ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಹೀಲಗೋಡು ಗ್ರಾಮದಲ್ಲಿ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ಸಾಗಿಸಲು ಸಿದ್ಧತೆ ನಡೆಸಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಪತ್ತೆಹಚ್ಚಿದ್ದು, ಇಬ್ಬರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದೆ.
ಹೀಲಗೋಡು ಗ್ರಾಮದ ಸಂದೀಪ್ ಬಿನ್ ಅಣ್ಣಪ್ಪ ಅವರ ಮನೆಯ ಸಮೀಪ ಅಕ್ರಮ ಮರ ಕಡಿತ ಹಾಗೂ ಸಾಗಾಟದ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೀಲಗೋಡು ಗ್ರಾಮದ ಸಂದೀಪ್ (29) ಬಿನ್ ಅಣ್ಣಪ್ಪ ಹಾಗೂ ಮಂಜುನಾಥ ಕೆ.ಇ. (33) ಬಿನ್ ಈರಪ್ಪ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ಹೀಲಗೋಡು ಗ್ರಾಮದ ರಾಜೇಶ್ (31) ಬಿನ್ ಮಂಜುನಾಥ ಭಟ್ ಹಾಗೂ ಸಾಗರ ತಾಲ್ಲೂಕಿನ ಆನಂದಪುರ ಹೋಬಳಿಯ ನೇದರಹಳ್ಳಿ ಗ್ರಾಮದ ರಂಜಿತ್ (32) ಬಿನ್ ಗಣಪತಿ ಎಂಬುವವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಅರಣ್ಯ ಇಲಾಖೆ ಶೋಧ ಕಾರ್ಯ ಮುಂದುವರಿಸಿದೆ.
ಕಾರ್ಯಾಚರಣೆ ವೇಳೆ ಕಡಿದು ಸಾಗಿಸಲು ಸಿದ್ಧಪಡಿಸಿಟ್ಟಿದ್ದ ಒಟ್ಟು 0.641 ಘನ ಮೀಟರ್ ಅಳತೆಯ ಆರು ಬೀಟೆ ಜಾತಿಯ ನಾಟದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮರದ ಮೌಲ್ಯ ಲಕ್ಷಾಂತರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಹೊಸನಗರ ವಲಯ ಅರಣ್ಯಾಧಿಕಾರಿ ಆಸಿಫ್ ಅಹಮ್ಮದ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಉಪ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಸಿ.ಎಂ., ಗಸ್ತು ಅರಣ್ಯ ಪಾಲಕರಾದ ಪುಟ್ಟಸ್ವಾಮಿ ಕೆ.ವಿ., ಗಿರೀಶ್ ಎಸ್. ಹಾಗೂ ಸಿಬ್ಬಂದಿಗಳಾದ ರಮೇಶ್, ಸುರೇಶ್ ಎಂ.ಎಸ್., ಪುನೀತ್ ಮತ್ತು ಮಹೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.



