Home Shivamogga Sagara ಪ್ರತಿಭೆಯ ಕಿಡಿ ಹೊತ್ತಿಸಲು ಸಜ್ಜಾದ ಕೆಪಿಎಸ್; ನ.19ಕ್ಕೆ ತಾಲ್ಲೂಕು ಮಟ್ಟದ ಮಕ್ಕಳ ಕಲರವ..!!

ಪ್ರತಿಭೆಯ ಕಿಡಿ ಹೊತ್ತಿಸಲು ಸಜ್ಜಾದ ಕೆಪಿಎಸ್; ನ.19ಕ್ಕೆ ತಾಲ್ಲೂಕು ಮಟ್ಟದ ಮಕ್ಕಳ ಕಲರವ..!!

4
0

ಸಾಗರ: ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ನವೆಂಬರ್ 19ರಂದು ಗುರುವಾರ ಬೆಳಗ್ಗೆ 10 ಗಂಟೆಗೆ ಆನಂದಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್)ನಲ್ಲಿ ಪ್ರೌಢಶಾಲಾ ವಿಭಾಗದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದಸ್ವಾಮಿ ಸಿ. ತಿಳಿಸಿದ್ದಾರೆ.

ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಸಂಬಂಧ ಕೆಪಿಎಸ್ ಶಾಲಾ ಸಭಾಂಗಣದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರೌಢಶಾಲಾ ವಿಭಾಗದಲ್ಲಿ ಒಟ್ಟು 21 ಸ್ಪರ್ಧೆಗಳು ನಡೆಯಲಿದ್ದು, ತಾಲ್ಲೂಕಿನ ಐದು ವಲಯಗಳಿಂದ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಜೊತೆಗೆ ತೀರ್ಪುಗಾರರು, ಶಿಕ್ಷಕರು ಹಾಗೂ ಪೋಷಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಶೈಕ್ಷಣಿಕ ವಾತಾವರಣ ಹಾಗೂ ಸೌಲಭ್ಯಗಳನ್ನು ಪರಿಚಯಿಸಿಕೊಳ್ಳಲು ಈ ಕಾರ್ಯಕ್ರಮ ಉತ್ತಮ ಅವಕಾಶವಾಗಿದೆ. ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ರೆಕ್ಯೂ ಸಂಸ್ಥೆಯವರು ಕೈಜೋಡಿಸಿರುವುದು ಅಭಿನಂದನೀಯ. ಈ ಕಾರ್ಯ ಇತರರಿಗೂ ಪ್ರೇರಣೆಯಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಎಸ್ ಪ್ರಾಂಶುಪಾಲ ರವಿಶಂಕರ್, ಉಪಪ್ರಾಂಶುಪಾಲ ಎಚ್.ಎಂ. ಈಶ್ವರಪ್ಪ, ಹಿರಿಯ ಮುಖ್ಯ ಶಿಕ್ಷಕ ಧರ್ಮರಾಜ್, ಬಿಇಒ ಕಚೇರಿಯ ಟಿಪಿಇಒ ರಮೇಶ್, ಇಸಿಒಗಳಾದ ವಿ.ಟಿ. ಸ್ವಾಮಿ, ಕುಮಾರಸ್ವಾಮಿ, ಪಾಲಾಕ್ಷಪ್ಪ, ದಿನೇಶ್, ಶಾಲಾಭಿವೃದ್ಧಿ ಸಮಿತಿಯ ಪ್ರಮುಖರಾದ ದೇವೇಂದ್ರಪ್ಪ ಲಕ್ಕವಳ್ಳಿ, ಯೋಗೇಂದ್ರಪ್ಪ, ನೂತನ್, ಉಮೇಶ್, ಜಗನ್ನಾಥ, ರೇಣುಕಾ, ಅಪ್ಸನಾ, ಆಯುಷಾ, ಅಂಜಲಿ, ರಂಜಿತಾ, ಶೃತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನ.17ರಂದು ಸಾಗರದ ಪ್ರಗತಿ ಶಾಲೆಯಲ್ಲಿ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ

ಪ್ರಾಥಮಿಕ ವಿಭಾಗದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನವೆಂಬರ್ 17ರಂದು ಮಂಗಳವಾರ ಸಾಗರದ ಪ್ರಗತಿ ಸಂಯುಕ್ತ ಶಾಲೆಯಲ್ಲಿ ನಡೆಯಲಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಆರ್. ಜಯಂತ್ ಅಧ್ಯಕ್ಷತೆ ವಹಿಸಲಿದ್ದಾರೆ.

ತಾಲ್ಲೂಕಿನ 25 ಕ್ಲಸ್ಟರ್‌ಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಕಿರಿಯ ವಿಭಾಗದಲ್ಲಿ 12 ಹಾಗೂ ಹಿರಿಯ ಪ್ರಾಥಮಿಕ ವಿಭಾಗದಲ್ಲಿ 16 ಸ್ಪರ್ಧೆಗಳು ನಡೆಯಲಿವೆ. ನೂರಾರು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ತೀರ್ಪುಗಾರರಾಗಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಗತಿ ಶಾಲೆಯನ್ನು ಜಾನಪದ ಶೈಲಿಯಲ್ಲಿ ವಿಶೇಷವಾಗಿ ಅಲಂಕರಿಸಲಾಗಿದ್ದು, ಭಾಗವಹಿಸುವ ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮ ಯಶಸ್ವಿಗೊಳಿಸಲು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಸಿದ್ಧತೆ ಕೈಗೊಂಡಿದ್ದಾರೆ.