✒️…ಅಮಿತ್ .ಆರ್, ಆನಂದಪುರ
ಶಿವಮೊಗ್ಗ: ರೈತರ ಕೃಷಿ ಅಭಿವೃದ್ಧಿ, ಸಂಶೋಧನೆ ಹಾಗೂ ನೂತನ ಕೃಷಿ ತಂತ್ರಜ್ಞಾನಗಳ ಪರಿಚಯದ ಉದ್ದೇಶದಿಂದ ಸ್ಥಾಪನೆಯಾದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ಮೇಳ-2026 ಇಂದು (ಅ.30) ಶಿವಮೊಗ್ಗ ನಗರದ ನವಿಲೆ ಆವರಣದಲ್ಲಿ ಆರಂಭವಾಗಿದೆ. ಆದರೆ ಈ ಮೇಳದ ಸ್ಥಳ ಆಯ್ಕೆಯೇ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲಿ ಸುಮಾರು 777 ಎಕರೆ ವಿಶಾಲ ಪ್ರದೇಶದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಮಲೆನಾಡಿನ ಗ್ರಾಮೀಣ ಭಾಗದ ರೈತರ ಕೃಷಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಸಂಶೋಧನೆ ನಡೆಸುವುದು ಹಾಗೂ ಕೃಷಿ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುವುದು ವಿಶ್ವವಿದ್ಯಾಲಯದ ಪ್ರಮುಖ ಉದ್ದೇಶವಾಗಿದೆ. ಹೀಗಿರುವಾಗ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿಯೇ ಕೃಷಿ ಮೇಳ ಆಯೋಜಿಸಲು ಸಾಧ್ಯವಿರಲಿಲ್ಲವೇ ಎಂಬ ಪ್ರಶ್ನೆ ಮೂಡಿದೆ.
ರೈತರಿಗಾಗಿ ಇರುವ ಮೇಳಕ್ಕೆ ರೈತರ ಪ್ರದೇಶವೇ ಬೇಡವಾಯಿತೇ?
ಕೃಷಿ ಮೇಳ ಎಂದರೆ ಕೇವಲ ಮಳಿಗೆಗಳ ಪ್ರದರ್ಶನವಲ್ಲ. ಅದು ರೈತರು, ಕೃಷಿ ವಿಜ್ಞಾನಿಗಳು ಮತ್ತು ಸಂಶೋಧಕರ ನಡುವಿನ ನೇರ ಸಂಪರ್ಕದ ವೇದಿಕೆ. ಇಂತಹ ಮಹತ್ವದ ಕಾರ್ಯಕ್ರಮವನ್ನು ಇರುವಕ್ಕಿಯಲ್ಲಿಯೇ ಆಯೋಜಿಸಿದ್ದರೆ ಮಲೆನಾಡಿನ ಗ್ರಾಮೀಣ ರೈತರಿಗೆ ವಿಶ್ವವಿದ್ಯಾಲಯದ ಸಂಶೋಧನೆ, ಪ್ರಾತ್ಯಕ್ಷಿಕೆ ಹಾಗೂ ಕೃಷಿ ತಂತ್ರಜ್ಞಾನಗಳನ್ನು ನೇರವಾಗಿ ವೀಕ್ಷಿಸುವ ಅವಕಾಶ ಸಿಗುತ್ತಿತ್ತು.
ಆದರೆ ಮೇಳವನ್ನು ನವಿಲೆಯಲ್ಲಿ ಆಯೋಜಿಸಿರುವುದರ ಹಿಂದಿನ ಉದ್ದೇಶವೇನು? ಅಧಿಕಾರಿಗಳು, ಸಚಿವರು ಹಾಗೂ ರಾಜಕೀಯ ನಾಯಕರಿಗೆ ಆಗಮಿಸಲು ಅನುಕೂಲವಾಗಲೆಂದೇ ನಗರ ಪ್ರದೇಶವನ್ನು ಆಯ್ಕೆ ಮಾಡಲಾಗಿದೆಯೇ? ಅಥವಾ ನವಿಲೆಯಲ್ಲಿನ ಮೂಲಸೌಕರ್ಯ ಮತ್ತು ಸಾರಿಗೆ ವ್ಯವಸ್ಥೆಯೇ ಸ್ಥಳ ಆಯ್ಕೆಗೆ ಪ್ರಮುಖ ಕಾರಣವೇ? ಎಂಬುದು ಸಾರ್ವಜನಿಕ ವಲಯದಲ್ಲಿ ಮಾತುಗಳು ಬರುತ್ತಿವೆ.

ಗ್ರಾಮೀಣ ರೈತರಿಗೆ ಅನುಕೂಲವೇ? ದೂರದ ರೈತರಿಗೆ ಅನಾನುಕೂಲವೇ?
ಶಿವಮೊಗ್ಗದಲ್ಲಿ ಕೃಷಿ ಮೇಳ ಆಯೋಜಿಸುವುದರಿಂದ ನಗರ ಪ್ರದೇಶದ ಕೇಂದ್ರಿಕರಣ ಮತ್ತಷ್ಟು ಹೆಚ್ಚಾಗುತ್ತದೆ. ಬದಲಾಗಿ ಇರುವಕ್ಕಿಯಲ್ಲಿ ಕೃಷಿ ಮೇಳ ನಡೆದರೆ ಗ್ರಾಮೀಣ ಭಾಗದ ರೈತರು ವಿಶ್ವವಿದ್ಯಾಲಯದ ಸಂಶೋಧನೆ, ಕೃಷಿ ತಂತ್ರಜ್ಞಾನ ಹಾಗೂ ವಿವಿಧ ಪ್ರಾತ್ಯಕ್ಷಿಕೆಗಳ ನೇರ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ರೈತ ಸಂಘದ ಹಲವು ಮುಖಂಡರ ವಾದವಾಗಿದೆ.
ಆದರೆ ಮತ್ತೊಂದೆಡೆ, ಇರುವಕ್ಕಿಯಲ್ಲಿ ಕೃಷಿ ಮೇಳ ಆಯೋಜಿಸಿದರೆ ಸಾಗರ, ಸೊರಬ, ಶಿಕಾರಿಪುರ, ಹೊಸನಗರ ಸೇರಿದಂತೆ ಶಿರಸಿ ಮತ್ತು ಸಿದ್ದಾಪುರ ತಾಲ್ಲೂಕುಗಳಿಂದ ಆಗಮಿಸುವ ರೈತರಿಗೆ ಪ್ರಯಾಣ ಹಾಗೂ ಸಾರಿಗೆ ವ್ಯವಸ್ಥೆಯ ದೃಷ್ಟಿಯಿಂದ ಸಾಕಷ್ಟು ಅನಾನುಕೂಲವಾಗಲಿದೆ ಎಂಬ ಚರ್ಚೆಯೂ ನಡೆಯುತ್ತಿದೆ.
ಹೀಗಾಗಿ ಮೇಳದ ಸ್ಥಳ ಆಯ್ಕೆ ವಿಚಾರದಲ್ಲಿ ಎರಡು ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಗ್ರಾಮೀಣ ರೈತರ ಹಿತಾಸಕ್ತಿ ಒಂದೆಡೆಯಾದರೆ, ವಿವಿಧ ತಾಲ್ಲೂಕುಗಳಿಂದ ಆಗಮಿಸುವ ರೈತರ ಸಾರಿಗೆ ಮತ್ತು ಪ್ರಯಾಣದ ಅನುಕೂಲ ಮತ್ತೊಂದೆಡೆಯಾಗಿದೆ. ಈ ಎರಡೂ ಅಂಶಗಳನ್ನು ಪರಿಗಣಿಸಿ ಮೇಳದ ಸ್ಥಳ ನಿರ್ಧರಿಸುವುದು ವಿಶ್ವವಿದ್ಯಾಲಯದ ಜವಾಬ್ದಾರಿಯಾಗಿದೆ.

ಇರುವಕ್ಕಿ ಕೇವಲ ವಿಶ್ವವಿದ್ಯಾಲಯದ ವಿಳಾಸವಾಗಬಾರದು..!
ಗ್ರಾಮೀಣ ಭಾಗದಲ್ಲಿ ಇಷ್ಟು ವಿಶಾಲ ಪ್ರದೇಶದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾದ ಮೇಲೆ, ಅದರ ಪ್ರಯೋಜನ ಸ್ಥಳೀಯ ರೈತರಿಗೆ ಹಾಗೂ ಮಲೆನಾಡಿನ ಕೃಷಿ ಸಮುದಾಯಕ್ಕೆ ನೇರವಾಗಿ ತಲುಪಬೇಕು. ಕೃಷಿ ಮೇಳದಂತಹ ಬೃಹತ್ ಕಾರ್ಯಕ್ರಮಗಳು ಇರುವಕ್ಕಿಯಲ್ಲಿಯೇ ನಡೆದರೆ ಆ ಪ್ರದೇಶದ ಅಭಿವೃದ್ಧಿಗೂ ಉತ್ತೇಜನ ದೊರೆಯುತ್ತದೆ. ಸ್ಥಳೀಯ ಜನರಿಗೆ ಉದ್ಯೋಗ, ವ್ಯಾಪಾರ ಹಾಗೂ ಸಾರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳು ಸೃಷ್ಟಿಯಾಗುತ್ತವೆ.
ಇಂದು ನವಿಲೆಯಲ್ಲಿ ಆರಂಭವಾಗಿರುವ ಕೃಷಿ ಮೇಳದಲ್ಲಿ 600ಕ್ಕೂ ಹೆಚ್ಚು ಮಳಿಗೆಗಳು, ವಿವಿಧ ಸಂಶೋಧನಾ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳು ಭಾಗವಹಿಸುತ್ತಿವೆ. ಇಂತಹ ಬೃಹತ್ ಕಾರ್ಯಕ್ರಮವನ್ನು ಇರುವಕ್ಕಿಯಲ್ಲಿ ನಡೆಸಲು ಸಾಧ್ಯವಾಗದಷ್ಟು ಮೂಲಸೌಕರ್ಯ ಕೊರತೆ ಇದೆಯೇ? ಇದ್ದರೆ ಅದನ್ನು ಸರಿಪಡಿಸುವ ಜವಾಬ್ದಾರಿ ಯಾರದ್ದು?
ಮುಂದಿನ ಮೇಳವಾದರೂ ಇರುವಕ್ಕಿಯಲ್ಲಿ ನಡೆಯಲಿ..!
ಕೃಷಿ ಮೇಳದ ಕೇಂದ್ರಬಿಂದು ರೈತರಾಗಲಿ. ರೈತರಿಗಾಗಿ ಸ್ಥಾಪನೆಯಾದ ವಿಶ್ವವಿದ್ಯಾಲಯದ ಪ್ರಮುಖ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿಯೂ ನಡೆಯುವಂತಾಗಲಿ. ನಗರದಲ್ಲಿ ಮೇಳ ಆಯೋಜಿಸುವುದರಿಂದ ಆಗುವ ಅನುಕೂಲಗಳ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುವುದರಿಂದ ಸಿಗುವ ಪ್ರಯೋಜನಗಳನ್ನೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಪರಿಗಣಿಸಬೇಕು.
ಒಟ್ಟಿನಲ್ಲಿ, ಕೃಷಿ ಮೇಳ ಎಲ್ಲಿ ನಡೆದರೆ ಹೆಚ್ಚಿನ ಸಂಖ್ಯೆಯ ರೈತರಿಗೆ ಅನುಕೂಲವಾಗುತ್ತದೆ ಎಂಬುದೇ ಸ್ಥಳ ಆಯ್ಕೆಯ ಮಾನದಂಡವಾಗಬೇಕು. ಮುಂದಿನ ಬಾರಿಯಾದರೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ಆವರಣ ಇರುವಕ್ಕಿಯಲ್ಲಿ ಕೃಷಿ ಮೇಳ ಆಯೋಜಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಚಿಂತಿಸಬೇಕಿದೆ.



