Home Shivamogga ಉತ್ತಮ ಬರವಣಿಗೆಗೆ ಸಾಹಿತ್ಯ-ಕಾವ್ಯದ ಓದು ಅನಿವಾರ್ಯ: ದೀಪಕ್ ಸಾಗರ್..!!

ಉತ್ತಮ ಬರವಣಿಗೆಗೆ ಸಾಹಿತ್ಯ-ಕಾವ್ಯದ ಓದು ಅನಿವಾರ್ಯ: ದೀಪಕ್ ಸಾಗರ್..!!

23
0

ಶಿರಾಳಕೊಪ್ಪ(ಶಿಕಾರಿಪುರ): ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಹಾಗೂ ವಿದ್ಯಾರ್ಥಿಗಳು ಸಾಹಿತ್ಯ ಮತ್ತು ಕಾವ್ಯದ ಓದಿನಿಂದ ದೂರ ಸರಿಯುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಬದುಕಿನ ಸಾರ್ಥಕತೆಗೆ ಹಾಗೂ ಉತ್ತಮ ಬರವಣಿಗೆಗೆ ಕಾವ್ಯದ ಬೆನ್ನೇರುವುದು ಅನಿವಾರ್ಯ ಎಂದು ಹಿರಿಯ ಪತ್ರಕರ್ತ ದೀಪಕ್ ಸಾಗರ್ ಅಭಿಪ್ರಾಯಪಟ್ಟರು.

​ ಶಿಕಾರಿಪುರ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶಿರಾಳಕೊಪ್ಪದ ಶಿವಶರಣೆ ಅಕ್ಕಮಹಾದೇವಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ “ವಿಶೇಷ ಉಪನ್ಯಾಸ” ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಪ್ರಧಾನ ಉಪನ್ಯಾಸ ನೀಡಿದರು.

​ಪತ್ರಿಕೋದ್ಯಮದಲ್ಲಿ ದೀರ್ಘಕಾಲ ಕೆಲಸ ಮಾಡುವ ಅನೇಕ ಪತ್ರಕರ್ತರಿಗೆ ತಮಗೆ ಎಲ್ಲವೂ ತಿಳಿದಿದೆ ಎನ್ನುವ ‘ಒಳಗಿನ ಭ್ರಮೆ’ ಆವರಿಸಿಕೊಳ್ಳುತ್ತಿದೆ. ಯಾವಾಗ ಇಂತಹ ಭ್ರಮೆಗೆ ಬೀಳುತ್ತೇವೆಯೋ, ಆಗ ಹೊರಗಿನ ಪ್ರಪಂಚದಿಂದ ಹೊಸದನ್ನು ಕಲಿಯಲು ಸಾಧ್ಯವಾಗುವುದಿಲ್ಲ. ಪತ್ರಕರ್ತರಾದವರು ಕೇವಲ ರಾಜಕೀಯ ಸುದ್ದಿಗಳ ಬೆನ್ನಲ್ಲೇ ಬೀಳದೆ ಸಿನಿಮಾ ನೋಡಬೇಕು, ಕಾವ್ಯ-ಸಾಹಿತ್ಯ ಓದಬೇಕು ಮತ್ತು ಸಂಗೀತ ಕೇಳಬೇಕು. ಹಾಗಾದಾಗ ಮಾತ್ರ ಪತ್ರಿಕೆಗಳಲ್ಲಿ ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯ ಕೆಲಸಗಳನ್ನು ಸೃಜನಾತ್ಮಕವಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

​ ಇಂದಿನ ಇಂಜಿನಿಯರಿಂಗ್ ಅಥವಾ ತಾಂತ್ರಿಕ ಶಿಕ್ಷಣ ಪಡೆಯುವ ಯುವಕರು “ನಮಗೂ ಸಾಹಿತ್ಯಕ್ಕೂ ಸಂಬಂಧವಿಲ್ಲ” ಎನ್ನುವ ತಪ್ಪು ಕಲ್ಪನೆಯಲ್ಲಿದ್ದಾರೆ. ಕಾವ್ಯವನ್ನು ಓದಿದಾಗ, ಸಂಗೀತವನ್ನು ಕೇಳಿದಾಗ ಆಗುವ ಆನಂದ ಅಥವಾ ದುಃಖ ಕೂಡ ಒಂದು ಉತ್ತಮ ಭಾವನೆಯಾಗಿದೆ. ಸಾಹಿತ್ಯದ ಓದಿನಿಂದ ಮಾತ್ರ ನಮ್ಮ ಬರವಣಿಗೆ ಕಾವ್ಯಾತ್ಮಕ ಹಾಗೂ ಜಗತ್ತಿನಲ್ಲಿ ಶ್ರೇಷ್ಠವೆನಿಸಿಕೊಳ್ಳಲು ಸಾಧ್ಯ. ಕುವೆಂಪು, ಬೇಂದ್ರೆ, ಅಡಿಗರು ಹಳೇಗನ್ನಡವನ್ನು ಓದಿಕೊಂಡೇ ಹೊಸಗನ್ನಡವನ್ನು ಕೃತಿಗಳನ್ನು ರಚಿಸಿ ಕೊಟ್ಟರು ಎಂದರು.

ಹಳೇಗನ್ನಡದಲ್ಲಿ ಒಂದು ಗಣಿತವಿದೆ, ಬದುಕಿಗೆ ಗಣಿತ ಅಗತ್ಯ. ಜಾನಪದದಲ್ಲಿ ಒಡಪುಗಳ ಸೊಗಸಿದೆ ಎಂದರು‌. ಯುವಜನರು ಅಧ್ಯಯನದ ಮೊರೆ ಹೋಗಬೇಕು ಇಂದು ಆಧುನಿಕ ತಂತ್ರಜ್ಞಾನದ ಆಕರ್ಷಣೆಗೆ ಒಳಗಾಗಿ ಎಲ್ಲವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದರು ಡಾ ಚಂದ್ರಶೇಖರ್ ಕಂಬಾರ, ಕವಿ ಗೋಪಾಲಕೃಷ್ಣ ಅಡಿಗ, ರಾಷ್ಟ್ರಕವಿ ಕುವೆಂಪು, ವರಕವಿ ಬೇಂದ್ರೆಯವರ ಕವಿತೆಗಳನ್ನು ವಾಚಿಸಿ ಅದರ ಮಹತ್ವವನ್ನು ಪರಿಚಯಿಸಿದರು.

ಈ ​ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹುಚ್ವರಾಯಪ್ಪ ಮಾತನಾಡಿ ಪತ್ರಕರ್ತರು ವರದಿಯ ಜೊತೆಯಲ್ಲಿ ಅಧ್ಯಯನ ಶೀಲರಾಗಬೇಕು ಹಾಗೆಯೇ ಪತ್ರಕರ್ತರು ಮತ್ತು ಪತ್ರಿಕೆಗಳು ಇಂದಿನ ದಿನದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ವಿವರಿಸಿದರಲ್ಲದೆ ಪತ್ರಿಕೆಗಳನ್ನು ಕೊಂಡು ಓದುವ ಮನೋ ಪ್ರವೃತ್ತಿ ಹೆಚ್ಚಾಗಬೇಕು ಎಂದರು.

ಶಿಕಾರಿಪುರ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ ಇಂದು ಕೌಶಲ್ಯವಿಲ್ಲದೆ ಇರುವ ಶಿಕ್ಷಣ ಹೆಚ್ಚುತ್ತಿದೆ ಕೊಠಡಿಯನ್ನು ಮೀರಿದ ಓದು ಬದುಕಿನಲ್ಲಿ ಬಹಳ ಮುಖ್ಯವಾದದ್ದು ಬರಬರುತ್ತಾ ಶಿಕ್ಷಣ ಮತ್ತು ಬದುಕು ಯಾಂತ್ರಿಕವಾಗುತ್ತಿರುವ ಇಂತಹ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಜೀವನದ ಮಹತ್ವ ಪರಿಚಯಿಸಬೇಕು ಎಂದ ಅವರು ಸಾಹಿತ್ಯದ ಓದಿನಲ್ಲಿ ತೊಡಗಿಕೊಳ್ಳಿ ಎಂದು ಕರೆ ನೀಡಿದರು

ವೇದಿಕೆಯಲ್ಲಿ ಶಿವಶರಣೆ ಅಕ್ಕಮಹಾದೇವಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕುಲಸಚಿವೆ ನಾಗರತ್ನ, ಪ್ರಾಂಶುಪಾಲರಾದ ಜಯ್ಯಪ್ಪ ಅವರು ಅಧ್ಯಕ್ಷೀಯ ನುಡಿಯಾಡಿದರು. NSS ಕಾರ್ಯಕ್ರಮ ಆಯೋಜಕಿ ಲತಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಕೂಡ ನಡೆಯಿತು.ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಮೆರ್ಲಿನ್ ಪ್ರಾರ್ಥಿಸಿದರೇ, ತಾಜುನ್ನಿಸಾ ಸಭಿಕರನ್ನು ಸ್ವಾಗತಿಸಿದರು. ಗೀತಾ ಅವರು ವಂದಿಸಿದರು.

ಜಾಹೀರಾತು