Home Shivamogga Sagara ಹಾಲಪ್ಪನವರೇ, ಹೆಣ್ಣುಮಕ್ಕಳ ಬಗ್ಗೆ ವ್ಯಂಗ್ಯವಾಗಿ ಮಾತನಾಡುವುದನ್ನು ಬಿಡಿ: ಸಿರಿಜಾನ್ ಆರೋಪ..!!

ಹಾಲಪ್ಪನವರೇ, ಹೆಣ್ಣುಮಕ್ಕಳ ಬಗ್ಗೆ ವ್ಯಂಗ್ಯವಾಗಿ ಮಾತನಾಡುವುದನ್ನು ಬಿಡಿ: ಸಿರಿಜಾನ್ ಆರೋಪ..!!

0
6

ನಮ್ಮದು ಮೊಸಳೆ ಕಣ್ಣೀರಲ್ಲ; ಶಾಸಕರ ಮಗಳ ಭಾವನೆಗಳನ್ನು ರಾಜಕೀಯವಾಗಿ ವ್ಯಂಗ್ಯ ಮಾಡುವುದು ಸರಿಯಲ್ಲ ಎಂದು ಆಕ್ರೋಶ

ಸಾಗರ(ಆನಂದಪುರ): ಹೆಣ್ಣುಮಕ್ಕಳ ಭಾವನೆಗಳನ್ನು ವ್ಯಂಗ್ಯವಾಗಿ ಮಾತನಾಡುವುದನ್ನು ಮಾಜಿ ಶಾಸಕ ಹರತಾಳು ಹಾಲಪ್ಪನವರು ಬಿಡಬೇಕು. ನಮ್ಮದು ಮೊಸಳೆ ಕಣ್ಣೀರಲ್ಲ ಎಂದು ಸಿರಿಜಾನ್ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಕಾಂಗ್ರೆಸ್‌ನ ಹಿರಿಯ ಜಿಲ್ಲಾ ಮುಖಂಡೆ ಆರೋಪಿಸಿದರು.

ಬುಧವಾರ ಆನಂದಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಾಸಕರ ಮಗಳು ಚುನಾವಣಾ ಸಂದರ್ಭದಲ್ಲಿ ಕಣ್ಣೀರು ಹಾಕಿದ ವಿಚಾರವನ್ನು ಹಾಲಪ್ಪನವರು ಪದೇಪದೇ ಪ್ರಸ್ತಾಪಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಚುನಾವಣೆಯ ಸಂದರ್ಭದಲ್ಲಿ ಶಾಸಕರ ಮಗಳು ಕಣ್ಣೀರು ಹಾಕಿ ಮತಗಳನ್ನು ಗಿಟ್ಟಿಸಿಕೊಳ್ಳಲು ನಾನು ಹೇಳಿದ್ದೆ ಎಂದು ಹಾಲಪ್ಪನವರು ಪದೇಪದೇ ಹೇಳುತ್ತಿದ್ದಾರೆ. ಆದರೆ ಶಾಸಕರ ಮಗಳೇನು ಚಿಕ್ಕ ಹುಡುಗಿಯಲ್ಲ. ಚುನಾವಣೆಯ ಸಮಯದಲ್ಲಿ ಅವರಿಗೆ ಸುಮಾರು 30 ವರ್ಷ ವಯಸ್ಸಾಗಿತ್ತು. ಎಲ್‌ಐಸಿ ರವಿ ಅವರ ಮನೆಯಲ್ಲಿ ಶಾಸಕರ ಮಗಳು ಬಂದಿದ್ದ ಸಂದರ್ಭದಲ್ಲಿ ಜನರನ್ನು ಕಂಡು ಸಂತೋಷದಿಂದ ಕಣ್ಣೀರು ಹಾಕಿದ್ದರು. ಹಿರಿಯಳಾದ ನಾನು ಆ ಸಂದರ್ಭದಲ್ಲಿ ಅವರಿಗೆ ಸಮಾಧಾನ ಹೇಳಿದ್ದೆ. ಇದೊಂದು ಸಹಜ ಭಾವನಾತ್ಮಕ ಕ್ಷಣವಾಗಿತ್ತು. ಆದರೆ ಅದನ್ನೇ ರಾಜಕೀಯವಾಗಿ ವ್ಯಂಗ್ಯ ಮಾಡುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಕೆಲಸವನ್ನು ಬಂದು ನೋಡಿ

ನಾನು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಸಂದರ್ಭದಲ್ಲಿ ಕಾಗೋಡು ತಿಮ್ಮಪ್ಪನವರು ವಿಧಾನಸಭಾಧ್ಯಕ್ಷರಾಗಿದ್ದರು. ಆ ಅವಧಿಯಲ್ಲಿ ನಮ್ಮ ಭಾಗಕ್ಕೆ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದೇನೆ. ನಾನು ಯಾವ ಪ್ರಮಾಣದಲ್ಲಿ ಕೆಲಸ ಮಾಡಿದ್ದೇನೆ ಎಂಬುದನ್ನು ನೋಡಲು ಹಾಲಪ್ಪನವರಿಗೆ ಆಹ್ವಾನ ನೀಡುತ್ತೇನೆ. ನಾಳೆಯೇ ಬಂದು ನಮ್ಮ ಭಾಗದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಲಿ. ಕಾಂಗ್ರೆಸ್ ಏನೂ ಕೆಲಸ ಮಾಡಿಲ್ಲ ಎಂದು ಆರೋಪಿಸುವ ಮೊದಲು ವಾಸ್ತವಾಂಶಗಳನ್ನು ತಿಳಿದುಕೊಳ್ಳಲಿ ಎಂದು ಸವಾಲು ಹಾಕಿದರು.

ಬಿಜೆಪಿ ಅವಧಿಯಲ್ಲಿ ಎಷ್ಟು ಹಕ್ಕುಪತ್ರ ನೀಡಿದ್ದೀರಿ?

ಕಾಂಗ್ರೆಸ್ ಸರ್ಕಾರ ಏನೂ ಕೆಲಸ ಮಾಡಿಲ್ಲ ಎಂದು ಹಾಲಪ್ಪನವರು ಪದೇಪದೇ ಹೇಳುತ್ತಿದ್ದಾರೆ. ಆದರೆ ಕಾಗೋಡು ತಿಮ್ಮಪ್ಪನವರ ಅವಧಿಯಲ್ಲಿ ಬಗರ್ ಹುಕುಂ 14 ಸಾವಿರ ಹಕ್ಕುಪತ್ರಗಳನ್ನು ನೀಡಲಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಎಷ್ಟು ಹಕ್ಕುಪತ್ರಗಳನ್ನು ನೀಡಲಾಗಿದೆ ಎಂಬುದನ್ನು ಹಾಲಪ್ಪನವರು ಸ್ಪಷ್ಟಪಡಿಸಲಿ ಎಂದು ಪ್ರಶ್ನಿಸಿದರು.

ಹೆಣ್ಣುಮಕ್ಕಳ ಕಣ್ಣೀರನ್ನು ನಾಟಕ ಎನ್ನುವುದು ಸರಿಯಲ್ಲ

ಹೆಣ್ಣುಮಕ್ಕಳು ಕಣ್ಣೀರು ಹಾಕಿದಾಗ ಅದನ್ನು ನಾಟಕೀಯವಾಗಿ ಬಿಂಬಿಸುವುದು ಸರಿಯಲ್ಲ. ಹಾಲಪ್ಪನವರೇ, ಚುನಾವಣೆಯ ಸಂದರ್ಭದಲ್ಲಿ ನೀವು ಗಂಡು ಮಕ್ಕಳು ಜನರ ಮನೆಬಾಗಿಲಿಗೆ ತೆರಳಿ ಮತಯಾಚನೆ ಮಾಡುತ್ತೀರಿ. ನಿಮ್ಮ ದೊಡ್ಡ ದೊಡ್ಡ ನಾಯಕರೇ ಹಲವು ಸಂದರ್ಭಗಳಲ್ಲಿ ಕಣ್ಣೀರು ಹಾಕಿದ್ದಾರೆ.

ಹೆಣ್ಣುಮಕ್ಕಳ ಭಾವನೆಗಳನ್ನು ಈ ರೀತಿಯಾಗಿ ವ್ಯಂಗ್ಯ ಮಾಡುವುದು ಸರಿಯಲ್ಲ. ಹಾಲಪ್ಪನವರ ಹೇಳಿಕೆಗಳಿಂದ ನನಗೆ ಬಹಳ ಬೇಸರವಾಗಿದೆ. ನಮ್ಮದು ಮೊಸಳೆ ಕಣ್ಣೀರಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

NO COMMENTS