ನಗರ ಕೇಂದ್ರಿತ ಕೃಷಿ ಮೇಳಕ್ಕೆ ಬ್ರೇಕ್,ಮುಂದಿನ ಕೃಷಿ ಮೇಳ ಇರುವಕ್ಕಿಯಲ್ಲಿ ನಡೆಯಲಿ ವರದಿಗೆ ಪ್ರತಿಕ್ರಿಯಿಸಿದ ಕುಲಪತಿ..!!
✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ:ನಗರ ಕೇಂದ್ರಿತ ಕೃಷಿ ಮೇಳದ ಕುರಿತು ನಿನ್ನೆ ಪ್ರಕಟಿಸಿದ ವರದಿಗೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ವಿ. ಧನಂಜಯ ಅವರು ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ನಗರ ಪ್ರದೇಶದಲ್ಲಿ ಕೃಷಿ ಮೇಳ ಆಯೋಜಿಸುವುದಕ್ಕಿಂತ ಗ್ರಾಮೀಣ ಭಾಗದಲ್ಲಿರುವ ವಿಶ್ವವಿದ್ಯಾಲಯದ ಕೇಂದ್ರ ಕಚೇರಿ ಇರುವಕ್ಕಿಯಲ್ಲಿಯೇ ಕೃಷಿ ಮೇಳ ಆಯೋಜಿಸುವುದು ಅತ್ಯಂತ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾಲಯವು ಗ್ರಾಮೀಣ ಪ್ರದೇಶದಲ್ಲಿರುವುದರಿಂದ ಇಲ್ಲಿಯೇ ಕೃಷಿ ಮೇಳ ಆಯೋಜಿಸುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ನಗರ ಪ್ರದೇಶಗಳಲ್ಲಿ ಕೃಷಿ ಮೇಳ ಆಯೋಜಿಸಿದಾಗ ದೂರದ ಗ್ರಾಮೀಣ ಭಾಗಗಳಿಂದ ಬರುವ ರೈತರು ಕೆಲವೊಮ್ಮೆ ನಗರಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಆದರೆ ಇರುವಕ್ಕಿಯಲ್ಲಿಯೇ ಕೃಷಿ ಮೇಳ ನಡೆದರೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ರೈತರು ಸುಲಭವಾಗಿ ಭಾಗವಹಿಸಲು ಸಾಧ್ಯವಾಗುತ್ತದೆ. ಕೃಷಿ ತಂತ್ರಜ್ಞಾನ, ಸಂಶೋಧನೆ ಹಾಗೂ ಹೊಸ ಕೃಷಿ ಪದ್ಧತಿಗಳ ಮಾಹಿತಿಯನ್ನು ರೈತರು ನೇರವಾಗಿ ಪಡೆದುಕೊಳ್ಳಲು ಅವಕಾಶ ಸಿಗಲಿದೆ. ಈ ದೃಷ್ಟಿಯಿಂದ ಗ್ರಾಮೀಣ ಪ್ರದೇಶದಲ್ಲಿರುವ ವಿಶ್ವವಿದ್ಯಾಲಯದ ಕೇಂದ್ರ ಕಚೇರಿಯಲ್ಲಿಯೇ ಕೃಷಿ ಮೇಳ ಆಯೋಜಿಸುವುದು ಸೂಕ್ತವಾಗಿದೆ ಎಂಬ ವರದಿಯ ಅಭಿಪ್ರಾಯವನ್ನು ಎತ್ತಿ ಹಿಡಿದಿದ್ದಾರೆ.

ಆದರೆ ವಿಶ್ವವಿದ್ಯಾಲಯದ ಕೇಂದ್ರ ಕಚೇರಿ ಇರುವಕ್ಕಿಯಲ್ಲಿದ್ದು, ಗ್ರಾಮೀಣ ಪ್ರದೇಶದಲ್ಲಿರುವ ಈ ಸಂಸ್ಥೆಯನ್ನು ನಾನು ಅಧಿಕಾರ ವಹಿಸಿಕೊಂಡ ನಂತರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಕೃಷಿ ಮೇಳ ಆಯೋಜಿಸಲು ಸುಮಾರು 15ರಿಂದ 20 ಎಕರೆ ವಿಶಾಲವಾದ ಜಾಗದ ಅಗತ್ಯವಿದೆ. ಆದರೆ ಇರುವಕ್ಕಿಯಲ್ಲಿ ಅಷ್ಟೊಂದು ವಿಶಾಲವಾದ ಖಾಲಿ ಜಾಗದ ಲಭ್ಯತೆ ಇಲ್ಲ. ಅರಣ್ಯ ಇಲಾಖೆಯ ವ್ಯಾಪ್ತಿಗೆ ಸಂಬಂಧಿಸಿದ ಅಗತ್ಯ ಅನುಮತಿಗಳನ್ನು ಪಡೆದುಕೊಂಡು ಹಂತ ಹಂತವಾಗಿ ವಿಶ್ವವಿದ್ಯಾಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳು ಹಿಂದೇಟು ಹಾಕುವ ಪರಿಸ್ಥಿತಿಯೂ ಇದೆ. ಅಂತಹ ಅಧಿಕಾರಿಗಳನ್ನು ಮನವೊಲಿಸಿ ಇರುವಕ್ಕಿಯಲ್ಲಿಯೇ ಉಳಿಸಿಕೊಂಡು ಕಾರ್ಯನಿರ್ವಹಿಸುವಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿಯೇ ಕೃಷಿ ಮೇಳ ಆಯೋಜಿಸುವುದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಈ ವಿಚಾರವನ್ನು ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತಂದು ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಕಾರ್ಯಚಟುವಟಿಕೆಗಳನ್ನು ಆರಂಭಿಸಲು ಮುಂದಾಗುತ್ತೇವೆ ಎಂದು ಹೇಳಿದರು.
ಒಟ್ಟಾರೆ, ಮುಂದಿನ ದಿನಗಳಲ್ಲಿ ಕೃಷಿ ಮೇಳ ನಗರಕ್ಕೆ ಸೀಮಿತವಾಗದೆ ಗ್ರಾಮೀಣ ಭಾಗದ ರೈತರಿಗೆ ನೇರವಾಗಿ ತಲುಪಬೇಕು ಎಂಬ ಆಶಯದೊಂದಿಗೆ ಇರುವಕ್ಕಿಯಲ್ಲಿಯೇ ಕೃಷಿ ಮೇಳ ಆಯೋಜಿಸುವ ಕುರಿತು ಕುಲಪತಿಗಳು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ.



