸರ್ಜನೆ ಸಂದರ್ಭದಲ್ಲಿ ಗಣಪತಿ ಮಂಡಳಿಗಳು ಪೊಲೀಸ್ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಿಶೇಷವಾಗಿ ಡಿಜೆ ಬಳಕೆಗೆ ಅವಕಾಶವಿಲ್ಲ. ವಿಸರ್ಜನಾ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸಿ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಪೊಲೀಸರೊಂದಿಗೆ ಸಹಕರಿಸಬೇಕು. ಎಲ್ಲರೂ ಕಾನೂನು ಮತ್ತು ಸುವ್ಯವಸ್ಥೆಗೆ ಆದ್ಯತೆ ನೀಡಿ ಹಬ್ಬವನ್ನು ಶಾಂತಿಯುತವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಬೇಕು ಎಂದು ಎಎಸ್‌ಪಿ ಡಾ. ಬೆನಕ ಪ್ರಸಾದ್ ಮನವಿ ಮಾಡಿದರು.

ಗಣಪತಿ ಮಂಡಳಿಗಳ ಪದಾಧಿಕಾರಿಗಳೊಂದಿಗೆ ಈಗಾಗಲೇ ಸಭೆ ನಡೆಸಿ ಸರ್ಕಾರದ ಹಾಗೂ ಪೊಲೀಸ್ ಇಲಾಖೆಯ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ. ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಗಣಪತಿ ಮಂಡಳಿಗಳು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಅವರು ಕೋರಿದರು.

ಈ ಸಂದರ್ಭದಲ್ಲಿ ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಉಪಸ್ತಿತರಿದ್ದರು.

NO COMMENTS