Home Blog ಹಕ್ರೆ ಮಲ್ಲಿಕಾರ್ಜುನ ಜಮೀನು ತನಿಖೆ ರಾಜಕೀಯ ಪ್ರೇರಿತ: ಶಾಸಕ ಬೇಳೂರು ವಿರುದ್ಧ ರತ್ನಾಕರ ಹೊನಗೋಡು ಕಿಡಿ..!!

ಹಕ್ರೆ ಮಲ್ಲಿಕಾರ್ಜುನ ಜಮೀನು ತನಿಖೆ ರಾಜಕೀಯ ಪ್ರೇರಿತ: ಶಾಸಕ ಬೇಳೂರು ವಿರುದ್ಧ ರತ್ನಾಕರ ಹೊನಗೋಡು ಕಿಡಿ..!!

18
0

ಸಾಗರ(ಆನಂದಪುರ): ಬಿಜೆಪಿ ಮುಖಂಡ ಹಕ್ರೆ ಮಲ್ಲಿಕಾರ್ಜುನ್ ಅವರ ಜಮೀನಿನ ಕುರಿತು ಮಾತ್ರ ನಿರ್ದಿಷ್ಟವಾಗಿ ತನಿಖೆ ನಡೆಸುವಂತೆ ಸೂಚಿಸಿರುವುದು ರಾಜಕೀಯ ಪ್ರೇರಿತ ಕ್ರಮವಾಗಿದೆ. ಶಾಸಕರು ತಮ್ಮ ಸ್ವಂತ ಹಿತಾಸಕ್ತಿಗಾಗಿ ಅಧಿಕಾರಿಗಳ ಮೂಲಕ ಹೆದರಿಸುವ ಪ್ರಯತ್ನ ಮಾಡಿದರೆ ನಾವು ಹೆದರುವುದಿಲ್ಲ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಕಿಡಿಕಾರಿದರು.

ಇಂದು ಆನಂದಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಜಾಗದಲ್ಲಿ ಸುಮಾರು 14 ಸಾವಿರ ಕುಟುಂಬಗಳು ಜಮೀನುಗಳಲ್ಲಿ ಸಾಗುವಳಿ ಮಾಡಿಕೊಂಡಿದ್ದರೂ, ಹಕ್ರೆ ಮಲ್ಲಿಕಾರ್ಜುನ್ ಅವರ ಜಮೀನಿನ ಕುರಿತು ಮಾತ್ರ ರಾಜಕೀಯ ಕಾರಣಗಳಿಂದ ಸುಳ್ಳು ಅರ್ಜಿ ಸೃಷ್ಟಿಸಿ, ನಿರ್ದಿಷ್ಟವಾಗಿ ತನಿಖೆ ನಡೆಸಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿರುವುದು ಶಾಸಕ ಗೋಪಾಲಕೃಷ್ಣ ಬೇಳೂರು ಅವರ ರಾಜಕೀಯ ಪ್ರೇರಿತ ಕ್ರಮವಾಗಿದೆ ಎಂದು ಆರೋಪಿಸಿದರು.

ಶಾಸಕರ ವಿರುದ್ಧ ಧ್ವನಿ ಎತ್ತುವವರನ್ನು ಹಾಗೂ ರೈತರ ಸಮಸ್ಯೆಗಳ ಪರವಾಗಿ ಮಾತನಾಡುವವರನ್ನು ಹೆದರಿಸಲು ಅಧಿಕಾರಿಗಳ ಮೂಲಕ ತನಿಖೆಯ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ಆದರೆ ಇಂತಹ ಪ್ರಯತ್ನಗಳಿಗೆಲ್ಲ ನಾವು ಹೆದರುವುದಿಲ್ಲ. ನನ್ನ ಮೇಲೂ ಇಂತಹ ಪ್ರಯೋಗಗಳು ನಡೆಯುತ್ತಿವೆ. ಆದರೆ ನಾವು ಯಾವುದೇ ಭ್ರಷ್ಟಾಚಾರ ಅಥವಾ ಅನ್ಯಾಯ ಮಾಡಿಲ್ಲ. ಹಾಗಾಗಿ ನನ್ನ ವಿರುದ್ಧ ಅವರಿಗೆ ಯಾವುದೇ ವಿಚಾರ ಸಿಗುತ್ತಿಲ್ಲ ಎಂದರು.

ಇದರ ಹೊರತಾಗಿ ನಮ್ಮ ಕಣ್ಣೆದುರೇ ಈಗಾಗಲೇ ಅನೇಕ ಸಣ್ಣ ರೈತರನ್ನು ಶಾಸಕರ ರಾಜಕೀಯ ಹಿತಾಸಕ್ತಿಗಾಗಿ ಬಲಿಪಶು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರ ಹಕ್ಕು ಮತ್ತು ಹಿತಾಸಕ್ತಿಗಳ ರಕ್ಷಣೆಗೆ ಬದ್ಧವಾಗಿ ಹೋರಾಟ ನಡೆಸಲಾಗುವುದು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಈ ಕ್ರಮವನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಯ ರೈತರನ್ನು ಒಟ್ಟುಗೂಡಿಸಿ, ಸಂಸದ ಬಿ.ವೈ. ರಾಘವೇಂದ್ರ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ನೇತೃತ್ವದಲ್ಲಿ ಹೋರಾಟ ರೂಪಿಸಲಾಗುವುದು. ರೈತರ ಬದುಕು ಹಾಗೂ ಸಾಗುವಳಿ ಹಕ್ಕಿನ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರೇವಪ್ಪ ಹೊಸಕೊಪ್ಪ, ಶಿವಾನಂದ ಗೇರ್ಬೀಸ್, ಮೋಹನ್ ಕುಮಾರ್, ಚಂದ್ರಶೇಖರ್, ದೇವರಾಜ್ ವರದಮೂಲ, ದೇವು, ಮಹೇಶ್ ಗೌಡ, ಸತೀಶ್, ಪರಮೇಶಿ ಹೊಸಕೊಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.