✒️ಅಮಿತ್ ಆರ್ .ಆನಂದಪುರ
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂತ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ವತಿಯಿಂದ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನಕದಾಸರ ಸಮಗ್ರ ಸಾಹಿತ್ಯದ ಅನುವಾದಿತ 40 ಕೃತಿಗಳನ್ನು ಮುಖ್ಯಮಂತ್ರಿ ಬಿಡುಗಡೆಗೊಳಿಸಿದರು. ಇದೇ ವೇಳೆ ಕನಕ ಶಿಲ್ಪವನವನ್ನೂ ಅನಾವರಣಗೊಳಿಸಿ, ಸಮಸಮಾಜದ ಕನಸನ್ನು ಬಿತ್ತಿದ ದಾರ್ಶನಿಕ ಸಂತ ಕನಕದಾಸರ ತತ್ವಾದರ್ಶಗಳನ್ನು ಸ್ಮರಿಸಿದರು.

ಕರ್ನಾಟಕ ಸರ್ಕಾರದ ಸಂತ ಕವಿ ಕನಕದಾಸ ಅಧ್ಯಯನ ಕೇಂದ್ರವು ಕನಕದಾಸರ ಸಮಗ್ರ ಸಾಹಿತ್ಯವನ್ನು ಭಾರತದ 14 ಭಾಷೆಗಳಿಗೆ ಅನುವಾದಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೊಂಡಿದ್ದು, ಈ ಯೋಜನೆಯಲ್ಲಿ ಕನ್ನಡ ಸಂಪಾದಕರಲ್ಲಿ ಒಬ್ಬರಾಗಿ ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಸಿರಾಜ್ ಅಹಮದ್ ಕಾರ್ಯನಿರ್ವಹಿಸಿದ್ದರು.
ಈ ಹಿನ್ನೆಲೆಯಲ್ಲಿ ವಿವಿಧ ಭಾರತೀಯ ಭಾಷೆಗಳ 40 ಕೃತಿಗಳ ಬಿಡುಗಡೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಸಿರಾಜ್ ಅಹಮದ್ ಅವರಿಗೆ ಪುಸ್ತಕ ಪ್ರತಿಯನ್ನು ನೀಡಿ ಗೌರವಿಸಿದ್ದಾರೆ.














