Home Blog ನಾಗರಿಕ ಸನ್ಮಾನದ ಹಣ ದುರುಪಯೋಗ ಆರೋಪ: ರತ್ನಾಕರ ಹೊನಗೋಡು ವಿರುದ್ಧ ಸೋಮಶೇಖರ್ ಲಾವಿಗೆರೆ ವಾಗ್ದಾಳಿ..!!

ನಾಗರಿಕ ಸನ್ಮಾನದ ಹಣ ದುರುಪಯೋಗ ಆರೋಪ: ರತ್ನಾಕರ ಹೊನಗೋಡು ವಿರುದ್ಧ ಸೋಮಶೇಖರ್ ಲಾವಿಗೆರೆ ವಾಗ್ದಾಳಿ..!!

17
0

✒️..ಅಮಿತ್ ಆರ್ ಆನಂದಪುರ

ಸಾಗರ(ಆನಂದಪುರ): ಕಾಗೋಡು ತಿಮ್ಮಪ್ಪನವರಿಗೆ ನೀಡಿದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಕೋಟ್ಯಂತರ ರೂಪಾಯಿ ಹಣ ಹೊಡೆದುಕೊಂಡಿದ್ದಾರೆ ಎಂದು ರತ್ನಾಕರ ಹೊನಗೋಡು ಸುಳ್ಳು ಬಿಂಬಿಸುತ್ತಿರುವುದು ಸರಿ ಇಲ್ಲ ಎಂದು ನಾಗರಿಕ ಸನ್ಮಾನ ಸಮಿತಿಯ ಕಾರ್ಯಧ್ಯಕ್ಷರಾಗಿದ್ದ ಹಾಗೂ ಕಾಂಗ್ರೆಸ್ ಮುಖಂಡ ಸೋಮಶೇಖರ್ ಲಾವಿಗೆರೆ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಆನಂದಪುರದ ಕಡ್ಲೆ ಹಂಕ್ಲು ಮಾರಿಕಾಂಬ ದೇವಸ್ಥಾನದ ಮುಂಭಾಗ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಗೋಡು ತಿಮ್ಮಪ್ಪನವರಿಗೆ ದೇವಸ್ಥಾನದ ಆವರಣದಲ್ಲಿ ನಾಗರಿಕ ಸನ್ಮಾನ ಕಾರ್ಯಕ್ರಮ ಆಯೋಜಿಸಿದ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಹಣ ಪಡೆದು ತಿಂದಿದ್ದಾರೆ ಎಂದು ರತ್ನಾಕರ ಹೊನಗೋಡು ಪದೇಪದೇ ಆರೋಪಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಕಡ್ಲೆ ಹಂಕ್ಲು ಮಾರಿಕಾಂಬ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು ಹೇಳುತ್ತಿದ್ದೇನೆ. ಈ ಕಾರ್ಯಕ್ರಮದಲ್ಲಿ ನಾನಾಗಲಿ, ನಮ್ಮ ಕಾರ್ಯಕರ್ತರಾಗಲಿ ಹಣ ಹೊಡೆದುಕೊಂಡಿಲ್ಲ. ಸಾವಿರಾರು ರೂಪಾಯಿಗಳನ್ನು ನಮ್ಮ ಕೈಯಿಂದಲೇ ಹಾಕಿ ಕಾರ್ಯಕ್ರಮ ನಡೆಸಿದ್ದೇವೆ. ಇಂತಹ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಹಣ ಹೊಡೆದುಕೊಂಡಿದ್ದಾರೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ಎಚ್ಚರಿಸಿದರು.

ಕಾರ್ಯಕ್ರಮಕ್ಕೆ ಒಟ್ಟು ₹5,81,000 ಸಂಗ್ರಹವಾಗಿತ್ತು. ಆದರೆ, ರಸೀದಿ ಪಡೆದುಕೊಂಡಿದ್ದ ಕೆಲವರು ಹಣ ಪಾವತಿಸಲು ಸಾಧ್ಯವಾಗದ ಕಾರಣ ₹1,24,000 ಸಂಗ್ರಹವಾಗಿರಲಿಲ್ಲ. ಅಂತಿಮವಾಗಿ ₹4,57,000 ಮಾತ್ರ ಸಂಗ್ರಹವಾಗಿತ್ತು. ಕಾರ್ಯಕ್ರಮಕ್ಕೆ ಒಟ್ಟು ₹5,58,000 ವೆಚ್ಚವಾಗಿದ್ದು, ಸಂಗ್ರಹವಾದ ಹಣಕ್ಕಿಂತ ಹೆಚ್ಚುವರಿಯಾಗಿ ಒಂದು ಲಕ್ಷ ರೂಪಾಯಿಗೂ ಅಧಿಕ ಹಣವನ್ನು ನಮ್ಮ ಸ್ವಂತ ಖರ್ಚಿನಿಂದ ಹಾಗೂ ಕಾರ್ಯಕರ್ತರ ಸಹಕಾರದಿಂದ ಭರಿಸಲಾಗಿದೆ ಎಂದು ಲೆಕ್ಕದ ವಿವರ ನೀಡಿದರು.

ಕಾಗೋಡು ತಿಮ್ಮಪ್ಪನವರು ನಾಗರಿಕ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸುವ ಸಂದರ್ಭದಲ್ಲಿ ರತ್ನಾಕರ ಹೊನಗೋಡು ಅವರು ಕಾಗೋಡು ಅವರ ಮಗಳನ್ನು ಬಳಸಿಕೊಂಡು ಮೊದಲೇ ತಮ್ಮ ಮನೆಗೆ ಕರೆಸಿಕೊಂಡಿದ್ದರು. ಅಲ್ಲದೆ, ಕಾರ್ಯಕ್ರಮಕ್ಕೆ ತೊಂದರೆ ನೀಡುವುದರ ಜೊತೆಗೆ ಹಲವರಿಗೆ ಕಾರ್ಯಕ್ರಮಕ್ಕೆ ಹೋಗದಂತೆ ಹೇಳಿದ್ದಾರೆ ಎಂದು ಸೋಮಶೇಖರ್ ಆರೋಪಿಸಿದರು.

ನಾವು ನಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಕಾರ್ಯಕ್ರಮ ನಡೆಸಿದ್ದೇವೆ. ಇದರಲ್ಲಿ ಒಂದು ರೂಪಾಯಿಯನ್ನೂ ದುರುಪಯೋಗಪಡಿಸಿಕೊಂಡಿಲ್ಲ. ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು ಈ ಮಾತು ಹೇಳುತ್ತಿದ್ದೇನೆ. ನಮ್ಮ ಮೇಲೆ ಸುಳ್ಳು ಆರೋಪ ಹೊರಿಸಿದವರಿಗೆ ಕಡ್ಲೆ ಹಂಕ್ಲು ಮಾರಿಕಾಂಬ ದೇವಿಯೇ ತಕ್ಕ ಸಾಕ್ಷಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ರತ್ನಾಕರ ಹೊನಗೋಡು ಅವರಂತೆ ಹೊಲಸು ರಾಜಕಾರಣ ಮಾಡುವ ಉದ್ದೇಶ ನಮಗಿಲ್ಲ. ಸುಳ್ಳು ಆರೋಪಗಳನ್ನು ಮಾಡುತ್ತಾ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುವುದು ಸರಿಯಲ್ಲ. ಕಾರ್ಯಕ್ರಮಕ್ಕೆ ನಾವೇ ಕೈಯಿಂದ ಹಣ ಹಾಕಿ ವೆಚ್ಚ ಭರಿಸಿದ್ದರಿಂದ ಪ್ರತ್ಯೇಕವಾಗಿ ಲೆಕ್ಕ ನೀಡಿರಲಿಲ್ಲ ಎಂದು ಸೋಮಶೇಖರ್ ಲಾವಿಗೆರೆ ಸ್ಪಷ್ಟಪಡಿಸಿದರು.

ನಾಗರಿಕ ಸನ್ಮಾನ ಸಮಿತಿಯ ಗೌರವಾಧ್ಯಕ್ಷರಾಗಿದ್ದ ಟಾಕಪ್ಪ ಕಣ್ಣೂರು ಮಾತನಾಡಿ, ನಮ್ಮ ಕೈಯಿಂದಲೇ ಹಣ ಹಾಕಿ ಸಾಕಷ್ಟು ಕಷ್ಟಪಟ್ಟು ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಕಾರ್ಯಕ್ರಮದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇಂತಹ ಉತ್ತಮ ಕಾರ್ಯಕ್ರಮವನ್ನು ಕೆಟ್ಟದಾಗಿ ಬಿಂಬಿಸುವುದು ಸರಿಯಲ್ಲ. ಕಾರ್ಯಕ್ರಮದ ಯಶಸ್ಸಿಗಾಗಿ ಎಲ್ಲರೂ ಶ್ರಮಿಸಿದ್ದು, ಅದರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಖಂಡನೀಯ ಎಂದರು.

ಕಾರ್ಯಕ್ರಮದ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಮೇಶ್ ಮಾತನಾಡಿ, ಯಾವುದೇ ಆರೋಪ ಮಾಡುವ ಮೊದಲು ಅದರ ಸಾಧಕ-ಬಾಧಕ ಹಾಗೂ ಸಂಪೂರ್ಣ ವಿವರಗಳನ್ನು ತಿಳಿದುಕೊಂಡು ಮಾತನಾಡಬೇಕು. ನಾಗರಿಕ ಸನ್ಮಾನ ಕಾರ್ಯಕ್ರಮದ ಖರ್ಚು-ವೆಚ್ಚದ ಸಂಪೂರ್ಣ ವಿವರಗಳನ್ನು ಯಾರು ಬೇಕಾದರೂ ಬಂದು ಕೇಳಿದರೆ ನೀಡಲು ಸಿದ್ಧರಿದ್ದೇವೆ. ಈ ವಿಚಾರದಲ್ಲಿ ಅನಗತ್ಯವಾಗಿ ರಾಜಕಾರಣ ಮಾಡುವುದು ಬೇಡ ಸರಿಯಿಲ್ಲ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಚೇತನ್ ರಾಜ್ ಕಣ್ಣೂರು, ರಮಾನಂದ ಸಾಗರ್, ಲಿಂಗರಾಜ್, ಆನಂದ ಹರಟೆ, ಗಜೇಂದ್ರ ಯಾದವ್, ಕಲೀಮ್ ಮುಲ್ಲಾ ಖಾನ್, ಬಸವರಾಜ್, ರೆಹಮತ್ತುಲ್ಲ, ಶಿವಾನಂದ, ಅಶ್ವಿನ್ ಉಪಸ್ಥಿತರಿದ್ದರು.