Home Blog ಕನ್ನಡದ ಅಸ್ಮಿತೆ ಉಳಿಸುವ ಹೊಣೆ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ: ರವಿಶಂಕರ್..!!

ಕನ್ನಡದ ಅಸ್ಮಿತೆ ಉಳಿಸುವ ಹೊಣೆ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ: ರವಿಶಂಕರ್..!!

20
0

ಸಾಗರ(ಆನಂದಪುರ): ಕನ್ನಡ ನಾಡು, ನುಡಿ, ಭಾಷೆ ಹಾಗೂ ಸಂಸ್ಕೃತಿಯ ಪಾರಂಪರಿಕ ವೈಭವವನ್ನು ಬಿಂಬಿಸುವ ಹಬ್ಬವೇ ಕನ್ನಡ ರಾಜ್ಯೋತ್ಸವ ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯ ರವಿಶಂಕರ್ ತಿಳಿಸಿದರು.

ಕನ್ನಡ ಸಂಘದ 48ನೇ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕನ್ನಡ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕರ್ನಾಟಕ ಏಕೀಕರಣದ ಸ್ಮರಣಾರ್ಥ ಆಚರಿಸುವ ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು. ಪ್ರತಿಯೊಂದು ಮನೆಯಲ್ಲೂ ಹಾಗೂ ಪ್ರತಿಯೊಬ್ಬರ ಮನದಲ್ಲೂ ಕನ್ನಡದ ಆಚರಣೆ ನಡೆಯಬೇಕು. ಕನ್ನಡ ಭಾಷೆಯ ಬಗ್ಗೆ ತಾತ್ಸಾರ ಮನೋಭಾವ ಇರಬಾರದು. ಸುಂದರವಾದ ಕನ್ನಡ ಭಾಷೆ, ನುಡಿ, ನೆಲ, ಜಲ ಹಾಗೂ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದರು.

ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಪುರಾತನ ಇತಿಹಾಸವಿದ್ದು, ಅದರ ಮಹತ್ವವನ್ನು ಇಂದಿನ ಯುವಜನತೆಗೆ ತಿಳಿಸಿಕೊಡಬೇಕು. ಕನ್ನಡ ನೆಲ, ಜಲ ಹಾಗೂ ಭಾಷೆಗೆ ಅನ್ಯಾಯವಾದಾಗ ಪ್ರತಿಯೊಬ್ಬ ಕನ್ನಡಿಗನೂ ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಧ್ವನಿ ಎತ್ತಬೇಕು. ನಮ್ಮ ಮನೆಗಳಲ್ಲಿ ಕನ್ನಡದ ದೀಪ ಬೆಳಗಿಸುವ ಮೂಲಕ ಭಾಷೆಯನ್ನು ಉಳಿಸಿ ಬೆಳೆಸೋಣ ಎಂದು ಕರೆ ನೀಡಿದರು.

ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಚಾರ್ಯ ಈಶ್ವರಪ್ಪ ಮಾತನಾಡಿ, ಕನ್ನಡ ನಾಡಿನ ಸಂಸ್ಕೃತಿ, ಸಂಸ್ಕಾರ, ಭಾಷೆ, ನೆಲ ಹಾಗೂ ಜಲದ ಮಹತ್ವ ಪ್ರತಿಯೊಬ್ಬ ಕನ್ನಡಿಗನಿಗೂ ತಿಳಿದಿರಬೇಕು. ಕನ್ನಡ ನಾಡಿನ ಗಡಿಭಾಗದ ಸಮಸ್ಯೆಗಳು ಇನ್ನೂ ಬಗೆಹರಿಯದೆ ಉಳಿದಿದ್ದು, ಅವುಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹರಿಸುವ ಅಗತ್ಯವಿದೆ ಎಂದರು.

ಕನ್ನಡ ಸಂಘದ ಅಧ್ಯಕ್ಷ ಪಿ.ಎನ್. ಚಂದ್ರಕುಮಾರ್ ಮಾತನಾಡಿ, ಯುವಜನತೆ ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಸಂಘವು ಈ ಬಾರಿ 48ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್, ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಧರ್ಮರಾಜ್, ಕನ್ನಡ ಸಂಘದ ಗೌರವಾಧ್ಯಕ್ಷ ರಾಜೇಂದ್ರ ಗೌಡ, ನಾಗರಾಜ್, ಕೆ.ಟಿ. ತಿಮ್ಮೇಶ, ಸುರೇಶ್ ನಾಯಕ್, ಕಾರ್ಯದರ್ಶಿ ಮಧುಕರ್ ನಾಯಕ್, ಗಜೇಂದ್ರ, ಅಶ್ವಿನ್, ಬುದ್ಯಪ್ಪ, ಉಮೇಶ್, ಎಂ.ಎಸ್. ಗಜೇಂದ್ರ, ನಾರಾಯಣ್, ಶಶಿಗೌಡ, ಮಾಫೀರ್, ಶ್ರೀನಿವಾಸ್, ಜಗನ್ನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಂತರ ಕನ್ನಡ ತಾಯಿ ಭುವನೇಶ್ವರಿಯ ಪ್ರತಿಮೆಯ ಭವ್ಯ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಮೆರವಣಿಗೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಹಾಗೂ ಕನ್ನಡ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.