ಶಿವಮೊಗ್ಗ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್‌ಸ್ಟೇಬಲ್ ಉಳಿಕೆ ಮೂಲ ವೃಂದ ಹಾಗೂ ಸ್ಥಳೀಯ ವೃಂದ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 20ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪರೀಕ್ಷೆಯನ್ನು ಪಾರದರ್ಶಕವಾಗಿ ಹಾಗೂ ಯಶಸ್ವಿಯಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೆಪ್ಟೆಂಬರ್ 20ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಮಧ್ಯಾಹ್ನ 3ರಿಂದ 4.30ರವರೆಗೆ ಪರೀಕ್ಷೆ ನಡೆಯಲಿದೆ. ಶಿವಮೊಗ್ಗ ನಗರದ 29 ಹಾಗೂ ಭದ್ರಾವತಿ ತಾಲೂಕಿನ 5 ಸೇರಿದಂತೆ ಒಟ್ಟು 34 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಲಾಗಿದೆ.
ಉಳಿಕೆ ಮೂಲ ವೃಂದದ (RPC) 11,712 ಹಾಗೂ ಸ್ಥಳೀಯ ವೃಂದದ (KK) 4,118 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಕೇಂದ್ರಗಳ ಒಳಗೆ ವಾಚ್, ಸ್ಮಾರ್ಟ್ ವಸ್ತುಗಳು ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ತರಲು ಸಂಪೂರ್ಣ ನಿಷೇಧವಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸೂಚಿಸಿರುವ ನಿಯಮಾವಳಿಗಳಂತೆ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿದ ಬಳಿಕವೇ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಪ್ರಶ್ನೆ ಪತ್ರಿಕೆ ಸಾಗಾಟಕ್ಕೆ ಭದ್ರತಾ ವ್ಯವಸ್ಥೆ
ಪ್ರಶ್ನೆ ಪತ್ರಿಕೆಗಳ ಸುರಕ್ಷಿತ ಸಾಗಾಟಕ್ಕಾಗಿ ತ್ರಿಸದಸ್ಯ ಸಮಿತಿ ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಶ್ನೆ ಪತ್ರಿಕೆ ವಿತರಣೆಗಾಗಿ ಒಟ್ಟು 11 ಮಾರ್ಗಗಳನ್ನು ರಚಿಸಲಾಗಿದೆ.
ಪರೀಕ್ಷೆ ಮುಗಿದ ಬಳಿಕ ಒಎಂಆರ್ ಬಂಡಲ್‌ಗಳನ್ನು ಜಿಲ್ಲಾ ಖಜಾನೆಯಲ್ಲಿ ಠೇವಣಿಯಿಟ್ಟು, ಕಂಟೇನರ್ ಮೂಲಕ ಬಿಗಿ ಪೊಲೀಸ್ ಎಸ್ಕಾರ್ಟ್ ಭದ್ರತೆಯಲ್ಲಿ ಬೆಂಗಳೂರಿಗೆ ಕಳುಹಿಸಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾರಿಯಪ್ಪ ಅವರು ಪರೀಕ್ಷಾ ಕೇಂದ್ರಗಳ ಭದ್ರತೆ ಹಾಗೂ ಅಭ್ಯರ್ಥಿಗಳ ತಪಾಸಣೆಗೆ ಸಂಬಂಧಿಸಿದಂತೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ ಸೇರಿದಂತೆ ಪರೀಕ್ಷೆಗೆ ನಿಯೋಜಿಸಲಾದ ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು.



